ಕಲಬುರಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಂಸದ ಡಾ. ಜಾಧವ್ ಭೇಟಿ: ವೈದ್ಯ, ಸಿಬ್ಬಂದಿಗಳಿಗೆ ತರಾಟೆ

0
63

ಕಲಬುರಗಿ: ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಂಸದ ಡಾ. ಉಮೇಶ್ ಜಾಧವ್ ಅವರು ಗುರುವಾರ ಬೆಳಿಗ್ಗೆ ಹಠಾತ್ ಭೇಟಿ ನೀಡಿ, ಅಲ್ಲಿನ ಅವ್ಯವಸ್ಥೆ ಹಾಗೂ ಸಿಬ್ಬಂದಿಗಳು, ವೈದ್ಯರು ಸಕಾಲಕ್ಕೆ ಕರ್ತವ್ಯಕ್ಕೆ ಹಾಜರಾಗದೇ ಇರುವುದರ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಬೆಳಿಗ್ಗೆ ೯ ಗಂಟೆಯ ಸುಮಾರಿಗೆ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಸಂಸದರು ಹೆರಿಗೆ ಕೋಣೆ ಸೇರಿದಂತೆ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ರೋಗಿಗಳು ಅಲ್ಲಿನ ಅವ್ಯವಸ್ಥೆ ಹಾಗೂ ಸಿಬ್ಬಂದಿ ಮತ್ತು ವೈದ್ಯರ ನಿರ್ಲಕ್ಷ್ಯದ ವಿರುದ್ಧ ಸಂಸದರ ಮುಂದೆ ಅಳಲು ತೋಡಿಕೊಂಡರು.

Contact Your\'s Advertisement; 9902492681

ವೈದ್ಯ, ಸಿಬ್ಬಂದಿಗಳು ತಪಾಸಣೆಗೆ ಕೋರಿದರೂ ಸಹ ಕೇಳುವುದಿಲ್ಲ. ಸಿಬ್ಬಂದಿಗಳಂತೂ ರಾತ್ರಿ ಸಮಯದಲ್ಲಿ ತೊಂದರೆ ಕಾಣಿಸಿಕೊಂಡಾಗ ತಪಾಸಣೆ ಕೈಗೊಳ್ಳಲು ಹೇಳಿದರೆ ನಾವು ಮಲಗುವುದನ್ನು ಬಿಟ್ಟು ನಿಮ್ಮದನ್ನೇ ಮಾಡುತ್ತೇವೆ ಎಂದು ಕೊಂಕು ಮಾತುಗಳನ್ನಾಡಿ ಮಲಗಿಬಿಡುತ್ತಾರೆ. ಕುಡಿಯುವ ನೀರಿನ ತೊಂದರೆ ಇದೆ. ಶೌಚಾಲಯಗಳಿಗೆ ಬೀಗ ಹಾಕಿದ್ದರಿಂದ ಸಮಸ್ಯೆ ಆಗಿದೆ ಎಂದು ಹಲವಾರು ಮಹಿಳಾ ರೋಗಿಗಳು ಅವಲತ್ತುಕೊಂಡರು.

ಬೆಳಿಗ್ಗೆ ೯ ಗಂಟೆಯೊಳಗೆ ಎಲ್ಲ ವಾರ್ಡ್‌ಗಳನ್ನು ಸ್ವಚ್ಛಗೊಳಿಸಬೇಕು. ಇನ್ನೂವರೆಗೂ ಆ ಕೆಲಸ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಸಂಸದರು, ಕರ್ತವ್ಯಕ್ಕೆ ಇನ್ನೂ ಸಿಬ್ಬಂದಿಗಳು ಹಾಗೂ ವೈದ್ಯರು ಹಾಜರಾಗದೇ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಸಂಸದರು ವೈದ್ಯರನ್ನು ಭೇಟಿ ಮಾಡಲು ಅವರ ಕೋಣೆಗೆ ತೆರಳುವ ಮಾರ್ಗದಲ್ಲಿ ಮಹಿಳಾ ವೈದ್ಯರು ಎದುರಾದರು. ಅವರಿಗೆ ಸಮಯ ಪ್ರಜ್ಞೆಯ ಕುರಿತು ಸಂಸದರು ಪ್ರಶ್ನಿಸಿದರು. ಅಲ್ಲದೇ ಶೌಚಾಲಯಗಳಿಗೆ ಬೀಗ ಹಾಕಿರುವುದಕ್ಕೆ ತೀವ್ರ ತರಾಟೆಗೆ ತೆಗೆದುಕೊಂಡರು.

ನೀವು ರೋಗಿಗಳ ಸೇವೆ ಮಾಡಬೇಕು. ಮನೆಯಲ್ಲಿ ನಿಮ್ಮ ಅಕ್ಕ, ತಂಗಿ, ತಾಯಿ, ಅಮ್ಮ ಮುಂತಾದವರಿಗೆ ಈ ಗತಿ ಬಂದಿದ್ದರೆ ಏನು ಮಾಡುತ್ತಿದ್ದೀರಿ? ಎಂದು ಮಹಿಳಾ ವೈದ್ಯೆಯನ್ನು ಸಂಸದರು ಪ್ರಶ್ನಿಸಿದರು. ಕೂಡಲೇ ಶೌಚಾಲಯ ಬಳಕೆಗೆ ಅವಕಾಶ ಕಲ್ಪಿಸಬೇಕು ಎಂದು ಅವರು ಸೂಚಿಸಿದರು.

ಸಕಾಲಕ್ಕೆ ಬರಬೇಕು. ಶುಚಿತ್ವ ಕಾಪಾಡಬೇಕು. ಎಲ್ಲ ಸೌಲಭ್ಯಗಳನ್ನು ರೋಗಿಗಳಿಗೆ ಕಲ್ಪಿಸಬೇಕು. ಸರಿಯಾಗಿ ಕೆಲಸ ಮಾಡದೇ ಹೋದಲ್ಲಿ ಕೆಲಸದಿಂದ ತೆಗೆದುಹಾಕಲಾಗುವುದು ಎಂದು ಸಂಸದರು ಇದೇ ಸಂದರ್ಭದಲ್ಲಿ ವೈದ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ತಾಕೀತು ಮಾಡಿದರು. ಬಹುತೇಕ ರೋಗಿಗಳು ಆಸ್ಪತ್ರೆಯಲ್ಲಿನ ಅವ್ಯವಸ್ಥೆ, ಅಸಡ್ಡೆ, ನಿರ್ಲಕ್ಷ್ಯದ ವಿರುದ್ಧ ಸಂಸದರ ಮುಂದೆ ದೂರುಗಳನ್ನು ಹೇಳಿಕೊಂಡರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here