ಕಲಬುರಗಿ: ತುರ್ತು ಚಿಕಿತ್ಸೆ ಅಗತ್ಯವಿರುವ ವ್ಯಕ್ತಿಗಳನ್ನು ಹಣದ ಆಸೆಗಾಗಿ ಸರಕಾರಿ ಸ್ವಾಮ್ಯದ 108 ಅಂಬ್ಯುಲೆನ್ಸ್‍ಗಳು ಖಾಸಗಿ ಆಸ್ಪತ್ರೆಗಳಿಗೆ ಕೊಂಡೊಯ್ಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆ ಆಕ್ರಮದಲ್ಲಿ ಭಾಗಿಯಾಗಿರುವರು ಎನ್ನಲಾಗಿರುವ 108 ಆರೋಗ್ಯ ಕವಚ ಯೋಜನೆಯ ಪ್ರಾದೇಶಿಕ ವ್ಯವಸ್ಥಾಪಕ ಹಾಗೂ ಜಿಲ್ಲಾ ವ್ಯವಸ್ಥಾಪಕರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಜರುಗಿಸಬೇಕು ಎಂದು ಕರ್ನಾಟಕ ರಾಜ್ಯ ಕೋಲಿ ಕಬ್ಬಲಿಗ ಎಸ್ಟಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಲಚ್ಚಪ್ಪ ಜಮಾದಾರ್ ಅವರು ಆಗ್ರಹಿಸಿದರು.
ಸೋಮವಾರ ನಗರದ ಪತ್ರಿಕಾ ಭವನದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಬ್ವರು ವ್ಯವಸ್ಥಾಪಕರು ಕಳೆದ ಹತ್ತು ವರ್ಷಗಳಿಂದ ಸದರಿ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂಬ್ಯುಲೇನ್ಸ್ ಮಾಫಿಯಾಕ್ಕೆ ಅವರ ಕುಮ್ಮಕ್ಕು ಇದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಆರೋಪಿಸಿ, ಶೀಘ್ರ ತನಿಖೆ ನಡರಸಿ ಕೂಡಲೇ ಅವರಿಗೆ ಸರ್ಕಾರಿ ನಿಬಂಧನೆಯಂತೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯ ಯಾವುದೇ ಭಾಗದಲ್ಲಿ ಸಂಭವಿಸುವ ರಸ್ತೆ ಅಪಘಾತದ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು 108 ಅಂಬ್ಯುಲೆನ್ಸ್‍ಗೆ ಸಹಜವಾಗಿ ಕರೆ ಮಾಡುತ್ತಾರೆ. ಆದಾಗ್ಯೂ, ಅಂಬುಲೆನ್ಸ್ ಸಿಬ್ಬಂದಿ ಚಿಕಿತ್ಸೆ ಅಗತ್ಯವಿರುವ ವ್ಯಕ್ತಿಗಳನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಬದಲು ಕಮಿಷನ್ ಆಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ಸಾಗಿಸುವ ಮೂಲಕ ತಮ್ಮ ಕಿಸೆ ತುಂಬಿಸಿಕೊಂಡು, ಬಡವರು ಆರ್ಥಿಕವಾಗಿ ದಿವಾಳಿಯಾಗುವಂತೆ ಮಾಡುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
108 ಅಂಬುಲೆನ್ಸ್‍ಗಾಗಿ ರೋಗಿಗಳು ಇಲ್ಲವೇ ರೋಗಿಯ ಪರವಾಗಿದ್ದವರು ಕರೆ ಮಾಡಿದರೆ ಅವರು ಬೇರೆ ಕಡೆಯಲ್ಲಿದ್ದಾಗ ಖಾಸಗಿ ಆಸ್ಪತ್ರೆಯ ಅಂಬುಲೆನ್ಸ್‍ನವರಿಗೆ ಕರೆ ಮಾಡಿ ಸುದ್ದಿ ಹಾಗೂ ಅಪಘಾತದ ಸ್ಥಳವನ್ನು ತಿಳಿಸುತ್ತಾರೆ. ಸದರಿ ರೋಗಿಯ ಕುಟುಂಬದ ಆರ್ಥಿಕ ಪರಿಸ್ಥಿತಿ ಹೇಗಿದೆ ಎಂಬುದನ್ನು ನೋಡದೇ ಅಂತಹ ಕ್ರಮ ಕೈಗೊಳ್ಳುವುದರಿಂದ ದುಬಾರಿ ಖರ್ಚಿನ ಹೊರೆಯನ್ನು ಹೇರುತ್ತಿದ್ದಾರೆ. ಅಂಬುಲೆನ್ಸ್‍ನವರು ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಿಸಿದರೆ ಎಷ್ಟೋ ರೋಗಿಗಳು ಅಲ್ಲಿಯೇ ಗುಣಹೊಂದುವ ಸಾಧ್ಯತೆಗಳು ಇವೆ ಎಂದು ಅವರು ಹೇಳಿದರು.
ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಕಳೆದ 2023ರ ಡಿಸೆಂಬರ್ 24ರಂದು ನೀಡಿದ ವರದಿಯ ಪ್ರಕಾರ 108 ಆರೋಗ್ಯ ಕವಚ ಯೋಜನೆಯ ಅಡಿಯಲ್ಲಿನ ಅಂಬುಲೆನ್ಸ್ ಮುಖಾಂತರ ಕಳೆದ ಎರಡು ವರ್ಷಗಳಲ್ಲಿ 3559 ರೋಗಿಗಳನ್ನು ದಾಖಲಿಸಲಾಗಿದೆ. ಸದರಿ ಸರ್ಕಾರಿ ಆಸ್ಪತ್ರೆಯಿಂದ ಅಂಬುಲೆನ್ಸ್ ಮುಖಾಂತರ ಬಂದ ರೋಗಿಗಳು ಖಾಸಗಿ ಆಸ್ಪತ್ರೆಗೆ ಸುಮಾರು 8660 ಜನ ಹೋಗಿದ್ದಾರೆ ಎಂದು ತಿಳಿಸಿದ್ದಾರೆ. ಇದು ದುರದೃಷ್ಟಕರ ಸಂಗತಿ. ಇದೆಲ್ಲ ಕಮೀಷನ್‍ಗಾಗಿ ಮಾಡುತ್ತಿದ್ದಾರೆ. ಇಂತಹ ಮಾಫಿಯಾಕ್ಕೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಹಾಗೂ ವೈದ್ಯಾಧಿಕಾರಿಗಳು ಸಹಕಾರ ಮಾಡುತ್ತಿದ್ದಾರೆ ಎಂದು ಅವರು ದೂರಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಅತ್ಯಾಧುನಿಕ ವೈದ್ಯಕೀಯ ಸಲಕರಣೆ ಮತ್ತು ಯಂತ್ರೋಪಕರಣಗಳು ಇದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ರಸ್ತೆ ಅಪಘಾತ ಹಾಗೂ ಇತರೆ ತುರ್ತು ಚಿಕಿತ್ಸೆಗಾಗಿ ಬಂದ ರೋಗಿಗಳನ್ನು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದೇ ಬಡ ಹಾಗೂ ಕೂಲಿ ಕಾರ್ಮಿಕ, ಮಧ್ಯಮ ವರ್ಗದವರಿಗೆ ಅನ್ಯಾಯ ಮಾಡುತ್ತಿರುವುದು ಮನೆ ಮಾತಾಗಿದೆ. ಇದರಿಂದ ಸಾರ್ವಜನಿಕರಿಗೆ ಸರ್ಕಾರಿ ಆಸ್ಪತ್ರೆಗಳ ಮೇಲೆ ಭರವಸೆ ಇಲ್ಲದಂತಾಗಿದೆ. ಜನರು ಇದರಿಂದ ತುಂಬಾ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಕೂಡಲೇ ಸರ್ಕಾರಿ ಆಸ್ಪತ್ರೆಯ ವೈದ್ಯರ ಹಾಗೂ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳ ನೇಲೆ ನಿಗಾ ವಹಿಸಬೇಕು ಎಂದು ಅವರು ಒತ್ತಾಯಿಸಿದರು.
108 ಅಂಬ್ಯುಲೆನ್ಸ್ ಚಾಲಕರು ಹಾಗೂ ಸಿಬ್ಬಂದಿ ಜಿಲ್ಲೆಯಲ್ಲಿ ಒಂದೇ ಕಡೆ 10 ವರ್ಷಗಳಿಂದ ಬೇರು ಬಿಟ್ಟಿದ್ದಾರೆ. ಆರೋಗ್ಯ ಇಲಾಖೆಯ ಕೆಲವು ಅಧಿಕಾರಿಗಳು ಮತ್ತು ವೈದ್ಯರು ಸಹ ಈ ಅಕ್ರಮ ದಂಧೆಯಲ್ಲಿ ಕೈವಾಡ ಹೊಂದಿರುವ ಸಂಶಯವಿದೆ. ಇಂತಹ ಸಿಬ್ಬಂದಿ ಮತ್ತು ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಜರುಗಿಸಬೇಕು. 108 ಅಂಬ್ಯುಲೆನ್ಸ್ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ಅಗತ್ಯವಿರುವ ರೋಗಿಗಳು ಹಾಗೂ ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ಮಾತ್ರ ರವಾನಿಸಿ ದಾಖಲಿಸುವ ಪದ್ಧತಿ ಕಡ್ಡಾಯಗೊಳಿಸಬೇಕೆಂದು ಅವರು ಆಗ್ರಹಿಸಿದರು.
108 ಅಂಬುಲೆನ್ಸ್ ಮಾಫಿಯಾಕ್ಕೆ ಕಡಿವಾಣ ಹಾಕದೆ ಹೋದರೆ ಜಿಲ್ಲೆಯಾದ್ಯಂತ ಹೋರಾಟ ರೂಪಿಸುವುದು ಅನಿವಾರ್ಯ ಆಗಲಿದೆ ಎಂದು ಅವರು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಮಲಿಂಗ್ ನಾಟಿಕಾರ್, ಪಿಂಟು ಜಮಾದಾರ್, ಭೀಮಶಾ ಖನ್ನಾ, ಶಿವು ಧಣ್ಣಿ, ಮಲ್ಲಿಕಾರ್ಜುನ್ ಗುಡ್ಡಾ, ಅಂಬಾರಾಯ್ ಜವಳಗಾ, ವಿಜಯಕುಮಾರ್ ಜಮಾದಾರ್, ದೇವಿಂದ್ರ ಜಮಾದಾರ್ ಮುಂತಾದವರು ಉಪಸ್ಥಿತರಿದ್ದರು.