ಕಲಬುರಗಿ: ದ್ವಿಚಕ್ರ ವಾಹನದಲ್ಲಿ ಅಪಘಾತದಿಂದ ಗಾಯಗೊಂಡು ರಸ್ತೆ ಬದಿ ಬಿದ್ದಿದ್ದ ಅಪರಿಚಿತ ವ್ಯಕ್ತಿಗೆ ಅಗತ್ಯವಿರುವ ಚಿಕಿತ್ಸೆಗೆ ನೆರವು ನೀಡುವ ಮೂಲಕ ವೈದ್ಯಕೀಯ ಶಿಕ್ಷಣ, ಕೌಶಲ್ಯಭಿವೃದ್ದಿ , ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಅವರು ಮಾನವೀಯತೆ ಮೆರೆದಿದ್ದಾರೆ.
ಭಾನುವಾರ ಸಚಿವ ಡಾ ಶರಣ್ ಪ್ರಕಾಶ್ ಪಾಟೀಲ್ ಅವರು, ಖಾಸಗಿ ಕಾರ್ಯಕ್ರಮ ನಿಮಿತ್ತ ಕಲಬುರಗಿ ನಗರದ
ಎಲ್.ವಿ.ಕಾಲೇಜು ಬಳಿ ತಮ್ಮ ಕಾರಿನಲ್ಲಿ ಪ್ರಯಾಣ ಬೆಳೆಸುತ್ತಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ದ್ವಿಚಕ್ರ ವಾಹನದಲ್ಲಿ ಅಪಘಾತದಿಂದ ಗಾಯಗೊಂಡು ರಸ್ತೆ ಬದಿ ಕುಸಿದು ಬಿದ್ದಿದ್ದರು.
ಇದೇ ಮಾರ್ಗದಲ್ಲಿ ತಮ್ಮ ಕಾರಿನಲ್ಲಿ ಬರುತ್ತಿದ್ದ ಸಚಿವರು, ಗಾಯಗೊಂಡು ಬಿದ್ದಿದ್ದ ವ್ಯಕ್ತಿಯನ್ನು ಕಂಡು ತಕ್ಷಣವೇ ತಮ್ಮ ಚಾಲಕನಿಗೆ ಕಾರು ನಿಲ್ಲಿಸಲು ಸೂಚಿಸಿದರು.
ಕಾರಿನಿಂದ ಕೆಳಗಿಳಿದು ಬಂದ ಅವರು, ಗಾಯಗೊಂಡಿದ್ದ ವ್ಯಕ್ತಿಯ ಆರೋಗ್ಯ ವಿಚಾರಿಸಿ ತಕ್ಷಣವೇ ಅಸ್ಪತ್ರೆಗೆ ದಾಖಲಿಸುವ ಸಕಲ ವ್ಯವಸ್ಥೆ ಮಾಡಿದರು.
ಈ ವೇಳೆ ಸ್ವತಃ ಸಚಿವರೇ ಸಹಾಯಕ್ಕೆ ಬಂದಿದ್ದನ್ನು ಕಂಡ ಸಾರ್ವಜನಿಕರು ಸಹಾಯಕ್ಕೆ ಧಾವಿಸಿ, ವ್ಯಕ್ತಿಯನ್ನು ತಕ್ಷಣವೇ ಆಟೋದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಕ್ತವಾದ ವ್ಯವಸ್ಥೆ ಕಲ್ಪಿಸಿದರು ಅಲ್ಲದೆ, ಸಂಬಂಧಪಟ್ಟ ವೈದ್ಯರಿಗೆ ದೂರವಾಣಿ ಕರೆ ಮಾಡಿ ಅಗತ್ಯವಿರುವ ಚಿಕಿತ್ಸೆಯನ್ನು ನೀಡಲು ಸೂಚನೆ ಕೊಟ್ಟರು.