ಯಾದಗಿರಿ; ಪ್ರಾಮಾಣಿಕ ವಾಗಿ ಮಾಡುವ ಕಾಯಕದಲ್ಲಿ ತೊಡಗಿಸಿಕೊಂಡು ಜನತೆಗೆ ಪ್ರಾಮಾಣಿಕ ಸೇವೆ ಮಾಡಿಕೊಂಡು ಹೋಗುವುದೇ ನಿಜವಾದ ಗುರು ವಂದನೆ ಎಂದು ಹೆಡಗಿಮುದ್ರ ಶಾಂತ ಶಿವಯೋಗಿಶ್ವರ ಮಠದ ಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ದಯಾನಂದ ಪ್ರಾಥಮಿಕ ಶಾಲೆಯ ೧೯೮೯-೯೦ನೇ ಸಾಲಿನ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಗುರುಗಳಿಗೆ ಸಲ್ಲಿಸುವ ವಂದನೆ ಎಂದರೆ ಅದು ಅವರು ಕಲಿಸಿದ ವಿದ್ಯೆಯನ್ನು ಸಮಾಜಕ್ಕೆ ಬಳಕೆ ಮಾಡಿಕೊಳ್ಳಬೇಕೆಂದು ಅವರು ಹೇಳಿದರು. ವಿದ್ಯಾರ್ಥಿಗಳೇ ಸೇರಿಕೊಂಡು ಗುರುವಂದನೆ ಆಯೋಜಿಸಿರುವುದು ಶ್ಲಾಘನೀಯ ಇಂತಹ ಕಾರ್ಯಕ್ರಮಗಳಿಂದ ಎಲ್ಲ ಹಳೆಯ ಮಿತ್ರರು ಗುರು ಶಿಷ್ಯರು ಒಗ್ಗೂಡಿ ಒಂದೆಡೆ ಸೇರಿ ವಿಚಾರ ವಿನಿಮಯ ಮಾಡಿಕೊಂಡು ಬದುಕಿನ ಯಶಸ್ಸನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ನಡೆಸಿರುವುದು ಮಾದರಿಯಾಗಿದೆ ಎಂದು ಅವರು ನುಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಿವೃತ್ತ ಶಿಕ್ಷಕ ಕೊಟ್ಟುರೇಶ್ವರ ಹಿರೇಮಠ, ದಯಾನಂದ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ವಿವಿಧ ಹುದ್ದೆಗಳು ಅಲಂಕರಿಸಿ ಶಿಕ್ಷಕರ ದಿನಾಚರಣೆ ನಿಮಿತ್ತ ಗುರುವಂದನೆ ಕಾರ್ಯಕ್ರಮ ಆಯೋಜಿಸಿ ಕಲಿಸಿದ ಗುರುಗಳಿಗೆ ನಿಜಗೌರವ ಸಲ್ಲಿಸಿರುವುದು ಸಂತಸ ತಂದಿದೆ ಆದರೆ ನಿಮ್ಮ ನಿಮ್ಮ ವೃತ್ತಿಯಲ್ಲಿ ಪ್ರಾಮಾಣಿಕತೆಯಿಂದ ನಾಲ್ಕು ಜನರಿಗೆ ಒಳ್ಳೆಯದು ಮಾಡಿ ನ್ಯಾಯ ಒದಗಿಸಿದರೆ ಅದು ಕಲಿಸಿದ ಗುರುಗಳಿಗೆ ಕೊಡುವ ನಿಜವಂದನೆ ಎಂದು ಹೇಳಿದರು. ಶಾಲೆಯ ಹಳೆಯ ವಿದ್ಯಾರ್ಥಿಗಳ ಪರವಾಗಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಸಿದ್ದಪ್ಪ ಹೊಟ್ಟಿ ಮಾತನಾಡಿ ನಗರದಲ್ಲಿ ೧೯೮೯ರ ಸುಮಾರಿಗೆ ಇದ್ದ ಕೇವಲ ೩ ಶಾಲೆಗಳ ಪೈಕಿ ಸರ್ಕಾರಿ ಪಾಠಶಾಲೆ, ಎಂಆರ್‌ಎಂ ಶಾಲೆ ಹಾಗೂ ದಯಾನಂದ ಶಾಲೆಗಳೇ ನಗರದ ಶಿಕ್ಷಣ ಕೇಂದ್ರವಾಗಿದ್ದವು. ಇಲ್ಲಿ ಓದಿದವರೆಲ್ಲರೂ ಇಂದು ನಾಡಿನಾದ್ಯಂತ ಬೆಳೆದು ನಿಂತಿರುವುದು ಶಾಲೆಯ ಹೆಮ್ಮೆ ಎಂದು ನುಡಿದರು.
ನಿವೃತ್ತ ಶಿಕ್ಷಕ ಅಯ್ಯಣ್ಣ ಹುಂಡೇಕಾರ್ ಮಾತನಾಡಿ ದಯಾನಂದ ಶಾಲೆ ಸಂಸ್ಥಾಪಕ ಈಶ್ವರಲಾಲ್ ಬಟ್ಟಡ ಅವರು ಸದುದ್ದೇಶದಿಂದ ಆರಂಭಗೊಂಡ ಶಾಲೆ ಇಂದು ಸಾಕಷ್ಟು ಪ್ರಜೆಗಳನ್ನು ನಾಡಿಗೆ ಕೊಟ್ಟಿದ್ದು ಹೆಮ್ಮೆಯ ಸಂಗತಿಯಾಗಿದೆ ಆದರೆ ಶಾಲೆ ಇನ್ನಷ್ಟು ಬೆಳವಣಿಗೆ ಹೊಂದಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.
ಹಳೆಯ ವಿದ್ಯಾರ್ಥಿಗಳಾದ ಗೌರಾದೇವಿ ಲದ್ದಿ, ಸಂಗಮೇಶ ದೇಸಾಯಿ, ಮಹೇಶ ಚಂದನಕರ್ ಅನಿಸಿಕೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರುಗಳಿಗೆ ಗೌರವಿಸಿ ಗುರುವಂದನೆ ಸಲ್ಲಿಸಲಾಯಿತು.
ಅಧ್ಯಕ್ಷತೆಯನ್ನು ಸಂಸ್ಥೆ ಅಧ್ಯಕ್ಷ ಓಂಪ್ರಕಾಶ ಬಟ್ಟಡ ವಹಿಸಿದ್ದರು. ಅತಿಥಿಗಳಾಗಿ ಬಿಆರ್.ಪಿ. ಬಂದಪ್ಪ ಐರೆಡ್ಡಿ, ಸಿಆರ್‌ಪಿ. ರವಿಚಂದ್ರ ನಾಯ್ಕಲ್, ಶಾಲೆಯ ಮುಖ್ಯ ಗುರು ಬಸವರಾಜ ಅಥರ್ಗಾ, ನಿವೃತ್ತ ಶಿಕ್ಷಕ ರಾಚಣ್ಣ ಶಹಾಪೂರಕರ್, ತಿಪ್ಪಣ್ಣ ಹೂಗಾರ, ಲಿಂಗಣ್ಣ ಕಟ್ಟಿಮನಿ, ಮಲ್ಲಯ್ಯ ಮಗ್ಗಾ, ಶಿಕ್ಷಕರಾದ ಮಹಾದೇವಪ್ಪ ಅಂಬಿಗೇರ, ಗೀತಾ ದೊಡ್ಡಮನಿ, ಶಿವಶರಣ್ಪ ಕುಕನೂರ, ಬಸಪ್ಪ ಬಾಗೇವಾಡಿ, ಜ್ಯೋತಿ ಶೀಲವಂತ, ವಿಜಯಲಕ್ಷ್ಮೀ ಮೋದಿ, ಅಂಬ್ರೆಸ್ ಬಿಚ್ಚಾಲಿ ಇದ್ದರು.
ಗೀತಾ ಜೋಷಿ ಪ್ರಾರ್ಥಿಸಿದರು. ಶರಣಗೌಡ ಅಲ್ಲಿಪುರ ವಕೀಲರು ಸ್ವಾಗತಿಸಿದರು. ಡಾ. ಅನಿಲ್ ಕುಮಾರ ಬೆಂಗಳೂರು ಪ್ರಾಸ್ತಾವಿಕ ಮಾತನಾಡಿದರು. ಶಿವಶರಣ ಮಡಿವಾಳ ವಂದಿಸಿದರು.