ಕಲಬುರಗಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಸಂಸ್ಥಾಪಕ ಅಧ್ಯಕ್ಷ ಮಹಾದಾನಿ, ತ್ಯಾಗವೀರ ಸಿರಸಂಗಿ ಶ್ರೀ ಲಿಂಗರಾಜ ದೇಸಾಯಿ ಅವರ 163ನೇ ರಾಜ್ಯ ಮಟ್ಟದ ಜಯಂತ್ಯುತ್ಸವ ಕಾರ್ಯಕ್ರಮವನ್ನು ಕಲಬುರಗಿಯಲ್ಲಿ ಆಚರಿಸಲಾಗುವುದು ಎಂದು ಸುಲಫಲ ಮಠ ಹಾಗೂ ಶ್ರೀಶೈಲಂನ ಜಗದ್ಗುರು ಡಾ. ಸಾರಂಗಧರ ದೇಶಿಕೇಂದ್ರ ಸ್ವಾಮಿಗಳು ಹಾಗೂ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಶರಣಕುಮಾರ ಮೋದಿ ತಿಳಿಸಿದರು.
ಜ. 10ರಂದು ಬೆಳಗ್ಗೆ 11 ಗಂಟೆಗೆ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಈ ಜಯಂತ್ಯುತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸೋಮವಾರ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.
ಜಗದ್ಗುರು ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿ, ಶರಣಬಸವೇಶ್ವರ ಮಹಾಸಂಸ್ಥಾನದ ಚೇರ್ ಪರ್ಸ್ ನ್ ಮಾತೋಶ್ರೀ ದಾಕ್ಷಾಯಿಣಿ ಶರಣಬಸವಪ್ಪ ಅಪ್ಪ, ಸೊನ್ನ ವಿರಕ್ತಮಠದ ಡಾ. ಶಿವಾನಂದ ಮಹಾಸ್ವಾಮಿಗಳು, ಮಾಡ್ಯಾಳ ಅಲ್ಲಮಪ್ರಭು ದೇವಸ್ಥಾನದ ಪೀಠಾಧಿಪತಿ ಶಿವರಾಯ ಒಡೆಯರ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಅರಣ್ಯ ಖಾತೆ ಸಚಿವ ಹಾಗೂ ಮಹಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಉದ್ಘಾಟಿಸಲಿದ್ದು, ಅಖಿಲ ಭಾರತ ಲಿಂಗಾಯತ ಕುಡು ಒಕ್ಕಲಿಗರ ಮಹಾಸಭಾ ವಿಜಯಪುರ ಅಧ್ಯಕ್ಷ ಬಾಪುಗೌಡ ಪಾಟೀಲ ಶೇಗುಣಸಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಚಿವರಾದ ಪ್ರಿಯಾಂಕ್ ಖರ್ಗೆ, ಡಾ. ಶರಣಪ್ರಕಾಶ ಪಾಟೀಲ, ಎಂ.ಬಿ. ಪಾಟೀಲ, ಶರಣಬಸಪ್ಪಗೌಡ ದರ್ಶನಾಪುರ, ಕೆಕೆಆರ್ಡಿಬಿ ಅಧ್ಯಕ್ಷ ಡಾ. ಅಜಯಸಿಂಗ್, ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್. ಪಾಟೀಲ, ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಬಾಬುಗೌಡ ಪಾಟೀಲ, ಗುರುಲಿಂಗಪ್ಪಗೌಡ ಪಾಟೀಲ ಆಂದೋಲಾ, ಡಾ.ರಾಜಶೇಖರ ಪಾಟೀಲ ಹೆಬಳಿ, ಶರಣಪ್ಪ ವಾಡಿ, ತಮ್ಮಣ್ಣಗೌಡ ಪಾಟೀಲ ಇತರರಿದ್ದರು.
ಸಿರಸಂಗಿ-ನವಲಗುಂದ ಸಂಸ್ಥಾನದ ಕೊನೆಯ ಅರಸ ಸಿರಸಂಗಿ ಲಿಂಗರಾಜ ದೇಸಾಯಿ ಮಾಡಿದ ಮಹಾದಾನ, ತ್ಯಾಗ ಮತ್ತು ಜನೋಪಕಾರ್ಯಗಳು ಇಂದಿಗೂ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿವೆ. ಅಂಥವರನ್ನು ಸ್ಮರಿಸುವ ಮೂಲಕ ಸಮಾಜದಲ್ಲಿ ಅಭಿವೃದ್ಧಿ ಕಾಣಬೇಕು. -ಗುರುಲಿಂಗಪ್ಪಗೌಡ ಮಾಲಿಪಾಟೀಲ, ಆಂದೋಲಾ.