ಕಲಬುರಗಿ: ಯೇಸು ಕ್ರಿಸ್ತ ಅವರು ತನ್ನನ್ನು ಸಿಲುಬೆಗೇರಿಸಿದವರಿಗೂ ಕೂಡಾ ಕೆಟ್ಟದನ್ನು ಬಯಸದೇ, ಅವರನ್ನು ಕ್ಷಮಿಸುವಂತೆ ದೇವರಲ್ಲಿ ಪ್ರಾರ್ಥಿಸಿದ ಮಹಾತ್ಮ. ಎಂಥ ಸಂದರ್ಭದಲ್ಲಿಯೂ ದ್ವೇಷದಿಂದ ದೂರವಿದ್ದ ಅವರು, ಸದಾ ಪ್ರೀತಿ, ಕರುಣೆ, ವಿಧೇಯತೆ, ಶಾಂತಿ, ತ್ಯಾಗದಿಂದ ಅವರು ಮಾದರಿಯಾಗಿದ್ದಾರೆ. ಎಲ್ಲರು ದೇವರ ಮಕ್ಕಳಾಗಿದ್ದು, ಒಂದೇಯಾಗಿದ್ದು ದ್ವೇಷ, ಅಸೂಯೆ, ಹಿಂಸೆ ರಹಿತ ಸಮಾಜದ ನಿರ್ಮಾಣದ ಸಾಮರಸ್ಯ ಸಂದೇಶ ಸಾರಿದ ಅವರ ಜೀವನಕ್ರಮವೇ ಜಗತ್ತಿಗೆ ಮಾದರಿಯಾಗಿದೆ ಎಂದು ಚಿಂತಕ ಪ್ರೊ.ಎಂ.ರೂಬಿನ್ ಅಭಿಪ್ರಾಯಪಟ್ಟರು.
ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ನಗರದ ವಿಜಯ ವಿದ್ಯಾಲಯ ಕಾಲೇಜಿನ ಹಿದುಗಡೆಯಿರುವ ತಮ್ಮ ಮನೆಯ ಆವರಣದಲ್ಲಿನ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಜರುಗಿದ ‘ಕ್ರಿಸ್‍ಮಸ್ ಸೌಹಾರ್ಧ ಕಾರ್ಯಕ್ರಮ’ದಲ್ಲಿ ಸತ್ಕಾರ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲಾ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ.ಸುನೀಲಕುಮಾರ ಎಚ್.ವಂಟಿ ಮಾತನಾಡಿ, ಕ್ರಿಸ್‍ಮಸ್ ಹಬ್ಬ ಕೇವಲ ಆಚರಣೆಯಾಗಿರದೆ, ಯೆಸುವಿನ ತತ್ವಗಳನ್ನು ಅಳವಡಿಸಿಕೊಳ್ಳುವುದಾಗಿದೆ. ಬಡವರು, ನಿರ್ಗತಿಕರು, ಶೋಷಿತರಿಗೆ ಕೈಹಿಡಿದು ನಡೆಸಿದವರು. ಮೇಲು-ಕೀಳು ತಾರತಮ್ಯ ನಿವಾರಣೆ ಶ್ರಮಿಸಿದವರು. ರೋಗಿಗಳು, ವಿಧವೆಯರು, ಅಸಹಾಯಕರಿಗೆ ಕರುಣೆ ತೋರಿದವರು. ಇಂಥ ಯಾರೇ ಮಹನೀಯರನ್ನು ಯಾವುದೇ ಒಂದು ಧರ್ಮಕ್ಕೆ ಸೀಮಿತಗೊಳಿಸದೆ, ಅವರ ತತ್ವ, ಸಂದೇಶಗಳನ್ನು ಅನುಸರಿಸುವುದು ಇಂದಿನ ಅಗತ್ಯವಾಗಿದೆ ಎಂದು ಮಾರ್ಮಿಕವಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ಶಿವಯೋಗೆಪ್ಪಾ ಎಸ್.ಬಿರಾದಾರ, ಹಮೀದ್ ಅಲಿ, ವಿನಿತಾ ಇಸ್ತರ್, ನಿತೀನ್ ಜಾಸ್ಫರ್, ಜರುಶಾ, ಯೋಗೇಶ ಬಿರಾದಾರ, ಮಲ್ಲಪ್ಪ ಭೋತಗಿ, ಶಿವರಾಜ ನೀಲಾ, ಕನಕಪ್ಪ ಬಿಲ್ವಾ, ರವಿ ಓಕಳಿ, ಗೌಡಪ್ಪಗೂಡಡ್ ಪಾಟೀಲ ಸೇರಿದಂತೆ ಇನ್ನಿತರರಿದ್ದರು.