ಕಲಬುರಗಿ: ನಗರದ ಇಎಸ್‌ಐಸಿ ಆಸ್ಪತ್ರೆಯಲ್ಲಿನ ಭದ್ರತಾ ಸಿಬ್ಬಂದಿಗಳನ್ನು ವಿನಾಕಾರಣ ಕೆಲಸದಿಂದ ವಜಾಗೊಳಿಸಿರುವ ಆಸ್ಪತ್ರೆಯ ಡೀನ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸೆಪ್ಟೆಂಬರ್ ೯ರಂದು ಆಸ್ಪತ್ರೆ ಮುಂದೆ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಭಿಮಾನಿ ಜನತಾ ಸಂಘಟನೆಯ ಮುಖ್ಯಸ್ಥ ಹಾಗೂ ಭಾರತೀಯ ಖಾದ್ಯ ನಿಗಮ ರಾಜ್ಯ ಸಲಹಾಕಾರ ಸಮಿತಿಯ ಸದಸ್ಯ ರಾಘವೇಂದ್ರ ಎಸ್. ಚಿಂಚನಸೂರ್ ಅವರು ಇಲ್ಲಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊರಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಮಾರು ೧೧೨ ಭದ್ರತಾ ಸಿಬ್ಬಂದಿಗಳನ್ನು ವಜಾಗೊಳಿಸಲಾಗಿದೆ. ಅವರಲ್ಲಿ ಬಹುತೇಕರು ಮಾಜಿ ಸೈನಿಕರು ಇದ್ದಾರೆ. ಹೊರ ರಾಜ್ಯದವರನ್ನು ಭದ್ರತಾ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು. ಮೊದಲು ಸಂಸದರಿಂದ ಶಿಫಾರಸ್ಸು ಪತ್ರ ತಂದರೆ ಕೆಲಸಕ್ಕೆ ತೆಗೆದುಕೊಳ್ಳಲಾಗುವುದು ಎಂದು ಡೀನ್ ಹೇಳಿದರು. ಅದರಂತೆ ಸಂಸದರು ಶಿಫಾರಸ್ಸು ಕೊಟ್ಟರೂ ಸಹ ಕೆಲಸಕ್ಕೆ ತೆಗೆದುಕೊಳ್ಳಲಿಲ್ಲ. ಮೂರು ಬಾರಿ ಪೋಲಿಸರ ಸಮ್ಮುಖದಲ್ಲಿ ಸಂಧಾನ ಸಭೆಗಳು ನಡೆದವು. ಆದಾಗ್ಯೂ, ಡೀನ್ ಅವರು ಬೇಡಿಕೆಗೆ ಸ್ಪಂದಿಸದೇ ನ್ಯಾಯಯುತ ಹೋರಾಟದಲ್ಲಿ ತೊಡಗಿದ ನನಗೆ ಅವಾಚ್ಯವಾಗಿ ನಿಂದಿಸಿದರು. ಈ ಕುರಿತು ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿರುವೆ ಎಂದು ಚಿಂಚನಸೂರ್ ಅವರು ಹೇಳಿದರು.
ಕೂಡಲೇ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡಿದ ನಿವೃತ್ತ ಸೈನಿಕರನ್ನು ಪುನ: ನೇಮಕಾತಿ ಮಾಡಿಕೊಳ್ಳುವಂತೆ, ಬಾಕಿ ಉಳಿದಿರುವ ವೇತನ, ಭವಿಷ್ಯನಿಧಿ ಹಣದ ಲೆಕ್ಕ ಕೊಡುವಂತೆ, ವಜಾಗೊಳಿಸಿದ ಸ್ಥಾನಗಳಿಗೆ ನೇಮಕ ಮಾಡಿಕೊಂಡ ಗೋವಾ, ಆಂಧ್ರ, ಕೇರಳ್ ಹಾಗೂ ಮಹಾರಾಷ್ಟ್ರದವರ ಭದ್ರತಾ ಸಿಬ್ಬಂದಿಗಳ ನೇಮಕಾತಿಯನ್ನು ರದ್ದುಪಡಿಸುವಂತೆ, ಹೈದ್ರಾಬಾದ್ ಕರ್ನಾಟಕ ವಿಶೇಷ ಸ್ಥಾನಮಾನ ಹೊಂದಿದ್ದು, ೩೭೧(ಜೆ)ಅಡಿ ಸ್ಥಳೀಯರಿಗೆ ಆದ್ಯತೆ ಕೊಡುವಂತೆ ಅವರು ಒತ್ತಾಯಿಸಿದರು.
ಈ ಎಲ್ಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಇಎಸ್‌ಐಸಿ ಆಸ್ಪತ್ರೆ ಎದುರು ಸೆಪ್ಟೆಂಬರ್ ೯ರಂದು ಅನಿರ್ಧಿಷ್ಟ ಧರಣಿ ಹಮ್ಮಿಕೊಳ್ಳಲಾಗುವುದು. ಹೋರಾಟಕ್ಕೆ ಪೋಲಿಸರು ಅನುಮತಿ ಕೊಟ್ಟಿಲ್ಲ. ಆದಾಗ್ಯೂ, ಧರಣಿ ಆರಂಭಿಸುತ್ತೇವೆ. ಬೇಕಾದರೆ ಪೋಲಿಸರು ಬಂಧಿಸಲಿ ಎಂದು ಅವರು ಹೇಳಿದರು.