ಕಲಬುರಗಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡರ್ ರಚಿತ ಸರ್ವರು ಒಪ್ಪುವ ದೇಶದ ಸಂವಿಧಾನವನ್ನು ಕೆಲವರು ಬದಲಾಯಿಸಲು ಹೊರಟಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿ ಬೆಳೆವಣಿಯಾಗಿದೆ. ಸಂವಿಧಾನ ಬದಲಾವಣೆಗೆ ಮುಂದಾದಲ್ಲಿ ಈ ದೇಶ ದೊಡ್ಡ ಕ್ರಾಂತಿ ಎದುರಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಸಲಹೆಗಾರ ಹಾಗೂ ಆಳಂದ ಶಾಸಕ ಬಿ.ಆರ್.ಪಾಟೀಲ ಎಚ್ಚರಿಕೆ ನೀಡಿದರು.
ಶುಕ್ರವಾರ ಸಂಜೆ ಆಳಂದ ತಾಲೂಕಿನ ಗೋಳಾ(ಬಿ) ಗ್ರಾಮದಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಎಲ್ಲರಿಗೂ ನ್ಯಾಯ, ಸಮಾನತೆ ದೊರಕಬೇಕು ಎಂಬ ಸದುದ್ದೇಶದಿಂದ ಅಂಬೇಡ್ಕರ ಅವರು ಇಡೀ ವಿಶ್ವ ಮೆಚ್ಚುವಂತಹ ವಿಶಾಲವಾದ ಸಂವಿಧಾನ ದೇಶಕ್ಕೆ ನೀಡಿದ್ದಾರೆ. ಆದರೆ ಇಂದು ಈ ಸಂವಿಧಾನ ಅಪಾಯದಲ್ಲಿದೆ ಎಂದು ಎಚ್ಚರಿಕೆ ನೀಡಿದ ಅವರು, ಇದರ ರಕ್ಷಣೆಗೆ ನಾವೆಲ್ಲರು ಮುಂದಾಗಬೇಕಿದೆ ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಸಂವಿಧಾನ ಕುರಿತು ರಸಪ್ರಶ್ನೆ, ಪ್ರಬಂಧ, ಭಾಷಣ ಸ್ಪರ್ಧೆ ವಿಭಾಗದಲ್ಲಿ ವಿಜೇತರಾದ ಮಕ್ಕಳಿಗೆ ಸಂವಿಧಾನ ಪೀಠಿಕೆ, ಸಂವಿಧಾನ ಓದು ಪುಸ್ತಕ ಹಾಗೂ ಮೂಲಭೂತ ಕರ್ತವ್ಯಗಳ ಪುಸ್ತಕ ವಿತರಣೆ ಮಾಡಿದ ಶಾಸಕ ಬಿ.ಆರ್.ಪಾಟೀಲ ಅವರು ಸಭಿಕರಿಗೆ ಸಂವಿಧಾನ ಪೀಠಿಕೆ ಬೋಧಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಚಮ್ಮ ಆರ್.ಸಜ್ಜನ್, ಉಪಾಧ್ಯಕ್ಷ ಸೈಫಾನ್, ತಹಶೀಲ್ದಾರ ಯಲ್ಲಪ್ಪ ಸುಬೇದರ, ತಾಲೂಕ ಪಂಚಯತ್ ಇ.ಓ. ಮಾನಪ್ಪ ಕಟ್ಟಿಮನಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಮಚಂದ್ರ ಗೋಳಾ, ಬಿ.ಇ.ಓ ಹಣಮಂತ ರಾಠೋಡ, ಪಿ.ಎಸ್.ಐ ಗಂಗಮ್ಮ ಸೇರಿದಂತೆ ಗ್ರಾಮದ ಅನೇಕ ಮುಖಂಡರು ಇದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶಿಕ್ಷಕ ಚಂದ್ರಶೇಖರ ಮಾತನಾಡಿದರು.
ಒಂಭತ್ತನೆ ದಿನಕ್ಕೆ ಕಾಲಿಟ್ಟ ಜಾಥಾ: ಸಂವಿಧಾನ ಜಾಗೃತಿ ಜಾಥಾ ಒಂಬತ್ತನೆ ದಿನಕ್ಕೆ ಕಾಲಿಟ್ಟಿದೆ. ಶನಿವಾರ ಸೇಡಂ ತಾಲುಕಿನ ಜಾಕನಪಲ್ಲಿ, ರಂಜೋಳ, ಸಿಂಧನಮಡು, ಬೆನಕನಳ್ಳಿ, ಕೋಡ್ಲಾ ಮತ್ತು ಆಳಂದ ತಾಲ್ಲೂಕಿನ ಸುಂಟನೂರ, ಕಡಗಂಚಿ, ಧುತ್ತರಗಾಂವ, ಕೊಡ್ಲಹಂಗರಗಾ ಗ್ರಾಮಗಳಲ್ಲಿ ಸಂಚರಿಸಿ ಸಂವಿಧಾನ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿತು.