ಬೀದರ್: ಈ ಬಾರಿಯ ಚುನಾವಣೆಯಲ್ಲಿ ಸಹಕಾರ ಕೊಡದೇ ಇದ್ದರೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಉಳಿಯುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನ ತೆಗೆಯುವ ಕೆಲಸವನ್ನು ಮಾಡುತ್ತಿದ್ದಾರೆ. ಸಂವಿಧಾನ ಉಳಿಯಬೇಕು ಎಂದರೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು ಎಂದು ಎಐಸಿಸಿ ಹಾಗೂ ಇಂಡಿಯಾ ಒಕ್ಕೂಟದ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ್ ಖರ್ಗೆ ಅವರು ಹೇಳಿದರು.
ನಗರದ ನೆಹರೂ ಮೈದಾನದಲ್ಲಿ ಮಂಗಳವಾರ ಕಾಂಗ್ರೆಸ್ ಪಕ್ಷದ ಜಿಲ್ಲಾ ಸಮಿತಿಯಿಂದ ತಮ್ಮ ರಾಜಕೀಯ ಜೀವನದ ಸುವರ್ಣ ಮಹೋತ್ಸವ ಹಾಗೂ ಕಲ್ಯಾಣ ಕರ್ನಾಟಕಕ್ಕೆ ಜಾರಿಯಾದ 371(ಜೆ) ಕಲಂನ ದಶಮಾನೋತ್ಸವ ನಿಮಿತ್ಯದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಹೊರಕಳಿಸುವ ಮೂಲಕ ಮುಂದಿನ ಪೀಳಿಗೆಯನ್ನು ರಕ್ಷಿಸಬೇಕು ಎಂದು ಕರೆ ನೀಡಿದರು.
ಬಿಜೆಪಿಯೇತರ ರಾಜಕೀಯ ಪಕ್ಷಗಳವರಿಗೆ, ಅದರಲ್ಲಿಯೂ ವಿರೋಧ ಪಕ್ಷಗಳಿಗೆ ಈಗ ಇಡಿ, ಈಟಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಭಯವಿದೆ. ಇಡಿ ಮತ್ತು ಐಟಿ ಎರಡೂ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕೈಯಲ್ಲಿವೆ. ಹೀಗಾಗಿ ಕಾಂಗ್ರೆಸ್ಸಿನಿಂದ ಲಾಭ ಪಡೆದುಕೊಂಡು ಯಾರ ಬಳಿಯೂ ಧೈರ್ಯವಿಲ್ಲದೇ ಬಿಜೆಪಿಗೆ ಹೋಗುತ್ತಿದ್ದಾರೆ ಎಂದು ಇತ್ತೀಚೆಗೆ ಬಿಜೆಪಿ ಸೇರಿದ ಕಾಂಗ್ರೆಸ್ ನಾಯಕರ ವಿರುದ್ಧ ಅವರು ಹರಿಹಾಯ್ದರು.
ಎಲ್ಲವೂ ಬಡವರಿಗೆ ಹೋಗುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ನೇಮಕಾತಿಗಳನ್ನು ಬಂದ್ ಮಾಡಿದ್ದಾರೆ ಎಂದು ದೂರಿದ ಅವರು ಎಲ್ಲರಿಗೂ ನಾವು ಉಚಿತವಾಗಿ ಪಡಿತರ ಅಕ್ಕಿಯನ್ನು ಕೊಡುತ್ತಿದ್ದೇವೆ. ಜವಾಹರಲಾಲ್ ನೆಹರೂ ಅವರು ದೊಡ್ಡ ದೊಡ್ಡ ಕಾರ್ಖಾನೆಗಳನ್ನು ಸ್ಥಾಪನೆ ಮಾಡಿದ್ದರು. ಕಾಂಗ್ರೆಸ್ಸಿಗೆ ಸ್ವಾತಂತ್ರ್ಯ ಪೂರ್ವದ ಇತಿಹಾಸವಿದೆ. ಆದಾಗ್ಯೂ, ಪ್ರಧಾನಿ ನರೇಂದ್ರ ಮೋದಿ ಅವರು ಎರಡು ಕೋಟಿ ಉದ್ಯೋಗಗಳನ್ನು ಕೊಡುತ್ತೇನೆ ಎಂದು ಸುಳ್ಳು ಹೇಳಿದ್ದಾರೆ.
ರಾಮ ಮಂದಿರದಲ್ಲಿ ರಾಜಕೀಯ ಏಕೆ ಬಂತು? ಎಂದು ಪ್ರಶ್ನಿಸಿದ ಅವರು, ಮೋದಿ ಜನ, ಧರ್ಮ, ಜಾಥಿಯನ್ನು ಬೇರೆ, ಬೇರೆ ಮಾಡಲು ನೋಡುತ್ತಾರೆ. ಹಾಗಾಗಿ ಮೋದಿಯವರಿಗೆ ಈ ಬಾರಿ ಅಧಿಕಾರದಿಂದ ಹೊರಗೆ ಕಳಿಸಿ ಎಂದರು.
ಮಾಧ್ಯಮಗಳ ವಿರುದ್ಧವೂ ಹರಿಹಾಯ್ದ ಮಲ್ಲಿಕಾರ್ಜುನ್ ಖರ್ಗೆಯವರು, ಸುದ್ದಿ ವಾಹಿನಗಳ ಮಾಲಿಕರು ಶ್ರೀಮಂತರ ಕೈಯಲ್ಲಿದ್ದು, ಹಲವು ಸುದ್ದಿವಾಹಿನಿಗಳು ಒಬ್ಬ ಮಾಲೀಕರ ಕೈಯಲ್ಲಿವೆ ಎಂದರು.
ಕಲ್ಯಾಣ ಕರ್ನಾಟಕಕ್ಕೆ 371(ಜೆ) ಜಾರಿ ಕುರಿತು ವಿವರಿಸಿದ ಅವರು, ಯಾರಾರೋ ಏನೇನೋ ಮಾತನಾಡುತ್ತಿದ್ದಾರೆ. ಆ ಕುರಿತು ಚಳುವಳಿ ಮಾಡಿದ್ದಾರೆ ಎಂದು ಹೇಳುತ್ತಾರೆ. ಅದರ ಜಾರಿ ಕುರಿತು ಮಾತನಾಡುತ್ತಿಲ್ಲ. ಕೇವಲ ಬಾಯಿಗೆ ಬಂದಂತೆ ಹೇಳಿಕೆ ಕೊಡುತ್ತಾರೆ ಎಂದು ಕೇಂದ್ರ ಸಚಿವ ಭಗವಂತ್ ಖೂಬಾ ಅವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ಮಾಡಿದ ಖರ್ಗೆಯವರು, ವಿಶೇಷ ಮೀಸಲಾತಿ ಸೌಲಭ್ಯದ ರೂಪುರೇಷೆ ಹಾಗೂ ಯೋಜನೆ ಸಿದ್ಧಪಡಿಸುವ ಕುರಿತು ಯಾರೂ ಯೋಚನೆ ಮಾಡಿರಲಿಲ್ಲ. ನಾನು ಮತ್ತು ಮಾಜಿ ಮುಖ್ಯಮಂತ್ರಿ ದಿ. ಧರ್ಮಸಿಂಗ್ ಅವರು ಸೇರಿ ಆ ಕುರಿತು ನಿರ್ಧಿಷ್ಟ ರೂಪುರೇಷೆ ಸಿದ್ಧಪಡಿಸಿ, ಸೋನಿಯಾಗಾಂಧಿ ಅವರ ಬೆಂಬಲದಿಂದ ಬೇರೆ ರಾಜಕೀಯ ಪಕ್ಷಗಳ ಬೆಂಬಲ ಪಡೆದು ಡಾ. ಮನಮೋಹನಸಿಂಗ್ ಅವರ ನೇತೃತ್ವದಲ್ಲಿನ ಸರ್ಕಾರವು ವಿಶೇಷ ಸೌಲಭ್ಯ ಜಾರಿಗೆ ತರುವಂತೆ ಶ್ರಮಿಸಿದೆವು ಎಂದು ವಿವರಿಸಿದರು.
ರಾಜ್ಯದ ಅರಣ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ, ಮಾಜಿ ಸಚಿವ ರಾಜಶೇಖರ್ ಪಾಟೀಲ್ ಮುಂತಾದವರು ಮಾತನಾಡಿದರು. ವೇದಿಕೆಯ ಮೇಲೆ ಸಚಿವ ಕೆ. ರಹೀಂಖಾನ್, ರಾಜ್ಯ ವಿಧಾನ ಪರಿಷತ್ ಸದಸ್ಯರಾದ ಅರವಿಂದಕುಮಾರ್ ಅರಳಿ, ಡಾ. ಚಂದ್ರಶೇಖರ್ ಪಾಟೀಲ್, ಭೀಮರಾವ್ ಪಾಟೀಲ್, ಮಾಜಿ ಶಾಸಕರಾದ ಅಶೋಕ್ ಖೇಣಿ, ವಿಜಯಸಿಂಗ್, ಶ್ರೀಮತಿ ಮಾಲಾ ಬಿ. ನಾರಾಯಣರಾವ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.