ಕಾಳಗಿ ತಾಲ್ಲೂಕು ಆಡಳಿತ ಭವನ‌ ನಿರ್ಮಾಣಕ್ಕೆ ಕಂದಾಯ ಇಲಾಖೆಗೆ ಪ್ರಸ್ತಾವನೆ: ಸಚಿವ ಪ್ರಿಯಾಂಕ್ ಖರ್ಗೆ

0
100

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶದ‌ ಏಳು ಜಿಲ್ಲೆಗಳ ತಲಾ ಒಂದು ನೂತನ ತಾಲೂಕುಗಳಲ್ಲಿ ತಾಲೂಕು ಆಡಳಿತ ಭವನ ನಿರ್ಮಾಣ ಮಾಡಲು ಪ್ರಸ್ತಾವನೆ ಸಲ್ಲಿಸುವಂತೆ ಕಂದಾಯ ಸಚಿವರು ಸೂಚಿಸಿರುವ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನಲ್ಲಿ ಆಡಳಿತ ಭವನ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ‌ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿ ಅನುದಾನ ಬಳಕೆ ಮಾಡಿಕೊಂಡು ಕಕ ಭಾಗದ ಏಳು ಜಿಲ್ಲೆಗಳಲ್ಲಿ ನೂತನವಾಗಿ ಘೋಷಿಸಲ್ಪಟ್ಟಿರುವ ತಲಾ ಒಂದು ತಾಲೂಕುಗಳಲ್ಲಿ ಸ್ಥಳ ಲಭ್ಯತೆಗೆ ಅನುಗುಣವಾಗಿ ತಾಲೂಕು ಆಡಳಿತ ಭವನ‌‌ ನಿರ್ಮಾಣ ಮಾಡಲು ಪ್ರಸ್ತಾವನೆ ಸಲ್ಲಿಸುವಂತೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಸೂಚಿಸಿದ್ದರಿಂದ ಕಲಬುರಗಿ ವಿಭಾಗದ ಅಪರ ಪ್ರಾದೇಶಿಕ ಆಯುಕ್ತರು ಸಂಬಂಧಿಸಿದ ಏಳು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ನೂತನ ತಾಲೂಕು ಕಾಳಗಿಯಲ್ಲಿ ಆಡಳಿತ ಭವನ ನಿರ್ಮಾಣ ಮಾಡಲು ಕಂದಾಯ ಇಲಾಖೆಗೆ ಜಿಲ್ಲಾಡಳಿತದ ಮೂಲಕ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

Contact Your\'s Advertisement; 9902492681

” ಉದ್ದೇಶಿತ ಏಳು ನೂತನ ತಾಲೂಕುಗಳಲ್ಲಿ ಆಡಳಿತ ಭವನ‌ ನಿರ್ಮಾಣಕ್ಕೆ ರೂ 102 ಕೋಟಿ ವೆಚ್ಚ ತಗುಲಬಹುದೆಂದು ಅಂದಾಜಿಸಲಾಗಿದ್ದು, ಸದರಿ ಮೊತ್ತದ ಶೇ 50 ರಷ್ಟು ಅಂದರೆ‌ ರೂ 52.50 ಕೋಟಿ ಅನುದಾನವನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಯಿಂದ ಭರಿಸಲು ಉದ್ದೇಶಿಸಲಾಗಿದೆ” ಎಂದು ಖರ್ಗೆ ಹೇಳಿದ್ದಾರೆ.

ಕಲಬುರಗಿ ಜಿಲ್ಲೆಯ ಕಾಳಗಿಯಲ್ಲಿ ತಾಲೂಕು ಆಡಳಿತ ಭವನ ನಿರ್ಮಾಣವಾಗುವುದರಿಂದ ಒಂದೇ ಸೂರಿನಡಿ ಹಲವಾರು ಇಲಾಖೆಗಳ ಕಚೇರಿಗಳು ಸ್ಥಾಪನೆಯಾಗುತ್ತವೆ. ಇದು ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಅನುಕೂಲವಾಗಲಿದೆ ಜೊತೆಗೆ ಆಡಳಿತಾತ್ಮಕವಾಗಿ ಇದು ಉತ್ತಮವಾಗಲಿದೆ ಎಂದು ಖರ್ಗೆ ಹೇಳಿದ್ದಾರೆ.

ಉದ್ದೇಶಿತ ಕಾಳಗಿ ತಾಲೂಕು ಆಡಳಿತ ಭವನ ನಿರ್ಮಾಣಕ್ಕೆ ಬೇಕಾಗಿರುವ 4 ಎಕರೆ ಜಮೀನನ್ನು ಪಟ್ಟಣದ ಉದ್ಯಮಿ ಕೃಷ್ಣಯ್ಯ ಜಿ. ಗುತ್ತೇದಾರ ಅವರು ಉಚಿತವಾಗಿ ದಾನದ ರೂಪದಲ್ಲಿ ನೀಡಿದ್ದು ಸುಂದರ ಹಾಗೂ ಸುಸಜ್ಜಿತ ಭವನ ನಿರ್ಮಾಣದ ಹಾದಿ ಸುಗಮವಾಗಿದೆ.

ಈ ಬಗ್ಗೆ ಮಾತನಾಡಿದ ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ ಅವರು ” ಕಾಳಗಿ ಪಟ್ಟಣದ ಸರ್ವತೋಮುಖ ಅಭಿವೃದ್ದಿಗೆ ಸಹಕರಿಸುವ ಉದ್ದೇಶದಿಂದ ಹಾಗೂ ಆಡಳಿತಾತ್ಮಕವಾಗಿ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಉದ್ಯಮಿ ಕೃಷ್ಣಯ್ಯ ಗುತ್ತೇದಾರ ಅಗತ್ಯ ಜಮೀನು ನೀಡಿದ್ದಾರೆ. ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ವಿಶೇಷ ಮುತುವರ್ಜಿಯಿಂದಾಗಿ ಸದರಿ 4 ಎಕರೆ ಜಾಗ ಸರ್ಕಾರದ ಹೆಸರಿನಲ್ಲಿ ದಾನ ಪತ್ರದ ಮೂಲಕ ನೋಂದಣಿ ಮಾಡಿಕೊಡಲಾಗಿದೆ. ಈ ಎಲ್ಲ ಕಾರ್ಯ ಸುಸೂತ್ರವಾಗಿ ನಡೆಯಲು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ ಅವರ ಪರಿಶ್ರಮ ಬಹಳ ದೊಡ್ಡದಿದೆ” ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here