ಕಲಬುರಗಿ; ರಾಜ್ಯದ ಸಿಎಂ ಸಿದ್ದರಾಮಯ್ಯನವರು ಈ ಬಾರಿ 3, 71, 383 ಕೋಟಿ ರು ಗಾತ್ರದ ಜನಪರವಾದಂತಹ ಬಜೆಟ್ ಮಂಡಿಸಿದ್ದಾರೆ. ಕಳೆದ ಬಾರಿಯ ಬಜೆಟ್ ಗಾತ್ರಕ್ಕೆ ಹೋಲಿಸಿದಲ್ಲಿ ಇದು ಶೇ. 19 ರಷ್ಟು ಹೆಚ್ಚಳವಾದಂತಹ ಬಜೆಟ್ ಆಗಿದ್ದು ಸರ್ವಸ್ಪರ್ಶಿ, ಸರ್ವದರ್ಶಿ ಬಜೆಟ್ ಮುಖ್ಯಮಂತ್ರಿಗಳು ಮಂಡಿಸಿದ್ದಾರೆ, ಅಭಿವೃದ್ದಿಯ ಜೊತೆ ಜನಕಲ್ಯಾಣದ ಬದ್ದತೆಯ ಕಾಂಗ್ರೆಸ್ ಸಿದ್ದಾಂತ ಒಳಗೊಂಡ ಬಜೆಟ್ ಇದಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರು, ಜೇವರ್ಗಿ ಶಾಸಕರೂ ಆಗಿರುವ ಡಾ. ಅಜಯ್ ಧರ್ಮಸಿಂಗ್ ಹೇಳಿದ್ದಾರೆ.
ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗಕ್ಕೆ, ಅಲ್ಲಿನ ಸರ್ವತೋಮುಖ ಪ್ರಗತಿಗೆ ಪೂರಕವಾಗುವಂತಹ ಅನೇಕ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸುವ ಮೂಲಕ ಮುಖ್ಯಮಂತ್ರಿಗಳು ಈ ಬಜೆಟ್ ಕಲ್ಯಾಣ ನಾಡಿನ ಪ್ರಗತಿ ಸ್ನೇಹಿ ಬಜೆಟ್ಟಾಗಿಸಿದ್ದಾರೆ.
ಈ ಬಾರಿಯೂ 2024-25 ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಲು 5,000 ಕೋಟಿ ರೂ.ಗಳ ಯೋಜನೆಗಳನ್ನು ಅನುಷ್ಠಾನಗೊಳಿಸಲು ಉದ್ದೇಶಿಸಿ ಘೋಷಣೆ ಮಾಡಿದ್ದು ಇದರಿಂದಾಗಿ ಕಲ್ಯಾಣ ನಾಡಲ್ಲಿ ಪ್ರಗತಿ ಹಸಿರು ಚಿಗುರಲಿದೆ ಎಂದಿದ್ದಾರೆ.
46 ಪಿಎಚ್‌ಸಿಗಳಿಗೆ 221 ಕೋಟಿ ರು ವೆಚ್ಚ; ಕಲ್ಯಾಣ ಕರ್ನಾಟಕ ಭಾಗದಲ್ಲಿ 46 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 221 ಕೋಟಿ ರೂ.ಗಳ ವೆಚ್ಚದಲ್ಲಿ ಕೆಕೆಆರ್‌ಡಿಬಿ ಮೂಲಕ ಸ್ಥಾಪಿಸುವುದು, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಸಹಯೋಗದೊಂದಿಗೆ ಸರ್ಕಾರಿ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳನ್ನು ಪ್ರಾರಂಭಿಸುವುದು ಬಜೆಟ್‌ನ ಜನಪ್ರೀಯ ಘೋಷಣೆಗಳಾಗಿದ್ದು ಇವು ಕಲ್ಯಾಣ ನಾಡಲ್ಲಿ ಆರೋಗ್ಯ, ಅಕ್ಷರ ಕ್ರಾಂತಿಗೆ ನೆರವಾಗಲಿವೆ.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ವತಿಯಿಂದ ಕೊಪ್ಪಳ, ಬೀದರ್, ಯಾದಗಿರಿ, ರಾಯಚೂರು ಮತ್ತು ಕಲಬುರಗಿಯಲ್ಲಿ ವಿಶ್ವವಿದ್ಯಾಲಯಗಳ ಘಟಕ ಕಾಲೇಜನ್ನು ಅವಶ್ಯವಿರುವ ಜಿಲ್ಲಾ/ ತಾಲ್ಲೂಕು ಕೇಂದ್ರಗಳಲ್ಲಿ ಸ್ಥಾಪಿಸುವುದಕ್ಕೂ ಬಜೆಟ್ ಘೋಷಣೆಯಲ್ಲಿ ಪ್ರಮುಖವಾಗಿದೆ.
ಕಲ್ಯಾಣ ಕರ್ನಾಟಕದಲ್ಲಿ ಹೀಮೋಫಿಲಿಯಾ (Haemophilia) ಮತ್ತು ಥಲಸ್ಸೇಮಿಯಾ (halassemia) ರೋಗಿಗಳಿಗೆ ಸೂಕ್ತ ಚಿಕಿತ್ಸಾ ಸೌಲಭ್ಯಗಳ ಕೊರತೆಯಿರುವುದರಿಂದ ಕಲಬುರಗಿ ಮತ್ತು ಕೊಪ್ಪಳದ ಐಸಿಡಿಟಿ (Iಅಆಖಿ) ಕೇಂದ್ರಗಳ ಬಲವರ್ಧನೆಗೆ 7 ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಹೇಳಿರುವುದು ಈ ರೋಗಗಳಿಂದ ಬಳಲುತ್ತಿರುವ ಕಡು ಬಡವರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ.
ಉನ್ನತಾಧಿಕಾರ ಸಮೀತಿ ರಚನೆ ಸ್ವಾಗತಾರ್ಹ; ಇನ್ನು ಡಾ|| ಡಿ.ಎಂ. ನಂಜುಂಡಪ್ಪ ವರದಿಯನ್ನು 2002 ರಲ್ಲಿ ಸಲ್ಲಿಸಲಾಗಿದ್ದು, ಕಳೆದ 22 ವರ್ಷಗಳಲ್ಲಿ ಈ ವರದಿಯ ಆಧಾರದ ಮೇಲೆ ಹಿಂದುಳಿದ ಪ್ರದೇಶಗಳಲ್ಲಿ ಅಸಮತೋಲನೆಯನ್ನು ನಿವಾರಿಸಲು ಬಹಳಷ್ಟು ಯೋಜನೆಗಳನ್ನು ಮತ್ತು ಬಂಡವಾಳ ಹೂಡಿಕೆಯನ್ನು ಮಾಡಲಾಗಿದೆ.
ಇದರಿಂದ ಆಗಿರುವ ಬದಲಾವಣೆಗಳು ಮತ್ತು ಪರಿಣಾಮಗಳನ್ನು ಅಧ್ಯಯನ ಮಾಡಲು ಪ್ರಸಕ್ತ ಸಾಲಿನಲ್ಲಿ ಒಂದು ಉನ್ನತಾಧಿಕಾರಿ ಸಮಿತಿಯನ್ನು ರಚಿಸುವ ತೀರ್ಮಾನ ಬಜೆಟ್‌ನಲ್ಲಿ ಹೊರಬಿದ್ದರೋದು ಸ್ವಾಗತಾರ್ಹ ಕ್ರಮವಾಗಿದೆ.
ಈ ಉನ್ನತಾಧಿಕಾರ ಸಮಿತಿಯ ಮೂಲಕ ಪ್ರಸ್ತುತ ರಾಜ್ಯದಲ್ಲಿನ ಆರ್ಥಿಕ ಮತ್ತು ಪ್ರಾದೇಶಿಕ ಅಸಮಾನತೆಯ ಆಧಾರದ ಮೇಲೆ ಜಿಲ್ಲೆ ಮತ್ತು ತಾಲ್ಲೂಕುಗಳನ್ನು ವರ್ಗೀಕರಿಸಿ ಹೊಸ ಅಭಿವೃದ್ಧಿ ಸೂಚ್ಯಂಕಗಳನ್ನು ತಯಾರಿಸಲು ಹೆಚ್ಚಿನ ಅನುಕೂಲವಾಗಲಿದೆ ಎಂದು ಡಾ. ಅಜಯ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಜೇವರ್ಗಿ ಕೆರೆ ತುಂಬಿಸುವ, ಬಾಂದಾರು ಯೋಜನೆಗೆ ಗ್ರೀನ್ ಸಿಗ್ನಲ್; ತಾವು ಪ್ರತಿನಿಧಿಸುತ್ತಿರುವ ಜೇವರ್ಗಿ ತಾಲೂಕಿನಲ್ಲಿರುವ ಕೆರೆಗಳನ್ನು ತುಂಬಿಸುವ ಯೋಜನೆ ಹಾಗೂ ಸಣ್ಣ ನೀರಾವರಿ ಇಲಾಖೆಯಡಿಯಲ್ಲಿ ಹರವಾಳದ ಬಳಿ ಭೀಮಾ ನದಿಗೆ ಬಾಂದಾರು ಸೇತುವೆ ಕಟ್ಟುವ ಯೋಜನೆಗೂ ಬಜೆಟ್‌ನಲ್ಲಿ ಹಸಿರು ನಿಶಾನೆ ದೊರಕಿದೆ.
ಇದಕ್ಕಾಗಿ 130 ಕೋಟಿ ರುಪಾಯಿ ಹಣವೂ ಮೀಸಲಿಡಲಾಗಿದೆ. ಇದರಿಂದ ಜೇವರ್ಗಿ ತಾಲೂಕಿನಲ್ಲಿ ನೀರಾವರಿಗೆ ಹೆಚ್ಚಿನ ಅನುಕೂಲವಾಗಲಿದೆಯಲ್ಲದೆ ಜನ ಸಂಪರ್ಕಕ್ಕೂ ಹೆಚ್ಚಿನ ಅನುಕೂಲವಗಲಿದೆ ಎಂದು ಡಾ. ಅಜಯ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಮುಖ್ಯಮಂತ್ರಿಗಳು ನಮ್ಮ ಕಲ್ಯಾಣ ಕರ್ನಾಟಕ ಭಾಗದ ಆಶೋತ್ತರಗಳಿಗೆ ಹಾಗೂ ಈ ಪ್ರದೇಶದ ಜನಪ್ರತಿನಿಧಿಗಳ ಬೇಡಿಕೆಗೆ ಪೂರಕವಾಗಿ ಸ್ಪಂದಿಸಿದ್ದಾರೆ. ಈ ಬಜೆಟ್ನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ದಿಗೆ 5 ಸಾವಿರ ಕೋಟಿ ಮೀಸಲಿಟ್ಟಿರುವುದು ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಕಾಂಗ್ರೆಸ್ ಸರಕಾರ ಬದ್ದತೆಯನ್ನ ತೋರಿಸುತ್ತದೆ. ಒಟ್ಟಾರೆ. ಈ ಬಜೆಟ್ ದೂರದೃಷ್ಟಿ ಹೊಂದಿದ್ದು ಸರ್ವವರ್ಗಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ.
ಗ್ಯಾರೆಂಟಿಗಳಿಗೆ ಅನುದಾನ ನೀಡಿದ ಮೇಲೂ ಆರ್ಥಿಕ ಸುಸ್ಥಿತಿಯನ್ನ ನಿಭಾಯಿಸಿ ಗ್ಯಾರೆಂಟಿಗಳ ಜೊತೆ ಅಗತ್ಯ ಅಭಿವೃದ್ದಿಗೆ ಯಾವುದೇ ಕೊರತೆ ಮಾಡದೇ ಇರುವಂತಹ ಪ್ರಗತಿಶೀಲ ಬಜೆಟನ್ನ ನಮ್ಮ ಮುಖ್ಯಮಂತ್ರಿಗಳು ಮಂಡಿಸಿದ್ದಾರೆ.
ಗ್ಯಾರೆಂಟಿಗಳ ಜೊತೆಯಲ್ಲೆ ಹಿಂದೆಂದೂ ನೀಡಿದಷ್ಟು ಅನುದಾನವನ್ನ ಅಭಿವೃದ್ದಿ ಕಾರ್ಯಗಳಿಗೆ ನೀಡುವ ಮೂಲಕ ಈ ಆಯವ್ಯಯವು ನಮ್ಮ ರಾಜ್ಯದ ಮುಂದಿನ ನಡೆಯನ್ನು ನಿರೂಪಿಸುತ್ತದೆ. ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ನ್ಯಾಯ ಮತ್ತು ಅಭಿವೃದ್ದಿ ಪರ್ವವನ್ನು ಒಳಗೊಂಡ ಕರ್ನಾಟಕದ ಅಭಿವೃದ್ದಿಯನ್ನು ಮುಂದಿನ ಒಂದು ದಶಕಕ್ಕೆ ನಿಚ್ಚಳಗೊಳಿಸಿದೆ ಎಂದು ಡಾ. ಅಜಯ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.