ಕಲಬುರಗಿ: ಪತ್ರಕರ್ತರಿಗಾಗಿ ಸರ್ಕಾರದ ನಿವೇಶನದಲ್ಲಿ ರಿ ಕ್ರಿಯೇಶನ್ ಕ್ಲಬ್ ನಿರ್ಮಾಣ ಮಾಡುವುದಾಗಿ ಸಂಸದ ಡಾ. ಉಮೇಶ ಜಾಧವ ಭರವಸೆ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಲಬುರಗಿ ಜಿಲ್ಲಾ ಘಟಕವು ಗುರುವಾರ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಸಂಸದರ ಅನುದಾನದಲ್ಲಿ ಸಾಂಸ್ಕøತಿಕ ಭವನ (ಸಂಸದರ ಅನುದಾನದಲ್ಲಿ ನವೀಕೃತಗೊಂಡ ) ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರಾದವರು ಸಮಾಜದ ಕಟ್ಟ ಕಡೆಯ ವ್ತಕ್ತಿಗೆ ಸಾಮಾಜಿಕ ನ್ಯಾಯ ಕೊಡಿಸುವಲ್ಲಿ ಅಹರ್ನಿಶಿ ಶ್ರಮಿಸುತ್ತಿದ್ದು, ಅವರ ವಿಶ್ರಾಂತಿ ಹಾಗೂ ಇನ್ನಿತರ ಚಟುವಟಿಕೆಗಳಿಗೆ ಇದು ಅಗತ್ಯವಾಗಿದ್ದು, ಈ ದಿಸೆಯಲ್ಲಿ ಮನಪೂರ್ವಕವಾಗಿ ಕೆಲಸ ಮಾಡುವೆ ಎಂದು ಅವರು ಹೇಳಿದರು.
ಐದು ವರ್ಷದ ನನ್ನ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ಪಾರ್ಲಿಮೆಂಟ್ ನಲ್ಲಿ ಹೆಚ್ಚಿನ ಪ್ರಶ್ನೆ ಕೇಳುವ ಮೂಲಕ ಈ ಭಾಗವನ್ನು ಅತ್ಯಂತ ಸಮರ್ಥವಾಗಿ ಪ್ರತಿನಿಧಿಸಿದ್ದೇನೆ ಎಂಬ ತೃಪ್ತಿ ನನಗಿದೆ ಎಂದು ತಿಳಿಸಿದರು.
2019- 20ನೇ ಸಾಲಿನ 12 ಲಕ್ಷ ರೂ. ಅನುದಾನದಲ್ಲಿ ಸಭಾಂಗಣವನ್ನು ನವೀಕರಣಗೊಳಿಸಲಾಗಿದೆ. ಇನ್ನೂ ಹೆಚ್ಚಿನ ಅನುದಾನ ಕೂಡ ನೀಡಲಾಗುವುದು ಎಂದು ತಿಳಿಸಿದರು.
ರಾಜಕಾರಣಿಗಳಾದವರು ವರ್ಕೋಹಾಲಿಕ್ ಕಲ್ಚರ್ ಬೆಳೆಸಿಕೊಂಡರೆ ಅಂಥವರಿಗೆ ಮುಂದಿನ ದಿನಗಳಲ್ಲಿ ಭವಿಷ್ಯವಿದೆ ಎಂದು ಹೇಳಿದ ಅವರು, ಈ ಕಾರಣಕ್ಕಾಗಿಯೇ ನನಗೆ ಮತ್ತೊಮ್ಮೆ ಬಿಜೆಪಿಯಿಂದ ಟಿಕೆಟ್ ನೀಡಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿದ್ದ ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ ಮಾತನಾಡಿ, ಸ್ವಾತಂತ್ರ್ಯ ನಂತರವೂ ಹಳ್ಳಿಗಳಲ್ಲಿ ಕುಡಿವ ನೀರಿನ ಸಮಸ್ಯೆಯಿದ್ದು, ಜಿಲ್ಲೆಯಲ್ಲಿ ಮರಳು ದಂಧೆ ಅವ್ಯಾಹತವಾಗಿ ನಡೆದಿದ್ದು, ಇದಕ್ಕೆ ಪತ್ರಕರ್ತರಾದವರು ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಪತ್ರಿಕಾ ಭವನಕ್ಕೆ ವೈಯಕ್ತಿಕವಾಗಿ ಎರಡು ವಾಟರ್ ಫಿಲ್ಟರ್ ಕೂಡ ದೇಣಿಗೆ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀಶೈಲಂ ಸಾರಂಗಮಠ ಹಾಗೂ ಸುಲಫಲ ಮಠದ ಜಗದ್ಗುರು ಡಾ. ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮಠ, ಮಂದಿರ, ಮಸೀದಿಗಳಿಗೆ ಅನುದಾನ ಕೊಡುವುದಕ್ಕಿಂತ ಜನರ ಸಮಸ್ಯೆಗಳಿಗೆ ಸ್ಪಂದಿಸುವ ತಾಯಿ ಹೃದಯ ಇರುವ ಪತ್ರಕರ್ತರ ವಿಶ್ರಾಂತಿ ಇತರೆ ಚಟುವಟಿಕೆಗಳನ್ನು ನಡೆಯುವ ಪತ್ರಿಕಾ ಭವನಗಳಿಗೆ ಅನುದಾನ ಕೊಡುವುದು ಅಗತ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾಧ್ಯಮ ಮಾನ್ಯತಾ ಸಮಿತಿ ಸದಸ್ಯ ಹಣಂಮತರಾವ ಭೈರಾಮಡಗಿ ವೇದಿಕೆಯಲ್ಲಿದ್ದರು. ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಡಾ. ಶಿವರಂಜನ ಸತ್ಯಂಪೇಟೆ ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷ ಸುರೇಶ ಬಡಿಗೇರ ಸ್ವಾಗತಿಸಿದರು.
ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಬಾಬುರಾವ ಕೋಬಾಳ ಪ್ರಾರ್ಥನೆ ಗೀತೆ ಹಾಡಿದರು. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಭೀಮಾಶಂಕರ ಫಿರೋಜಾಬಾದ ವಂದಿಸಿದರು.