ನಾರಿ ಶಕ್ತಿ ವಂದನ್ ಅಭಿನಂದನ್ ವಾಕಥಾನ್ ನಲ್ಲಿ ಹೇಳಿಕೆ
ಕಲಬುರಗಿ : ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾರತದ ಮಹಿಳೆಯರಿಗೆ ವಿಶೇಷ ಪ್ರಾತಿನಿಧ್ಯ ನೀಡಿ ವಿಕಸಿತ ಭಾರತದ ಶಕ್ತಿಯಾಗಿ ನಿಲ್ಲುವಂತೆ ಮಾಡಿದ್ದಾರೆ ಎಂದು ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಿ ಜಾಧವ್ ಹೇಳಿದರು.
ಕಲ್ಬುರ್ಗಿಯ ನಗರೇಶ್ವರ ಶಾಲೆಯಿಂದ ಮಾರ್ಕೆಟ್ ರಸ್ತೆಯ ನೇತಾಜಿ ಪ್ರತಿಮೆ ವರೆಗೆ ಮಾರ್ಚ್ ಆರರಂದು ಬುಧವಾರ ನಡೆದ ” ನಾರಿ ಶಕ್ತಿ ವಂದನ ಅಭಿನಂದನ್ ವಾಕಥಾನ್ ” ಹಾಗೂ ಪಶ್ಚಿಮ ಬಂಗಾಳದ ಬರಸಾತ್ ನಲ್ಲಿ ಪ್ರಧಾನಮಂತ್ರಿಯವರು ಭಾಗವಹಿಸಿದ ನಾರಿ ಶಕ್ತಿ ವಂದನ್ ಅಭಿನಂದನ ಆನ್ಲೈನ್ ಕಾರ್ಯಕ್ರಮದ ವೀಕ್ಷಣೆಯ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಪ್ರಧಾನಮಂತ್ರಿಯವರು ಮಹಿಳೆಯರಿಗೆ ಆದ್ಯತೆ ನೀಡಿ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಮಹಿಳಾ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ನೇಮಿಸಿದರಲ್ಲದೆ ಹಣಕಾಸು ಖಾತೆಯನ್ನು ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ ನೀಡಿ ಮಹಿಳೆಯರಿಗೆ ಗೌರವ ಸಲ್ಲಿಸಿದ್ದಾರೆ.
ಮಹಿಳೆಯರಿಗೆ ಶೇಕಡ 33 ರಷ್ಟು ಮೀಸಲಾತಿ ಹೆಚ್ಚಿಸುವ ನಾರಿ ಶಕ್ತಿ ಅಭಿನಂದನ್ ಮಸೂದೆ ಜಾರಿ ಮಾಡಿದರು. ನೂತನ ಪಾರ್ಲಿಮೆಂಟಿನಲ್ಲಿ ಮೊಟ್ಟಮೊದಲಿಗೆ ಅನುಮೋದನೆಗೊಂಡ ಮಸೂದೆ ಇದಾಗಿದ್ದು ಅದರಲ್ಲಿ ಮಹಿಳೆಯರಿಗೆ ಹೆಚ್ಚು ವೇಳೆ ಚರ್ಚೆಗೆ ಅವಕಾಶ ಮಾಡಿಕೊಟ್ಟದ್ದು ಅವಿಸ್ಮರಣೀಯ ಎಂದರು.
ದೇಶದಲ್ಲಿ ಅತ್ಯಧಿಕ ಮಹಿಳೆಯರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಅವಕಾಶ ನೀಡಿದೆಯಲ್ಲದೆ ಸಚಿವ ಸಂಪುಟದಲ್ಲೂ ಪ್ರಾತಿನಿಧ್ಯವನ್ನು ಪ್ರಧಾನಿಯವರು ಕೊಡಿಸಿದ್ದಾರೆ. ಇತ್ತೀಚೆಗಿನ ಕೇಂದ್ರ ಬಜೆಟ್ ನಲ್ಲಿ ಲಕ್ ಪತಿ ದೀದಿ ವಿಶೇಷ ಯೋಜನೆ ಜಾರಿ ಮಾಡಿ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಹೊಂದುವಂತೆ ಮಾಡಿದ್ದಾರೆ.
ದೇಶದ ಮಹಿಳೆಯರು ಮೋದಿ ಆಡಳಿತ ಮೆಚ್ಚಿಕೊಂಡ ಪರಿಣಾಮವಾಗಿ ಇತ್ತೀಚಿನ ಎಲ್ಲ ಚುನಾವಣೆಗಳಲ್ಲೂ ಅತ್ಯಧಿಕ ಬಹುಮತದಿಂದ ಗೆಲ್ಲುತ್ತಿರುವುದು ಸಾಕ್ಷಿಯಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಬಿಜೆಪಿಯ ನಗರಾಧ್ಯಕ್ಷರಾದ ಚಂದು ಬಿ. ಪಾಟೀಲ್ ಹಾಗೂ ಮಹಿಳಾ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು.