ಹಿಂದಿ ದಿನದ ಬದಲು ಭಾರತದ ಭಾಷಾ ಸಮಾನತೆಯ ದಿನವಾಗಿ ಆಚರಿಸಲು ಆಗ್ರಹಿಸಿ ಪ್ರತಿಭಟನೆ

0
38

ಕಲಬುರಗಿ: ಕೇಂದ್ರ ಸರ್ಕಾರವು ಸೆಪ್ಟೆಂಬರ್ ೧೪ರಂದು ಅಚರಿಸುವ ಹಿಂದಿ ದಿನಾಚರಣೆಯ ಬದಲಾಗಿ ಭಾರತದ ಭಾಷಾ ಸಮಾನತೆಯ ದಿನವಾಗಿ ಅಚರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹಿಂದಿ ದಿನಾಚರಣೆ ನಕಲು ಕರಡು ಪ್ರತಿ ದಹಿಸಿ ಪ್ರತಿಭಟಿಸಿದರು.

ರಾಷ್ಟ್ರ ಭಾಷೆಯ ಹೆಸರಿನಲ್ಲಿ ಉತ್ತರದ ಕೆಲವೇ ಕೆಲವು ರಾಜ್ಯಗಳು ಮಾತನಾಡುವ ಭಾಷೆಯ ಬೆಳವಣಿಗೆ ಹಾಗೂ ಅಭಿವೃದ್ಧಿಗಾಗಿ ಹಿಂದಿ ಹೆಸರಿನ ದಿನವನ್ನು ಒಕ್ಕೂಟ ರಾಷ್ಟ್ರದ ಪ್ರಾದೇಶಿಕ ಭಾಷಾ ಸಮಾನತೆಯ ದಿನವಾಗಿ ಆಚರಿಸಬೇಕು ಎಂದು ಪ್ರತಿಭಟನೆಕಾರರು ಆಗ್ರಹಿಸಿದರು. ಸಂಘದ ಜಿಲ್ಲಾಧ್ಯಕ್ಷ ರವಿ ದೇಗಾಂವ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಶಾಂತ್ ಮಠಪತಿ, ಸಂತೋಷ್ ಪಾಟೀಲ್, ಆನಂದ್ ಪಾಲಕೆ, ಸತೀಶ್ ಪಾಟೀಲ್, ನವೀನ್ ಬಿರಾದಾರ್, ಮಲ್ಲಿಕಾರ್ಜುನ್ ಬೋಳಾ, ಅಶೋಕ್ ಪಾಟೀಲ್, ಬಸವರಾಜ್ ಮೇತ್ರೆ, ಶಿವು ಪಾಟೀಲ್, ಧರ್ಮ, ಪ್ರಶಾಂತ್ ಕೋರೆ ಮುಂತಾದವರು ಪಾಲ್ಗೊಂಡಿದ್ದರು.

Contact Your\'s Advertisement; 9902492681

ಭಾರತದ ಒಕ್ಕೂಟ ರಾಷ್ಟ್ರದಲ್ಲಿ ಪ್ರತಿಯೊಂದು ರಾಜ್ಯವು ಒಂದೊಂದು ಭಾಷೆ ಹಾಗೂ ಸಂಸ್ಕೃತಿಯನ್ನು ಹೊಂದಿದೆ. ಹಿಂದಿ ಭಾಷೆಗಿಂತಲೂ ಪುರಾತನ ಮತ್ತು ಪ್ರಾಚೀನ ಇತಿಹಾಸ ದೇಶದ ಹಲವು ರಾಜ್ಯಗಳ ರಾಜ್ಯ ಭಾಷೆಗಳಿಗೆ ಇದೆ. ಕೇಂದ್ರ ಸರ್ಕಾರದ ಸಂಪರ್ಕ ಭಾಷೆಯಾದ ಮಾತ್ರಕ್ಕೆ ಹಿಂದಿ ರಾಷ್ಟ್ರೀಯ ಮಾನ್ಯತೆ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಯ ವಿರೋಧಿ ಕ್ರಮವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕದ ಪ್ರತಿಯೊಂದು ರಂಗದಲ್ಲಿಯೂ ರಾಷ್ಟ್ರ ಭಾಷೆಯ ಹೆಸರಿನಲ್ಲಿ ಹಿಂದಿಯನ್ನು ಕೇಂದ್ರ ಸರ್ಕಾರವು ಬಲವಂತವಾಗಿ ಹೇರುತ್ತಿದೆ. ಒಕ್ಕೂಟ ರಾಜ್ಯಗಳು ಕಟ್ಟುವ ತೆರಿಗೆ ರೂಪದ ಸಾವಿರಾರು ಕೋಟಿ ರೂ.ಗಳಲ್ಲಿ ನಿಜವಾಗಿಯೂ ಸಿಂಹಪಾಲು ಹಿಂದಿಯೊಂದಕ್ಕೆ ನೀಡಿ ಉಳಿದ ಪ್ರಾದೇಶಿಕ ಭಾಷೆಗಳನ್ನು ಕೀಳಾಗಿ ಕಾಣಲಾಗುತ್ತಿದೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ತಮಿಳ್ನಾಡಿನ ಮಧುರೈನಲ್ಲಿ ಜರುಗಿದ ಪ್ರಾದೇಶಿಕ ರಾಜ್ಯ ಭಾಷಾ ಸಮ್ಮೇಳನದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ದಕ್ಷಿಣ ಭಾರತದಲ್ಲಿಯೇ ಅತೀ ಹೆಚ್ಚು ಹಿಂದಿ ಬಳಸಿರುವ ವಿಮಾನ ನಿಲ್ದಾಣ ಎಂದು ಘೋಷಣೆ ಮಾಡಿ ಚಲತಿಯಾ ವೈಜಯಂತಿ ಹೆಸರಿನ ಪ್ರಶಸ್ತಿ ನೀಡಲಾಯಿತು. ಇದು ಹಿಂದಿ ಹೇರಿಕೆಯ ಸ್ಪಷ್ಟ ನಿದರ್ಶನಕ್ಕೆ ಸಾಕ್ಷಿ ಎಂದು ಟೀಕಿಸಿದ ಅವರು, ಹುಬ್ಬಳ್ಳಿ ಅಪ್ಪಟ ಕನ್ನಡ ಮಾತನಾಡುವ ಜನರಿರುವ ನೆಲ. ಇಲ್ಲಿ ಹಿಂದಿಗೆ ಯಾವುದೇ ಸ್ಥಾನಮಾನ ಇಲ್ಲ. ಉದ್ದೇಶಪೂರ್ವಕವಾಗಿಯೇ ಕನ್ನಡ ಭಾಷೆಯ ಮೇಲೆ ಸವಾರಿ ಮಾಡಲು ಕೇಂದ್ರ ಸರ್ಕಾರ ತನ್ನ ಬೇಳೆ ಬೇಯಿಸಿಕೊಳ್ಳಲು ನಾಟಕ ಪ್ರದರ್ಶಿಸಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಎಲ್ಲ ಉದ್ಯೋಗ ನೇಮಕಾತಿಗಳ ಪರೀಕ್ಷೆಗಳು ಕಡ್ಡಾಯವಾಗಿ ಹಿಂದಿ, ಇಂಗ್ಲೀಷ್ ಭಾಷೆಗಳಲ್ಲಿಯೇ ಬರೆಯಲು ಆದೇಶಿಸಿರುವುದು, ನಾಮಫಲಕ, ಪ್ರಾಥಮಿಕ ಮತ್ತು ಪದವಿ ಶಿಕ್ಷಣ, ಅಂಚೆ ಕಚೇರಿ ಹೀಗೆ ಸಿಕ್ಕ ಸಿಕ್ಕ ಕಡೆ ಹಿಂದಿ ರಾಷ್ಟ್ರ ಭಾಷೆಯ ಹೆಸರಿನಲ್ಲಿ ಕಡ್ಡಾಯ ಮಾಡುತ್ತಿದ್ದು, ಇದು ಒಕ್ಕೂಟ ವ್ಯವಸ್ಥೆಗೆ ಮಾಡಿದ ದ್ರೋಹವಾಗಿದೆ ಎಂದು ಅವರು ವಿರೋಧಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here