ಕಲಬುರಗಿ: ಇಲ್ಲಿನ ಶ್ರೀ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ, ಬಸವ ಪ್ರಕಾಶನ ಹಾಗೂ ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಈ ಸಹೋದರ ಸಂಸ್ಥೆಗಳಿಂದ ಪ್ರಕಟಗೊಂಡ 121 ಗ್ರಂಥಗಳ ಲೋಕಾರ್ಪಣೆ ಕಾರ್ಯಕ್ರಮ ಮಾ. 17ರಂದು ಸಂಜೆ 5.30 ಗಂಟೆಗೆ ಚೇಂಬರ್ ಆಫ್ ಕಾಮರ್ಸ ಸಭಾಂಗಣದಲ್ಲಿ ಜರುಗಲಿದೆ ಎಂದು ಸಿದ್ಧಲಿಂಗೇರ್ಶವರ ಬುಕ್ ಡಿಪೋ ಮಾಲೀಕ ಮತ್ತು ಪ್ರಕಾಶಕ ಬಸವರಾಜ ಕೊನೇಕ್ ತಿಳಿಸಿದರು.
ಸುತ್ತೂರಿನ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಗ್ರಂಥಗಳ ಲೋಕಾರ್ಪಣೆ ಮಾಡಲಿದ್ದಾರೆ. ನೇತೃತ್ವವನ್ನು ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್.ಅಪ್ಪ, ವಹಿಸುವರು. ಕೃತಿಗಳ ಕುರಿತು ಖ್ಯಾತ ಸಾಹಿತಿ ಬಾಳಾಸಾಹೆಬ ಲೋಕಾಪೂರ ಮಾತನಾಡುವರು. ಮುಖ್ಯ ಅತಿಥಿಗಳಾಗಿ ಮಾಜಿ ಲೋಕಸಭಾ ಸದಸ್ಯ ಡಾ. ಬಸವರಾಜ ಪಾಟೀಲ ಸೇಡಂ, ಕರ್ನಾಟಕ ವಿವಿ ಕುಲಪತಿ ಡಾ. ಬಿ. ಕೆ. ತುಳಸಿಮಾಲಾ, ಅಧ್ಯಕ್ಷತೆಯನ್ನು ಗುಲ್ಬರ್ಗ ವಿವಿ ಕುಲಪತಿ ಡಾ. ದಯಾನಂದ ಅಗಸರ ವಹಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಲ್ಯಾಣ ಕರ್ನಾಟಕ ಸಾಹಿತ್ಯ ವಾಚಿಕೆ ಮಾಲಿಕೆ, ಸಾಹಿತ್ಯ ಮಾಲಿಕೆ, ಜನಪ್ರಿಯ ಮಾಲಿಕೆ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ (ಎನ್.ಇ.ಪಿ.) ಪುಸ್ತಕಗಳು ಬಿಡುಗಡೆಗೊಳ್ಳುತ್ತವೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಸರ್ಕಾರ, ಸಂಘ-ಸಂಸ್ಥೆಗಳಿಂದ ಪ್ರಶಸ್ತಿ ಪುರಸ್ಕøತರಾದ ನಮ್ಮ ಸಂಸ್ಥೆಯ ಸಲಹಾ ಸಮಿತಿ ಸದಸ್ಯರುಗಳಿಗೆ ಹಾಗೂ ಜೇವರ್ಗಿ ಸರ್ಕಾರಿ ಡಿಗ್ರಿ ಕಾಲೇಜಿನ ಗ್ರಂಥಪಾಲಕ ಡಾ. ವಿನೋದಕುಮಾರ ಅವರನ್ನು ಸನ್ಮಾನಿಸಲಾಗುವುದು ಎಂದರು. ಶಿವರಾಜ ಪಾಟೀಲ, ಡಾ. ಗವಿಸಿದ್ದಪ್ಪ ಪಾಟೀಲ, ಸಿದ್ಧಲಿಂಗ ಬಿ. ಕೊನೇಕ್, ಶರಣು ಬಿ. ಕೊನೇಕ್ ಇತರರಿದ್ದರು.
ಸಂಸ್ಥೆಯ 47ನೇ ವಾರ್ಷಿಕೋತ್ಸವದ ಅಂಗವಾಗಿ 121 ಪುಸ್ತಕ ಬಿಡುಗಡೆಯಾಗಲಿದ್ದು, ನಾವು ಮಾಡಿದ ದಾಖಲೆ ನಾವೇ ಮುರಿಯುತ್ತಿರುವುದು ಹೆಮ್ಮೆಯ ವಿಷಯ. ಸೈನಿಕರು ಹಾಗೂ ನಿವೃತ್ತ ಸೈನಿಕರ ಮಕ್ಕಳಿಗೆ ಸಂಸ್ಥೆಯ ಪುಸ್ತಕ ಹಾಗೂ ಸ್ಟೇಶನರಿ ಸಾಮಗ್ರಿಗಳ ಮೇಲೆ ವಿಶೇಷ ರಿಯಾಯಿತಿ ನೀಡಲಾಗುವುದು. -ಬಸವರಾಜ ಕೊನೇಕ್, ಪ್ರಕಾಶಕರು, ಕಲಬುರಗಿ.