ನಾಲವಾರ ಕೋರಿಸಿದ್ದೇಶ್ವರ ಮಠದ ತೋಟೇಂದ್ರ ಶಿವಾಚಾರ್ಯ ಸ್ವಾಮೀಜಿಗಳು ಶಹಾಪುರದ ಸಾರ್ವಜನಿಕ ಸಭೆಯೊಂದರಲ್ಲಿ ಕತೆಯೊಂದನ್ನು ಹೇಳಿದ್ದರು. ಅದು ಈಗ ಅತ್ಯಂತ ಪ್ರಸ್ತುತ ಎಂದು ಇಂದಿನ ಪ್ರಜಾವಾಣಿ ಪತ್ರಿಕೆಯ ಸಂಪಾದಕೀಯ ಓದಿದಾಗ ಅರಿವಿಗೆ ಬಂತು. ಅದು ಹೀಗಿದೆ:
ಒಬ್ಬ ಆಗರ್ಭ ಶ್ರೀಮಂತನೊಬ್ಬ ತನ್ನ ಕುದುರೆಯ ಮೇಲೆ ಕುಳಿತು ಭರ್ಜರಿಯಾಗಿ ಹೊರಟಿದ್ದನಂತೆ. ದೂರ ಹೋಗುತ್ತಲೆ, ಅಲ್ಲೆಲ್ಲೋ ದೂರದಲ್ಲೊಂದು ದೊಡ್ಡು ಗುಂಪು ನಿಂತದ್ದು ಕಾಣಿಸಿತು. ಕುತೂಹಲಕ್ಕಾಗಿ ಅಲ್ಲಿ ಹೋಗಿ ವಿಚಾರಿಸಲಾಗಿ ಅವರೆಲ್ಲ ಡಾಕ್ಟರೇಟ್ ಪದವಿಯನ್ನು ಪಡೆಯಲು ನಿಂತದ್ದು ಗೊತ್ತಾಯಿತು. ಕುತೂಹಲಕ್ಕಾಗಿ ಈತ ಕೇಳಿದಾಗ 500/- ಗೆ ಒಂದು ಡಾಕ್ಟರೇಟ್ ಕೊಡುತ್ತಾರೆ ಎಂದು ಗೊತ್ತಾಯಿತು.
ಒಡನೆಯೇ ಏನನ್ನೂ ಯೋಚಿಸದೆ ಅವರೊಂದಿಗೆ ಸರತಿ ಸಾಲಿನಲ್ಲಿ ನಿಂತು ಡಾಕ್ಟರೇಟ್ ಪಡೆದು, ಆ ಪದವಿ ಕೊರಳಲ್ಲಿ ಹಾಕಿಕೊಂಡು ಮುನ್ನಡೆದನಂತೆ. ಕುದುರೆಯ ಮೇಲೆ ದೂರ ಬಹುದೂರ ಸಾಗಿದಾಗ ಮತ್ತೊಂದು ಯೋಚನೆ ಹೊಳೆಯಿತಂತೆ. ಹೇಗೂ ನನಗೆ ಒಂದು ಡಾಕ್ಟರೇಟ್ ಪಡೆದಾಗಿದೆ. ನನ್ನ ಕುದುರೆಗೂ ಒಂದು ಡಾಕ್ಟರೇಟ್ ಪಡೆದರೆ ? ಎಂದು ಆಲೋಚನೆ ಹೊಳೆದದ್ದೆ ತಡ , ತಾನು ಹೋಗುವ ದಾರಿಯನ್ನು ಬಿಟ್ಟು ಹಿಂದಕ್ಕೆ ವಾಪಸ್ ಬಂದು. ಆ ಡಾಕ್ಟರೇಟ್ ಕೊಡುವ ಸ್ಥಳದಲ್ಲಿ ಮತ್ತೆ ಕ್ಯೂ ನಿಂತನಂತೆ.
ಈ ಶ್ರೀಮಂತನ ಪಾಳಿ ಬಂದಾಗ ಡಾಕ್ಟರೇಟ್ ಕೊಡುವವರೆ ಆಶ್ಚರ್ಯಗೊಂಡು, ” ತಮಗೆ ಆಗಲೇ ನೀಡಿದ್ದೇವಲ್ಲ ! ಮತ್ತೇಕೆ ಬಂದಿರಿ ? ಎಂದು ಪ್ರಶ್ನಿಸಲಾಗಿ. ಈತ ” ನನ್ನ ಕುದುರೆಗೂ ಒಂದು ಡಾಕ್ಟರೇಟ್ ಕೊಡಿ ಎಂದು ಐದು ನೂರು ರೂಪಾಯಿಯ ನೋಟು ಅವರತ್ತ ಚಾಚಿದನಂತೆ. ಆಗ ಅವರು ಆಕ್ಷಣ ಸಹಜವೆಂಬಂತೆ.
” ನಾವು ಡಾಕ್ಟರೇಟ್ ಕೊಡುವುದು ಕತ್ತೆಗಳಿಗೆ ಮಾತ್ರ” ಎಂದು ಹೇಳಿ ಮುಖ ತಿರಿವಿ ಡಾಕ್ಟರೇಟ್ ಕೊಡಲು ನಿರಾಕರಿಸಿದರಂತೆ.