ಪತ್ರಿಕೆಗಳು ಅಭಿವೃದ್ಧಿಗೆ ಪೂರಕವಾಗಿರಲಿ: ಡಾ. ಸುರೇಶ್ ಶರ್ಮಾ
ಕಲಬುರಗಿ: ಪ್ರಸ್ತುತದ ದಿನಮಾನಗಳಲ್ಲಿ ಪತ್ರಿಕೆಗಳನ್ನು ನಡೆಸುವುದು ಸರಳ ಕೆಲಸವಲ್ಲ. ಉದ್ಯಮವಾಗಿ ಮಾರ್ಪಟ್ಟಿರುವ ಪತ್ರಿಕೋದ್ಯಮವು ಲಾಭ ನಷ್ಟದ ಲೆಕ್ಕಿಸದೇ ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕು ಎಂದು ಲೋಕೋಪಯೋಗಿ ಇಲಾಖೆ ಅಧೀಕ್ಷಕ ಎಂಜಿನಿಯರ್ ಸುರೇಶ್ ಶರ್ಮಾ ಹೇಳಿದರು.
ನಗರದ ಹೊರವಲಯದ ಕಪನೂರ ಎರಡನೇ ಹಂತದ ಕೈಗಾರಿಕಾ ಪ್ರದೇಶದಲ್ಲಿ ನೃಪತುಂಗ ಪ್ರಾದೇಶಿಕ ದಿನಪತ್ರಿಕೆಯ ನೂತನ ಮುದ್ರಣ ಘಟಕ ಉದ್ಘಾಟಿಸಿ ಮಾತನಾಡಿದರು.
ನೃಪತುಂಗ ಪತ್ರಿಕೆಯು ಕಳೆದ ೪೦ವರ್ಷಗಳಲ್ಲಿ ಯಾರ ಬಗ್ಗೆಯೂ ಮಾನಹಾನಿಕರ ಸುದ್ದಿಗಳನ್ನು ಬರೆದಿಲ್ಲ. ಈ ಪತ್ರಿಕೆಯು ಸಮಾಜದ ಅಭಿವೃದ್ಧಿಗೆ ಪತ್ರಿಕೆ ಪೂರಕವಾಗಿ ಶ್ರಮಿಸಿದೆ. ಇದರ ಸಂಪಾದಕ ಶಿವರಾಯ ದೊಡ್ಡಮನಿ ಅವರು ಸಮಾಜದ ಹಿತಚಿಂತಕರಾಗಿದ್ದಾರೆ ಎಂದು ಹೇಳಿದರು.
ಕರ್ನಾಟಕ ಪೀಪಲ್ ಎಜುಕೇಶನ್ ಸೊಸೈಟಿ ಅಧ್ಯಕ್ಷ ರಾಧಾಕೃಷ್ಣ ಆರ್, ಮಾತನಾಡಿ, ಇಂದು ಪತ್ರಿಕೆಗಳನ್ನು ನಡೆಸುವುದು ಬಹಳ ಕಷ್ಟವಿದೆ. ಇಂತಹ ಸಂದರ್ಭದಲ್ಲಿ ಶಿವರಾಯ ದೊಡ್ಡಮನಿ ಅವರು, ಕಷ್ಟಪಟ್ಟು ಪ್ರಾದೇಶಿಕ ಪತ್ರಿಕೆ ನಡೆಸುವಷ್ಟು ಹಂತಕ್ಕೆ ಬಂದಿದ್ದಾರೆ. ಅವರಿಗೆ ಮತ್ತಷ್ಟು ಯಶಸ್ಸು ಸಿಗಲಿ ಎಂದರು.
ಶಿವರಾಯ ದೊಡ್ಡಮನಿ ಪ್ರಾಸ್ತಾವಿಕ ವಾಗಿ ಮಾತನಾಡಿ, ಹೈದರಾಬಾದ್ ಕರ್ನಾಟಕ ಭಾಗದಲ್ಲಿ ವಿಶೇಷವಾಗಿ ದಲಿತ ಸಮುದಾಯದ ಕಷ್ಟ-ಸುಖಗಳಿಗೆ ಸ್ಪಂದಿಸುವ ಪತ್ರಿಕೆಗಳು ಇರಲಿಲ್ಲ. ೧೯೮೪ರಲ್ಲಿ ಪತ್ರಿಕೆ ಆರಂಭಿಸಿದ ಸಂದರ್ಭದಲ್ಲಿ ಪತ್ರಿಕೆ ನಡೆಸಲು ಬೇಕಾದ ಯಂತ್ರೋಪಕರಣ, ಮೂಲ ಸೌಕರ್ಯವೂ ನಮ್ಮಲ್ಲಿ ಇರಲಿಲ್ಲ. ೪೦ ವರ್ಷಗಳಲ್ಲಿ ಹಲವು ಏಳು ಬೀಳುಗಳ ನಡುವೆ ಪತ್ರಿಕೆಯು ಬೆಳೆದು ನಿಂತಿದೆ ಎಂದು ಹೇಳಿದರು.
‘ಶಿವರಾಯ ದೊಡ್ಡಮನಿ ಅವರು ಯಾವುದೇ ಆಮಿಷಗಳಿಗೆ ಒಳಗಾಗದೆ ಈ ಭಾಗದಲ್ಲಿ ಒಳ್ಳೆಯ ಹೆಸರು ಗಳಿಸಿಕೊಂಡಿರುವುದರ ಜತೆಗೆ ಉತ್ತಮ ಸಂಪಾದಕರಾಗಿಯೂ ಗುರುತಿಸಿ ಕೊಂಡಿದ್ದಾರೆ’ ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ್ ತಿಳಿಸಿದರು.
ಚಿಂತಕ ಮಾರುತಿರಾವ್ ಗೋಖಲೆ ಮಾತನಾಡಿ,ಮಾಧ್ಯಮದಲ್ಲಿ ಏಕಸ್ವಾಮ್ಯವಿದೆ. ಆದರೂ ಶಿವರಾಯ ದೊಡ್ಡಮನಿ ಅವರು ನಿರಂತರವಾಗಿ, ಪ್ರಾಮಾಣಿಕವಾಗಿ ಪತ್ರಿಕೆ ನಡೆಸಿಕೊಂಡು ಬಂದಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮ್ಮವೇ ಆದ ಪತ್ರಿಕೆಗಳು ಇಲ್ಲ ಎಂದುಕೊAಡು ಮೂಕನಾಯಕ ಸೇರಿದಂತೆ ಹಲವು ಪತ್ರಿಕೆ ಆರಂಭಿಸಿದ್ದರು. ಆ ನಿಟ್ಟಿನಲ್ಲಿ ಶಿವರಾಯ ದೊಡ್ಡಮನಿ ಅವರು ಸಾಗುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಆಣದೂರಿನ ವರಜ್ಯೋತಿ ಭಂತೇಜಿ, ಹಿರಿಯ ವೈದ್ಯ ಎಚ್.ಎಸ್. ಕಟ್ಟಿ, ನೀರಾವರಿ ಇಲಾಖೆಯ ಮುಖ್ಯ ಎಂಜಿನಿಯರ್ ವಿಜಯ ದಶರಥ ಸಂಗನ್, ಜೆಸ್ಕಾಂ ಎಇಇ ಬಿ.ಆರ್.ಬುದ್ಧಾ, ವಾರ್ತಾ ಇಲಾಖೆಯ ಉಪ ನಿರ್ದೇಶಕ ಜಿ.ಬಿ.ಸಿದ್ದೇಶ್ವರಪ್ಪ, ಬಾಬುರಾವ ದಂಡಿನ್, ಪತ್ರಕರ್ತರಾದ ಬಾಬುರಾವ ಯಡ್ರಾಮಿ, ದೇವೇಂದ್ರಪ್ಪ ಕಪನೂರ, ಭವಾನಿಸಿಂಗ್, ಶರಣು ಜಿಡಗಾ ಹಾಜರಿದ್ದರು.