ಕಲಬುರಗಿ: ನೇಣು ಹಾಕಿಕೊಂಡು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಆಳಂದ್ ತಾಲ್ಲೂಕಿನ ಕಮಲನಗರದಲ್ಲಿ ವರದಿಯಾಗಿದೆ. ಮೃತನಿಗೆ ತಾಲ್ಲೂಕಿನ ಕಡಣಿ ಗ್ರಾಮದ ನಿವಾಸಿ ಮಹಾಂತೇಶ್ ತಂದೆ ಮಲ್ಲಣ್ಣ ಆಲಗೂಡ್ (26) ಎಂದು ಗುರುತಿಸಲಾಗಿದೆ.
ಮಹಾಂತೇಶ್ ಆಲಗೂಡನು ಕಮಲನಗರದಲ್ಲಿಯೇ ಕಳೆದ ೯ ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಬೇಕರಿ ಪಕ್ಕದ ಕೋಣೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಳೆದ ಮೂರ್ನಾಲ್ಕು ದಿನಗಳಿಂದಲೂ ಆತ ಮನೆಯವರೊಂದಿಗೆ ಮಾತನಾಡಿಲ್ಲ ಎನ್ನಲಾಗಿದೆ. ಆತ್ಮಹತ್ಯೆಗೆ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ. ಈ ಕುರಿತು ನರೋಣಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.