ನಿರುದ್ಯೋಗಿ ಯುವಜನರಿಗೆ ಉದ್ಯೋಗ ಸೃಷ್ಠಿಯ ಭರವಸೆ ಮೂಡಿಸುವಲ್ಲಿ ವಿಫಲವಾದ ರಾಜ್ಯ ಬಜೆಟ್: ಡಿವೈಎಫ್ಐ

0
22

ಕಲಬುರಗಿ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಅಧಿವೇಶನದಲ್ಲಿ ಮಂಡಿಸಿದ ಬಜೆಟ್, ರಾಜ್ಯದಲ್ಲಿ ಉದ್ಯೋಗದ ಅವಕಾಶಕ್ಕಾಗಿ ಕಾತರರಾಗಿರುವ ಯುವಜನರಿಗೆ ಉದ್ಯೋಗ ಸೃಷ್ಠಿಸುವ ಹಾಗೂ ಅಭದ್ರತೆಯಲ್ಲಿ ದುಡಿಯುತ್ತಿರುವವರಿಗೆ ಭದ್ರತೆ ಒದಗಿಸುವಲ್ಲಿ ವಿಫಲವಾಗಿದೆ ಎಂದು ಡಿವೈಎಫ್ಐ ರಾಜ್ಯ ಸಮಿತಿಯ ಲವಿತ್ರ ಅಭಿಪ್ರಾಯ ಪಟ್ಟಿದೆ.

ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಮೈಸೂರು ವಿಭಾಗಗಳಲ್ಲಿ ಜವಳಿ ಪಾರ್ಕ್ ಆರಂಭಿಸಲು ರಾಜ್ಯ ಸರಕಾರ ಮುಂದಾಗಿರುವುದು ಸ್ವಾಗತಾರ್ಹವಾದರೂ ಖಾಸಗಿ ಸಹಭಾಗಿತ್ವದಲ್ಲಿ ಆರಂಭ ಮಾಡುತ್ತಿರುವುದರಿಂದ ಭದ್ರತೆಯ ಕೆಲಸ ಯುವಜನರಿಗೆ ಮತ್ತೂ ಮರಿಚೀಕೆಯಾಗುತ್ತದೆ. ಆದ್ದರಿಂದ ಸರಕಾರವೇ ಸ್ವತಃ ಈ ಉದ್ದಿಮೆಗಳನ್ನು ಸಾರ್ವಜನಿಕವಾಗಿ ಆರಂಭಿಸಬೇಕು ಎಂದು ಡಿವೈಎಫ್ಐ ಒತ್ತಾಯಿಸುತ್ತದೆ.

Contact Your\'s Advertisement; 9902492681

ಖಾಲಿ ಇರುವ ಸರಕಾರಿ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪಿಯು ಕಾಲೇಜುಗಳಲ್ಲಿ ಶಿಕ್ಷಕರು, ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭಿಸುವುದಾಗಿ ಬಜೆಟ್ ನಲ್ಲಿ ಹೇಳಿರುವುದು ಸ್ವಾಗತಾರ್ಹ. ಇದು ಕೂಡಲೇ ಕಾರ್ಯರೂಪಕ್ಕೆ ಬರಬೇಕಿದೆ. ಜೊತೆಗೆ ಸರಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2.70 ಲಕ್ಷ ಹುದ್ದೆಗಳ ಭರ್ತಿಗೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು. ಅಲ್ಲದೇ ನೇಮಕಾತಿಯಲ್ಲಿ ಭ್ರಷ್ಠಾಚಾರ ಮಿತಿ ಮೀರಿದ್ದು ಇದನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಬೇಕು. ಸ್ಕಿಲ್ ಹಾಗೂ ಕೌಶಲ್ಯ ಹೆಚ್ಚಿಸುವ ತರಭೇತಿ ನೀಡುವ ಕುರಿತು ಬಜೆಟ್ ನಲ್ಲಿ ಪ್ರಸ್ತಾಪಿಸಿದೆ. ಈ ತರಭೇತಿ ಪಡೆದ ನಂತರ ಅವರಿಗೆ ಉದ್ಯೋಗ ಖಾತ್ರಿಪಡಿಸಬೇಕು ಎಂದು ಆಗ್ರಹಿಸುತ್ತದೆ.

ಯುವ ನಿಧಿ ಗ್ಯಾರಂಟಿ ಕುರಿತು ಬಜೆಟ್ ನಲ್ಲಿ ಪ್ರಸ್ತಾಪಿಸಿದ್ದು, ಈ ಯೋಜನೆ ಸ್ವಾಗತಾರ್ಹವಾದುದು. ಆದರೆ ಕೇವಲ ಹಿಂದಿನ ವರ್ಷ ಪಾಸಾದ ಪದವಿಧರರಿಗೆ ಯೋಜನೆಯನ್ನು ಅನ್ವಯಿಸಿರುವುದು ಹಾಗೂ ಅತ್ಯಂತ ಕಡಿಮೆ ಹಣವನ್ನು ನೀಡುತ್ತಿರುವುದು ಅವೈಜ್ಞಾನಿಕವಾಗಿದೆ. ಆದ್ದರಿಂದ ಈ ಯೋಜನೆಗೆ ಐಟಿಐ ಸೇರಿದಂತೆ ಇತರೆ ವಿಭಾಗಗಳನ್ನು ಸೇರಿಸಿ ಕಳೆದ ಐದು, ಹತ್ತು ವರ್ಷಗಳಿಂದ ಪದವಿ ಪಡೆದು ಕೆಲಸ ಸಿಗದಿರುವ ನಿರುದ್ಯೋಗಿ ಯುವಜನರಿಗೆ ಅನ್ವಯಿಸಬೇಕು ಹಾಗೂ ಕನಿಷ್ಠ ರೂ. 12,000 ನಿರುದ್ಯೋಗ ಭತ್ಯೆ ಒದಗಿಸಬೇಕು ಎಂದು ಆಗ್ರಹಿಸುತ್ತದೆ.

ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳಬಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಗಳಡಿ ಇರುವ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮಾಸಿಕ ಬೋಜನ ವೆಚ್ಚವನ್ನು ರೂ. 100 ಹೆಚ್ಚಳ ಮಾಡಿರುವುದು ಸ್ವಾಗತಾರ್ಹ. ಆದರೆ ಈ ಬೆಲೆ ಏರಿಕೆಯ ದಿನಗಳಲ್ಲಿ ಸಾಲದಾಗಿದೆ. ಪ್ರಸ್ತುತ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ರೂ.1600, ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ರೂ.1700 ಹಣವನ್ನು ಮಾಸಿಕ ತಲಾ ಭೋಜನ ವೆಚ್ಚವಾಗಿ ನೀಡಲಾಗುತ್ತಿದೆ. ಇದಕ್ಕೆ ಕೇವಲ ನೂರು ರೂಪಾಯಿ ಹೆಚ್ಚಳದಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಹಾಗೂ ಪೌಷ್ಠಿಕ ಆಹಾರ ಒದಗಿಸಲು ಅಸಾಧ್ಯ. ಹಾಗಾಗಿ ಕನಿಷ್ಠ ವಿದ್ಯಾರ್ಥಿಗಳ ಅಹಾರ ಭತ್ಯೆಯನ್ನು ಮಾಸಿಕ ರೂ.3500 ನಿಗದಿ ಮಾಡಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತದೆ.

ಎಪಿಎಂಸಿ ತಿದ್ದುಪಡಿ ಕಾಯ್ದೆ ಹಿಂಪಡೆಯುವುದು, ಶಿಕ್ಷಣ ಸಂಸ್ಥೆಗಳಲ್ಲಿ ಸಾಮರಸ್ಯ, ವೈಜ್ಞಾನಿಕ ಮನೋಭಾವ ಮತ್ತು ಸಹಬಾಳ್ವೆಯ ವಿದ್ಯಾಕೆಂದ್ರಗಳನ್ನಾಗಿ ರೂಪಿಸಲು ನಾವು ಮನುಜರು ಯೋಜನೆ ತರುತ್ತಿರುವುದು. ಮಾಜಿ ದೇವದಾಸಿಯರು, ಲಿಂಗತ್ವ ಅಲ್ಪ ಸಂಖ್ಯಾತರಿಗೆ ಮಾಶಾಸನ ಹೆಚ್ಚಳ ಮಾಡಿರುವುದು. ಸಂಚಾರಿ ಕುರಿಗಾಹಿ ಮಕ್ಕಳಿಗೆ ಸರಕಾರಿ ವಸತಿ ಶಾಲೆಗಳಲ್ಲಿ ಆದ್ಯತೆ ನೀಡಿ, ವಿದ್ಯಾರ್ಥಿ ವೇತನ ನೀಡುವುದು. ಅಲೆ ಮಾರಿ, ಅರೆ ಅಲೆಮಾರಿ ಸಮುದಾಯ ಮಕ್ಕಳಿಗೆ ವಸತಿ ಶಾಲೆಯಲ್ಲಿ ಆದ್ಯತೆ ನೀಡುವುದು ಹಾಗೂ ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಸ್ಥಿತಿಗತಿಗಳ ಅಧ್ಯಯನ, ಅಭಿವೃದ್ಧಿಗಾಗಿ ಕರ್ನಾಟಕ ಅಲೆಮಾರಿ ಆಯೋಗ ರಚನೆ ಮಾಡುತ್ತಿರುವುದು ಸಕಾರಾತ್ಮಕ ಅಂಶಗಳಾಗಿದ್ದು ಇವುಗಳನ್ನು ಡಿವೈಎಫ್ಐ ಸ್ವಾಗತಿಸುತ್ತದೆ. ಆದ್ದರಿಂದ ಸರಕಾರ ಈ ಕೊರತೆಗಳನ್ನು ಸರಪಡಿಸಿ ರಾಜ್ಯದ ಜನತೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ರಾಜ್ಯ ಸರಕಾರವನ್ನು ಒತ್ತಾಯಿಸುತ್ತದೆಯಲ್ಲದೇ ರಾಜ್ಯದ ಯುವಜನತೆ ಈ ಕುರಿತು ಧ್ವನಿ ಎತ್ತಬೇಕೆಂದು ಕರೆ ನೀಡುತ್ತದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here