ಕಲಬುರಗಿ: ವಿದ್ಯಾರ್ಥಿಗಳು ಅರಿವಿನ ಮೂಲಕ ತಾವು ಸಂಪಾದಿಸಿದ ಜ್ಞಾನವನ್ನು ಸಮಾಜದ ಒಳಿತಿಗೆ ಬಳಕೆ ಮಾಡುವ ಮೂಲಕ ತಾವು ಭವಿಷ್ಯದ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕು ಹಾಗೂ ಇತರರ ಬದುಕು, ಬವಣೆಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಚಿಂತಕ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿ ಪ್ರೊ ಯಶವಂತರಾಯ ಅಷ್ಠಗಿ ಹೇಳಿದರು.
ನಗರದ ಕಿರಿಯ ತಾಂತ್ರಿಕ ಶಾಲೆಯಲ್ಲಿ ಜರುಗಿದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಪ್ರೊ ಅಷ್ಠಗಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು ವಿದ್ಯಾರ್ಥಿಗಳು ಶಿಸ್ತು, ಸಮಯ ಪ್ರಜ್ಞೆ ಮತ್ತು ಜೀವನದಲ್ಲಿ ಯಶಸ್ಸುಗಳಿಸಲು ಆತ್ಮವಿಶ್ವಾಸ ಬಹಳ ಮುಖ್ಯವೆಂದು ವಿದ್ಯಾರ್ಥಿಗಳಿಗೆ ಕೆಲವು ನಿದರ್ಶನಗಳ ಮೂಲಕ ತಮ್ಮದೇ ಜೀವನದ ಕೆಲವೊಂದು ಅನುಭವದ ಘಟನೆಗಳನ್ನು ವಿವರಿಸಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ, ಕಿರಿಯ ತಾಂತ್ರಿಕ ಶಾಲೆಯ ಪ್ರಾಂಶುಪಾಲ ಹಾಗೂ ಸಾಹಿತಿ ಡಾ.ಕೆ.ಗಿರಿಮಲ್ಲ ಮಾತನಾಡಿ, ವಿದ್ಯಾರ್ಥಿಗಳು ತಮಗೆ ಸಿಗುವ ಅವಕಾಶಗಳನ್ನು ಶ್ರದ್ಧೆಯಿಂದ ಬಳಸಿಕೊಂಡು ಜೀವನದಲ್ಲಿ ಉನ್ನತ ಮಟ್ಟಕ್ಕೇರಲಿ ಮತ್ತು ಸಮಾಜ ಮತ್ತು ರಾಷ್ಟ್ರಕ್ಕೆ ಉತ್ತಮ ಕೊಡುಗೆ ವಿದ್ಯಾರ್ಥಿಗಳಿಂದ ಸಿಗುವಂತಾಗಬೇಕು ಮತ್ತು ಜ್ಞಾನ ಸಂಪಾದನೆಗೆ ಶ್ರಮಿಸಿದಷ್ಟು ವ್ಯಕ್ತಿತ್ವ ವಿಕಸನಗೊಳ್ಳುತ್ತದೆ
ಎಂದು ಸಾಹಿತಿ ಡಾ.ಕೆ ಗಿರಿಮಲ್ಲ ಅಭಿಪ್ರಾಯ ಪಟ್ಟರು.
ಸಮಾರಂಭದ ವೇದಿಕೆಯಲ್ಲಿ ಉಪನ್ಯಾಸಕರಾದ ಭಾವುರಾವ ಪಾಟೀಲ್, ಶಿವರಾಜ ಪಾಟೀಲ್, ರಾಕೇಶ್ ಚೌವ್ಹಾಣ್, ಸುವರ್ಣ ಚಟ್ಟೇರ ಉಪಸ್ಥಿತರಿದ್ದರು.
ಸಂಧ್ಯಾರಾಣಿ ಪ್ರಾರ್ಥನೆ ಗೈದರು, ಭಾವುರಾವ ಪಾಟೀಲ್ ಸ್ವಾಗತಿಸಿದರು, ರಾಕೇಶ್ ಚೌವ್ಹಾಣ್ ನಿರುಪಿಸಿದರು, ಚೆನ್ನಬಸಪ್ಪ ಪಾಟೀಲ್ ವಂದಿಸಿದರು.
ಕಿರಿಯ ತಾಂತ್ರಿಕ ಶಾಲೆಯ ಉಪನ್ಯಾಸಕರಾದ ಅನುಲತಾ ಸುಧಾರಾಣಿ,ಪ್ರೀಯಾ,ಸುಂನದಾ ಬಿರಾದಾರ್, ಶ್ಯಾಮ ಮಾನೆ ಸೇರಿದಂತೆ ಭೋದಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನಂತರ ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಶಾಲೆಯಿಂದ ಹೊರ ಹೋಗುವಾಗ ಒಂದು ಶಕ್ತಿಯನ್ನು ತುಂಬಿಕೊಂಡು ಹೋಗುತ್ತಾರೆ. ಅಂತಹ ಶಕ್ತಿ, ಸ್ಪೂರ್ತಿ ಸಮಾಜಕ್ಕೆ ಹರಡುವುದು ಅಗತ್ಯ, ಆ ಮೂಲಕ ನಮ್ಮ ಭಾರತದ ಅಪೇಕ್ಷೆಯನ್ನು ಈಡೇರಿಸುವುದು ಮುಖ್ಯ. -ಪ್ರೊ ಯಶವಂತರಾಯ ಅಷ್ಠಗಿ, ಜಿಲ್ಲಾ ಗೌರವ ಕಾರ್ಯದರ್ಶಿಗಳು, ಕಸಾಪ ಕಲಬುರಗಿ