ಸುರಪುರ : ತಾಲೂಕಿಗೆ ಸಂವಿಧಾನ ಜಾಗೃತಿ ಜಾಥಾ 16ರ ಬದಲು ಫೆ.17ನೇ ತಾರಿಖಿಗೆ ಆಗಮಿಸಲಿದ್ದು 23 ರವರೆಗೆ ನಡೆಯುವ ಸಂವಿಧಾನ ಜಾಗೃತಿ ಜಾಥಾದ ಯಶಸ್ವಿಗೆ ಪ್ರತಿಯೊಬ್ಬರು ಸಹಕರಿಸಬೇಕು ಎಂದು ತಹಸೀಲ್ದಾರ ಕೆ.ವಿಜಯಕುಮಾರ ತಿಳಿಸಿದರು.
ಇಲ್ಲಿಯ ತಹಸಿಲ್ ಕಚೇರಿಯಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥಾದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾಥಾವನ್ನು ಹಬ್ಬದ ರೀತಿಯಲ್ಲಿ ಆಚರಿಸಬೇಕು. ಶಾಲಾ-ಕಾಲೇಜುಗಳಲ್ಲಿ ಸಂವಿಧಾನ ಕುರಿತು ಲೇಖನ, ಭಾಷಣ, ರಂಗೋಲಿ ಸ್ಪರ್ಧೆಗಳನ್ನು ಏರ್ಪಡಿಸಿ ಸಂವಿಧಾನ ಕುರಿತಾದ ಜಾಗೃತಿ ಕಾರ್ಯಕ್ರಮ ಮಾಡಬೇಕು ಎಂದು ಸೂಚಿಸಿದರು.
ತಾಲೂಕಿನ ಕಕ್ಕೇರಾ ಪಟ್ಟಣಕ್ಕೆ ಫೆ.17 ರಂದು ಸಂಜೆ ಜಾಥಾ ಆಗಮಿಸಲಿದ್ದು,ಸಂಜೆ ಕಕ್ಕೇರಾದಲ್ಲಿ ಕಾರ್ಯಕ್ರಮವನ್ನು ನಡೆಸಲಾಗುವುದು.ಪ್ರತಿ ದಿನ 3-4 ಪಂಚಾಯತಿಗಳಲ್ಲಿ ಜಾಥಾ ಸಂಚರಿಸಲಿದೆ. ಪ್ರತಿ ದಿನದ ಜಾಥಾಕ್ಕೆ ಒಬ್ಬರು ನೋಡಲ್ ಅಧಿಕಾರಿ ಮತ್ತು ಆಯಾ ಪಂಚಾಯಿತಿಯ ಪಿಡಿಓಗಳನ್ನು ನೇಮಿಸಲಾಗಿದೆ. ಪ್ರತಿ ಗ್ರಾಮ ಪಂಚಾಯತಿಯಲ್ಲಿ ಜಾಥಾಕ್ಕೆ ಅದ್ಧೂರಿ ಸ್ವಾಗತ ನೀಡಬೇಕು. ಪ್ರಾಥಮಿಕ ಹೊರತುಪಡಿಸಿ ಉಳಿದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಭಾಗವಹಿಸಬೇಕು ಎಂದರು.
ಫೆ.18 ರಂದು ತಿಂಥಣಿ, ದೇವಾಪುರ, ದೇವತ್ಕಲ್, ಕಚಕನೂರು, 19 ರಂದು ಆಲ್ದಾಳ, ವಾಗಣಗೇರಾ, ಪೇಠ ಅಮ್ಮಾಪುರ, ಹೆಗ್ಗಣದೊಡ್ಡಿ, 20 ರಂದು ಮಾಲಗತ್ತಿ, ಕಿರದಳ್ಳಿ, ಕರಡಕಲ್, ಕೆಂಭಾವಿ, 21 ರಂದು ಯಕ್ತಾಪುರ, ಯಾಳಗಿ, ಮಲ್ಲಾ.ಬಿ, ಏವೂರು, 22 ರಂದು ನಗನೂರು, ದೇವರಗೋನಾಲ, ಬಾದ್ಯಾಪುರ, ದೇವಿಕೇರಾ, ಹೆಮನೂರು, 23 ರಂದು ಸೂಗೂರು, ಖಾನಾಪುರ ಎಸ್‍ಎಚ್, ಅರಿಕೇರಾ.ಕೆ, ಸುರಪುರದಲ್ಲಿ ಜಾಥಾ ಸಂಚರಿಸಲಿದೆ. ಕಕ್ಕೇರಾ, ಕೆಂಭಾವಿ ಮತ್ತು ಸುರಪುರದಲ್ಲಿ ಬಹಿರಂಗ ಕಾರ್ಯಕ್ರಮ ಆಯೋಜಿಸಲಾಗಿದೆ. ಜಾಥಾ ಅವಿಸ್ಮರಣೀಯಗೊಳಿಸಲು ಎಲ್ಲ ಅನುಷ್ಠಾನಾಧಿಕಾರಿಗಳು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಮುಖಂಡರು ಮತ್ತು ಸಾರ್ವಜನಿಕರು ಸಹಕರಿಸಬೇಕು ಎಂದರು.
ತಾಲೂಕು ಪಂಚಾಯಿತಿ ಇಓ ಬಸವರಾಜ ಸಜ್ಜನ್, ಸಮಾಜ ಕಲ್ಯಾಣ ಇಲಾಖೆ ಎ.ಡಿ ಡಾ.ಶ್ರುತಿ.ಎಂ, ಎಸ್.ಟಿ ಇಲಾಖೆಯ ಮೊಹ್ಮದ್ ಸಲೀಂ, ಸಿಡಿಪಿಓ ಅನಿಲ ಕಾಂಬ್ಳೆ, ಬಿಸಿಎಂ ಅಧಿಕಾರಿ ತಿಪ್ಪಾರೆಡ್ಡಿ ಮಾಲಿ ಪಾಟೀಲ್, ಕೃಷಿ ಇಲಾಖೆ ಎ.ಡಿ ಭೀಮರಾಯ ಹವಲ್ದಾರ, ದಲಿತ ಮುಖಂಡರಾದ ಶಿವಲಿಂಗ ಹಸನಾಪುರ, ರಾಮಣ್ಣ ಶೆಳ್ಳಗಿ, ನಿಂಗಣ್ಣ ಗೋನಾಲ, ಶಿವಶಂಕರ ಬೊಮ್ಮನಳ್ಳಿ, ತಿಪ್ಪಣ ಶೆಳ್ಳಗಿ,ಹಣಮಂತ ಭದ್ರಾವತಿ,ಎಮ್.ಪಟೇಲ್, ಮಾನಪ್ಪ ಶೆಳ್ಳಗಿ,ಖಾಜಾ ಅಜ್ಮೀರ್ ಸೇರಿ ಅಧಿಕಾರಿಗಳು ಮತ್ತು ದಲಿತ ಮುಖಂಡರು ಇದ್ದರು.
ಫೆಬ್ರವರಿ 16 ರಂದು ಆಗಮಿಸಬೇಕಿದ್ದ ಜಾಥಾ ಗುರುಮಿಠಕಲ್ ನಿಂದ ಜಾಥಾ ಆಗಮಿಸಲು ಒಂದು ದಿನ ತಡವಾಗುತ್ತಿರುವ ಕಾರಣ ನಮ್ಮ ತಾಲೂಕಿಗೆ 17ಕ್ಕೆ ಆಗಮಿಸಲಿದ್ದು,ಮೊದಲು ದಿನಕ್ಕೆ 3 ಗ್ರಾಮ ಪಂಚಾಯತಿಗೆ ಭೇಟಿ ನೀಡುತ್ತಿದ್ದ ಜಾಥಾ ಈಗ ದಿನಕ್ಕೆ 3 ರಿಂದ 4 ಪಂಚಾಯತಿಗಳಿಗೆ ಭೇಟಿ ನೀಡಲಿದೆ. -ಶೃತಿ ಎಸ್. ಸಮಾಜ ಕಲ್ಯಾಣ ಇಲಾಖೆ ಎ.ಡಿ