ಶಹಾಬಾದ: ಹಿಂದುಳಿದ, ಕೊಳಚೆ ಪ್ರದೇಶದ ಭಾಗಗಳಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಶಿಕ್ಷಣ ಕಲಿಕೆ ಸವಾಲಾಗಿ ಪರಿಣಮಿಸಿದ್ದು, ಇಂತಹ ಸವಾಲನ್ನು ಸುಲಭವಾಗಿ ಎದುರಿಸಲು ಸ್ಮಾರ್ಟ್ ಕ್ಲಾಸ್ ಸಹಕಾರಿ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮುಡು ಅಭಿಪ್ರಾಯಪಟ್ಟರು.
ಅವರು ಹನುಮಾನ ನಗರದಲ್ಲಿರುವ ಆದಿಜಾಂಬವ ಕಲ್ಯಾಣ ಸಂಘದ ಕರ್ನಾಟಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಸೇಲ್ಕೊ ಸೋಲಾರ್ ಕಂಪನಿ ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ನಿರ್ಮಿಸಿರುವ ಸ್ಮಾರ್ಟ್ ಕ್ಲಾಸ್‍ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಸನ್ನಿವೇಶದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಪ್ರಗತಿಯನ್ನು ಸಾಧನೆ ಮಾಡಬೇಕಾದ ಅನಿರ್ವಾಯತೆ ಇದೆ, ಶಿಕ್ಷಣದಿಂದ ಮಾತ್ರ ನಮ್ಮ ಭವಿಷ್ಯದ ಬದುಕು ಭದ್ರಪಡಿಸಲು ಸಾಧ್ಯ ಎಂದು ಹೇಳಿದರು.
ಸೇಲ್ಕೊ ಸೋಲಾರ್ ಕಂಪನಿಯ ವ್ಯವಸ್ಥಾಪಕ ಯಲ್ಲಾಲಿಂಗ ದೊಡ್ಡಮನಿ ಮಾತನಾಡಿ, ನಮ್ಮ ಸಂಸ್ಥೆ ಕಳೆದ ಹಲವಾರು ವರ್ಷಗಳಿಂದ ವಿಶೇಷವಾಗಿ ನಗರದ ಕೊಳಚೆ ಪ್ರದೇಶ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಮಾಡಿದೆ, ಮುಂಬರುವ ವರ್ಷಗಳಲ್ಲಿ ತಾಲೂಕಿನ ಇನ್ನೂ ಕೆಲವು ಶಾಲೆಗಳಿಗೆ ಈ ಸೌಲಭ್ಯವನ್ನು ಮಾಡಲಾಗುವುದು ಮತ್ತು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಕೃಷ್ಣಮೂರ್ತಿ ಮಾತನಾಡಿ, ತಾಲೂಕಿನಲ್ಲಿ ಹಲವಾರು ಹಿಂದುಳಿದ ಶಾಲೆಗಳ ಮಕ್ಕಳಿಗೆ ಡೆಸ್ಕ್ ವ್ಯವಸ್ಥೆ ಮತ್ತು ಮಹಿಳೆಯರಿಗೆ ಸಾಲ- ಸೌಲಭ್ಯ ಕಲ್ಪಿಸಿ ಸ್ವಾವಲಂಬಿಯನ್ನಾಗಿ ಮಾಡಲಾಗುತ್ತಿದೆ ಎಂದರು
ಆದಿಜಾಂಬವ ಕಲ್ಯಾಣ ಸಂಘದ ಅಧ್ಯಕ್ಷ ಎ.ಎಚ್. ನಾಗೇಶ, ಎಸ್.ಎಸ್.ದಿವಾಕರ ವೇದಿಕೆ ಮೇಲೆ ಇದ್ದರು.
ಎಸ್.ಎನ್.ಹೊನಗುಂಟಿಕರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಪಿ.ಎಸ್.ಕೋಕಟನೂರ ನಿರೂಪಿಸಿದರು, ಎಚ್,ಎಸ್. ಮಟ್ಟಿ ವಂದಿಸಿದರು.
ಅಣವೀರ ಇಂಗಿನಶೆಟ್ಟಿ, ಶರಣು ಪಗಲಾಪುರ, ಸೂರ್ಯಕಾಂತ ಕೋಬಾಳ, ಮಲ್ಲಿಕಾರ್ಜುನ ಚಟ್ನಹಳ್ಳಿ, ಬಾಲರಾಜ ಮಾಚನೂರ, ಡಿವಿ ಅಂಗಡಿ, ನಾಗಪ್ಪ ಬೆಳಮಗಿ, ಭೀಮರಾಯ ಮುದ್ದನಾಳ, ಶಿವರಾಜ್ ಕೋರೆ, ಶ್ರೀಮತಿ ಲಕ್ಷ್ಮೀಬಾಯಿ, ಮುಖ್ಯ ಗುರುಗಳಾದ ಶ್ರೀಶೈಲ್ ಮಠ, ಶಂಕರ ಹೈಯಾಳ್ಕರ, ಬೀರಪ್ಪ ಕಳ್ಳಿ ಹಾಗೂ ಆದಿ ಜಾಂಬವ ಕಲ್ಯಾಣ ಸಂಘದ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಹಾಗೂ ಶಾಲೆಯ ಮಕ್ಕಳು ಉಪಸ್ಥಿತರಿದ್ದರು.