ಕಲಬುರಗಿ: ನಗರದ ಹೊರವಲಯದಲ್ಲಿನ ಕೋಟನೂರ್(ಡಿ) ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಗೆ ಅವಮಾನ ಮಾಡಿದವರನ್ನು ಪೋಲಿಸರು ತಕ್ಷಣವೇ ಬಂಧಿಸಬೇಕು. ಇಲ್ಲದೇ ಹೋದಲ್ಲಿ ಬಿಜೆಪಿಯು ಉಗ್ರ ಹೋರಾಟವನ್ನು ರೂಪಿಸಲಿದೆ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ರಾಜಕುಮಾರ್ ಪಾಟೀಲ್ ತೆಲ್ಕೂರ್ ಅವರು ಎಚ್ಚರಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರೇ ಅಪಮಾನ ಮಾಡಿದರೂ ಸಹ ಅದು ಖಂಡನಾರ್ಹ. ಕೂಡಲೇ ಆರೋಪಿಗಳು ಯಾರೇ ಆಗಿದ್ದರೂ ಸಹ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ದೇಶಕ್ಕೆ ಸಂವಿಧಾನ ಕೊಟ್ಟ ಮಹಾಪುರುಷ ಡಾ. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವಂತಹ ಕೆಲಸ ಆಗಬೇಕು. ಅಪಮಾನ ಮಾಡುವುದು ಸರಿಯಲ್ಲ ಎಂದು ಹೇಳಿದ ಅವರು, ಮಹಾಪುರುಷರಿಗೆ ಜಿಲ್ಲೆಯಲ್ಲಿ ಅಪಮಾನ ಮಾಡುವಂತಹ ಕೃತ್ಯಗಳು ನಿರಂತರವಾಗಿ ನಡೆಯುತ್ತಿದ್ದರೂ ಸಹ ಅವುಗಳನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರವು ವಿಫಲವಾಗಿದೆ ಎಂದು ಆರೋಪಿಸಿದರು.
ಈ ಹಿಂದೆ ಚಿತ್ತಾಪುರದಲ್ಲಿ ಜಗಜ್ಯೋತಿ ಬಸವೇಶ್ವರರ ಪುತ್ಥಳಿಗೆ ಅವಮಾನ ಮಾಡಲಾಯಿತು. ಜೇವರ್ಗಿ ತಾಲ್ಲೂಕಿನ ಮರ್ಯಾದಾ ಪುರುಷೋತ್ತಮ ರಾಮನ ಪ್ಲೆಕ್ಸ್‍ಗೆ ಅವಮಾನ ಮಾಡಲಾಯಿತು. ಆದಾಗ್ಯೂ, ಸರ್ಕಾರವು ಸೂಕ್ತ ಕ್ರಮಗಳನ್ನು ಕೈಗೊಳ್ಳಲಿಲ್ಲ. ಈಗ ಅಂಬೇಡ್ಕರ್ ಅವರ ಪುತ್ಥಳಿಗೆ ಅವಮಾನ ಮಾಡಲಾಗಿದೆ. ಯಾರೇ ಮಹಾಪುರುಷರು ಇದ್ದರೂ ಸಹ ಅವರಿಗೆ ಅವಮಾನ ಮಾಡುವಂತಹ ಕೆಲಸ ಆಗಬಾರದು. ಹಾಗೊಂದು ವೇಳೆ ಮಾಡಿದ್ದೇ ಆದಲ್ಲಿ ಅಂತಹ ದುಷ್ಕರ್ಮಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಬಿಜೆಪಿ ನಗರ ಜಿಲ್ಲಾ ನೂತನ ಅಧ್ಯಕ್ಷ ಚಂದು ಪಾಟೀಲ್ ಅವರು ಮಾತನಾಡಿ, ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಗೆ ಅವಮಾನ ಮಾಡಿದ್ದು ಖಂಡನಾರ್ಹ. ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಘಟನೆಯನ್ನು ಖಂಡಿಸಿ ಎಲ್ಲೆಡೆ ಪ್ರತಿಭಟನೆಗಳು ಆರಂಭಗೊಂಡಿವೆ. ಜಿಲ್ಲಾಡಳಿತವು ಕೂಡಲೇ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಬೇಕು. ಅಲ್ಲಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಟನೆಯಿಂದ ತೊಂದರೆ ಆಗುತ್ತಿದೆ. ಇಂತಹ ಸಮಸ್ಯೆಗಳನ್ನು ಪ್ರತಿಭಟನೆಕಾರರು ಅರಿತುಕೊಂಡು ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಶಾಂತಿಯುತ ಪ್ರತಿಭಟನೆಯನ್ನು ಮಾಡಬೇಕು. ಪೋಲಿಸರು ಒಂದು ವೇಳೆ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಲ್ಲಿ ವಿಫಲವಾದರೆ ಬಿಜೆಪಿಯೂ ಸಹ ಹೋರಾಟವನ್ನು ಮಾಡಲಿದೆ ಎಂದು ಅವರು ಎಚ್ಚರಿಸಿದರು.
ಮಾಜಿ ಶಾಸಕ ದತ್ತಾತ್ರೇಯ್ ಪಾಟೀಲ್ ರೇವೂರ್ ಅವರು ಮಾತನಾಡಿ, ಕೋಟನೂರ್ (ಡಿ) ಘಟನೆಯು ಖಂಡನಾರ್ಹ. ಆರೋಪಿಗಳು ಯಾರೇ ಆದರೂ ಕೂಡಲೇ ಅವರನ್ನು ಬಂಧಿಸಿ ಕಠಿಣ ಕಾನೂನಿನ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.