ಕಲಬುರಗಿ: ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ವೇದಿಕೆ ವತಿಯಿಂದ ಬುಧವಾರದಂದು ನಗರದ ವಿಶಾಲ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವಚನ ದಿನಾಚರಣೆ ಹಾಗೂ ಲಿಂ.ಸಿದ್ದಣ್ಣ ಮೇಳಕುಂದಿ ಸ್ಮರಣಾರ್ಥ ‘ವಚನ ಸಾಹಿತ್ಯ ಮತ್ತು ಮೂಢನಂಬಿಕೆಗಳು’ ಕುರಿತ ಕಾರ್ಯಕ್ರಮ ಜರುಗಿತು.
ವಿಷಯ ಮಂಡಿಸಿದ ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆ ಮಾತನಾಡಿ, ಇಂದಿನ ಧಾರ್ಮಿಕ ಗುತ್ತಿಗೆದಾರರು ದೇವರು, ಧರ್ಮದ ಹೆಸರಿನಲ್ಲಿ ಭಯ ಹುಟ್ಟಿಸುವ ಕೆಲಸವನ್ನು ಮಾಡುತ್ತಿದ್ದು, ಈ ಭಯದಿಂದ ಪಾರಾಗಿ ದಯೆ ಅಳವಡಿಸಿಕೊಳ್ಳುವುದನ್ನು ಬಸವಾದಿ ಶಿವಶರಣರು ಕಲಿಸಿದರು ಎಂದು ತಿಳಿಸಿದರು.
ಜಾತಿಯತೆ, ಮೂಢನಂಬಿಕೆ, ಕಂದಾಚಾರದಿಂದ ಪಾರಾಗಲು ಯುವಕರು ಮುಂದಾಗಬೇಕು. ಯಾವುದನ್ನೂ ಪ್ರಶ್ನಿಸದೆ ಒಪ್ಪಿಕೊಳ್ಳಬಾರದು. ಪ್ರಶ್ನಿಸುವ ಮನಸ್ಸು ಬೆಳೆಸಿಕೊಳ್ಳಬೇಕು ಎಂದು ವಿವರಿಸಿದರು.
ಅತಿಥಿಯಾಗಿ ಆಗಮಿಸಿದ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿದರು. ನಿವೃತ್ತ ಪ್ರಾಚಾರ್ಯ ಕೆ.ವಿಶ್ವನಾಥ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಜೀವಿ ವಿಮಲಾ ಮೇಳಕುಂದಿ, ಕದಳಿ ವೇದಿಕೆ ಸಂಚಾಲಕಿ ಆಶಾದೇವಿ ಖೂಬಾ, ಕಾಲೇಜಿನ ಪ್ರಿನ್ಸಿಪಾಲ್ ವೀರೇಶ ಕಲಕೋರಿ, ಯುವ ಅಧ್ಯಕ್ಷ ಶಿವರಾಜ ಅಂಡಗಿ, ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರೊ.ಕುಪೇಂದ್ರ ಪಾಟೀಲ ವೇದಿಕೆ ಮೇಲಿದ್ದರು.
ಪ್ರಮುಖರಾದ ಡಾ.ಶರಣಬಸಪ್ಪ ವಡ್ಡನಕೇರಿ, ಶಿವಾನಂದ ಮಠಪತಿ, ಸತೀಶ ಸಜ್ಜನ್, ಮಹಾಂತೇಶ ಕಲಬುರಗಿ, ಪ್ರಸನ್ನ ವಾಂಜರಖೇಡೆ, ಶ್ರೀಕಾಂತ ಪಾಟೀಲ ತಿಳಗೂಳ, ಶಿವಣ್ಣ ಇಜೇರಿ, ಡಾ.ಸತೀಶ ಮೇಳಕುಂದಿ, ಪ್ರೊ.ಕೆ.ಎಸ್.ಬಗಾಲೆ ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಭಾಗವಹಿಸಿದ್ದರು.