ಸುರಪುರ: ಆಗಸ್ಟ್ 27 ರಂದು ತಾಲ್ಲೂಕಿನ ಮಲ್ಲಿಬಾವಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಮದ್ಹ್ಯಾನ ಶಾಲೆಗೆ ಬೀಗ ಹಾಕಿ ಮಕ್ಕಳನ್ನು ಹೊರಗಡೆ ಕೂಡಿಸಿ ಬಂದಿದ್ದ ಘಟನೆಗೆ ಸಂಬಂಧಿಸಿ ಶಿಕ್ಷಕ ವಿಜಯಕುಮಾರ್ ಎಂಬುವವರನ್ನು ಅಮಾನತ್ತು ಮಾಡಿ ಸರಕಾರ ಆದೇಶ ಹೊರಡಿಸಿತ್ತು.ಇದನ್ನು ವಿರೋಧಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಕ್ರಾಂತಿಕಾರಿ ಬಣ) ಸದಸ್ಯರು ಅಮಾನತ್ತು ಆದೇಶ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.
ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದಿದ್ದು,ಮಲ್ಲಿಬಾವಿ ಶಾಲೆಯ ಮುಖ್ಯಗುರು ವಿಜಯಕುಮಾರನನ್ನು ಉದ್ದೇಶಪೂರ್ವಕವಾಗಿ ಅಮಾನತ್ತು ಮಾಡಲಾಗಿದೆ.ಅಲ್ಲದೆ ತಾಲ್ಲೂಕಿನ ರತ್ತಾಳ,ಕರ್ನಾಳ ಈಗ ಮಲ್ಲಿಬಾವಿ ಗ್ರಾಮದ ದಲಿತ ಶಿಕ್ಷಕರ ಮೇಲೆ ಉದ್ದೇಶಪೂರ್ವಕವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಅಲ್ಲದೆ ಮಲ್ಲಿಬಾವಿ ಘಟನೆಗೆ ಕಾರಣವಾದ ಶಿಕ್ಷಕ ಮಲ್ಲಿಕಾರ್ಜುನ ಉದ್ದಾರನನ್ನು ಅಮಾನತ್ತುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.ಹಾಗು ನಗರದ ದಿವಳಗುಡ್ಡದ ಹಳೆ ಸರಕಾರಿ ಶಾಲೆಯ ಕಟ್ಟಡದ ಮೈದಾನದಲ್ಲಿ ಖಾಸಗಿಯವರು ನಿರ್ಮಿಸುತ್ತಿರುವ ಮಳಿಗೆಗಳ ಕಾಮಗಾರಿ ತಡೆಹಿಡಿಯಬೇಕು ಮತ್ತು ಶಾಲೆಗೆ ತಡೆಗೋಡೆ ನಿರ್ಮಾಣ ಮಾಡಬೇಕೆಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದು.ಒಂದು ವೇಳೆ ಈ ನಮ್ಮ ಬೇಡಿಕೆಯನ್ನು ಈಡೇರಿಸದಿದ್ದಲ್ಲಿ ಈ ತಿಂಗಳ ೬ನೇ ತಾರೀಖಿನಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಬೀಗಮುದ್ರೆ ಹಾಕಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.