ಸುರಪುರ: ತಾಲೂಕಿನ ನಾಗರಾಳ ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಗ್ರಾಮ ಲೇಖಪಾಲಕರು ಹಾಗೂ ಕಕ್ಕೇರಾ ಕಂದಾಯ ನಿರೀಕ್ಷಕರು ಸೇರಿ ನಕಲಿ ವಂಶಾವಳಿ ಪ್ರಮಾಣ ಪತ್ರ ನೀಡಿದ್ದು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಧ್ವನಿ ಸಂಘಟನೆ ಮುಖಂಡರು ಒತ್ತಾಯಿಸಿದರು.
ನಗರದ ತಹಸೀಲ್ದಾರ್ ಕಚೇರಿಯಲ್ಲಿ ತಹಸೀಲ್ದಾರ್ ಕೆ.ವಿಜಯಕುಮಾರಗೆ ಮನವಿ ಸಲ್ಲಿಸಿ ಸಂಘದ ಜಿಲ್ಲಾಧ್ಯಕ್ಷ ಸಂಜೀವಪ್ಪ ದರಬಾರಿ ಮಾತನಾಡಿ,ಆಲ್ದಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗರಾಳ ಗ್ರಾಮದಲ್ಲಿ ಮದನಸಾಬ ಎನ್ನುವ ವ್ಯಕ್ತಿಗೆ ಗ್ರಾಮ ಲೇಖಪಾಕರು ಹಾಗೂ ಕಕ್ಕೇರಾ ಕಂದಾಯ ನಿರೀಕ್ಷಕರು ಸೇರಿ ಮದನಸಾಬ್‍ಗೆ ಇಬ್ಬರು ತಂಗಿಯರಿದ್ದರು ಅವರ ಹೆಸರನ್ನು ವಂಶಾವಳಿಯಲ್ಲಿ ಸೇರ್ಪಡೆ ಮಾಡದೆ ಮೋಸ ಮಾಡಿದ್ದಾರೆ,ವಂಶಾವಳಿ ನೀಡುವ ನಿಯಮವನ್ನು ಪಾಲನೆ ಮಾಡದೆ ಅಕ್ರಮ ಎಸಗಿದ್ದಾರೆ,ಗ್ರಾಮಕ್ಕೆ ಬಂದು ಪಂಚನಾಮೆ ಮಾಡದೆ,ಪರಿಶೀಲನೆ ಮಾಡದೆ ಯಾವುದೇ ಸರಿಯಾದ ಮಾಹಿತಿ ಇಲ್ಲದೆ ಖೊಟ್ಟಿ ದಾಖಲೆಗಳನ್ನು ಸೃಷ್ಟಿ ಮಾಡಿದ್ದಾರೆ,ಆದ್ದರಿಂದ ಇಂತಹ ನಕಲಿ ವಂಶಾವಳಿ ಪತ್ರ ನೀಡಿರುವ ಗ್ರಾಮ ಲೇಖಪಾಲಕರು ಮತ್ತು ಕಕ್ಕೇರಾ ಕಂದಾಯ ನಿರೀಕ್ಷಕರನ್ನು ಸೇವೆಯಿಂದ ವಜಾಗೊಳಿಸಬೇಕು,ಇಲ್ಲವಾದಲ್ಲಿ ನಮ್ಮ ಸಂಘಟನೆಯಿಂದ ಉಗ್ರ ಪ್ರತಿಭನಟೆಯನ್ನು ನಡೆಸಲಾಗುವುದು ಎಂದು ತಿಳಿಸಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರ್ ಕೆ.ವಿಜಯಕುಮಾರ ಅವರು ನಿಮ್ಮ ಮನವಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಉಪಾಧ್ಯಕ್ಷ ಶಾಂತು ತಳವಾರಗೇರ,ಶರಣಪ್ಪ ಕೆಂಭಾವಿ,ರಾಘವೇಂದ್ರ ಸುರಪುರ ಸೇರಿದಂತೆ ಇತರರಿದ್ದರು.