ಕಲಬುರಗಿ: ಕರ್ನಾಟಕದಲ್ಲಿ ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಫ್ರೀ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿದೆ. ಪರಿಣಾಮವಾಗಿ ಪ್ರತನಿತ್ಯ 60 ಲಕ್ಷದಂತೆ ಇದೂವರೆಗೆ 150 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ ಎಂದು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಹೇಳಿದರು.
ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕಲಬುರಗಿ ವತಿಯಿಂದ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ನಾಲ್ಕು ನಿಗಮಗಳಲ್ಲಿ ಕೆಕೆಆರ್ ಟಿಸಿ ಆರ್ಥಿಕವಾಗಿ ಸ್ವಲ್ಪ ಸದೃಡವಾಗಿದೆ. ನಷ್ಟ ಅನುಭವಿಸಿದರೂ ಕೂಡಾ ಸಾರ್ವಜನಿಕರ ಹಿತದೃಷ್ಟಿಯಿಂದ ಸಾರಿಗೆ ಸೌಲಭ್ಯ ಒದಗಿಸಬೇಕಾಗುತ್ತದೆ. ನಿಗಮ ಲಾಭದಲ್ಲಿ ನಡೆಯಬೇಕಿದ್ದರೆ, ನೌಕರರು ಹಾಗೂ ಸಿಬ್ಬಂದಿ ವರ್ಗದವರು ಸಹಕಾರದಿಂದ ಕೆಲಸ ಮಾಡಬೇಕು ಎಂದರು.
ಕಳೆದ ಎಂಟು ವರ್ಷದಲ್ಲಿ 14,000 ಸಿಬ್ಬಂದಿ ನಿವೃತ್ತರಾದರೂ ನೇಮಕಾತಿ ಆಗಿರಲಿಲ್ಲ. ಆದರೆ ಇದೀಗ 371 ಎ ಅಡಿಯಲ್ಲಿ ಆಯ್ಕೆಯಾದ 1614 ಸಿಬ್ಬಂದಿಗಳಿಗೆ ನೇಮಕಾತಿ ಆದೇಶವನ್ನು ಇದೇ 18 ರಂದು ಹಸ್ತಾಂತರಿಸಲಾಗುವುದು.