ಕಲಬುರಗಿ; ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ ಶುಕ್ರವಾರ ನಡೆದ ವರ್ಣರಂಜಿತ ಸಮಾರಂಭದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ ಅವರು ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ ಡಾ. ಶಿವರಾಜ ಪಾಟೀಲ ಹಾಗೂ ಅವರ ಪತ್ನಿ ಶ್ರೀಮತಿ ಅನ್ನಪೂರ್ಣ ಅವರಿಗೆ ಪ್ರಶಸ್ತಿ ಪತ್ರ ಹಾಗೂ ಸ್ವರ್ಣಪದಕ ಒಳಗೊಂಡ ಪ್ರತಿಷ್ಠಿತ “ದಾಸೋಹ ಜ್ಞಾನ ರತ್ನ” ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿ ಪ್ರದಾನ ಮಾಡಿದ ಡಾ. ದಾಕ್ಷಾಯಿಣಿ ಅವ್ವಾಜಿ ಮಾತನಾಡಿ, ಶರಣಬಸವೇಶ್ವರ ಸಂಸ್ಥಾನದಿಂದ ಪೂರ್ವ ಪೀಠಾಧಿಪತಿಗಳ ಪುಣ್ಯತಿಥಿಯ ನಿಮಿತ್ತ ನಡೆಯುವ “ಉಚ್ಚಾಯಿ” (ಚಿಕ್ಕ ರಥ) ಎಳೆಯುವ ಸಮಾರಂಭದ ಈ ದಿನದಂದು ಪ್ರತಿಷ್ಠಿತ ದಾಸೋಹ ಜ್ಞಾನರತ್ನ ಪುರಸ್ಕಾರವನ್ನು 18 ನೇ ಶತಮಾನದ ಸಂತ ಮತ್ತು ಸಮಾಜ ಸುಧಾರಕ ಶರಣಬಸವೇಶ್ವರರ ಕಟ್ಟಾ ಭಕ್ತರಾದ ನ್ಯಾಯಮೂರ್ತಿ ಡಾ. ಶಿವರಾಜ್ ಪಾಟೀಲ್ ಮತ್ತು ಅವರ ಪತ್ನಿ ಅನ್ನಪೂರ್ಣ ಅವರಿಗೆ ಪ್ರದಾನ ಮಾಡುತ್ತಿರುವುದು ಗೌರವದ ವಿಷಯವಾಗಿದ್ದು ಅತೀ ಸಂತೋಷ ತಂದಿದೆ ಎಂದರು.
ನ್ಯಾಯಮೂರ್ತಿ ಡಾ. ಶಿವರಾಜ ಪಾಟೀಲರ ಜೀವನ ಮತ್ತು ಅವರು ಸಮಾಜಕ್ಕೆ ನೀಡಿದ ಕೊಡುಗೆಗಳು ಸಮಸ್ತ ಮನುಕುಲಕ್ಕೆ ಪಾಠವಾಗಬೇಕು. ಡಾ. ಪಾಟೀಲರ ಜೀವನವು ಶರಣಬಸವೇಶ್ವರರ ಆಶೀರ್ವಾದದಿಂದ ಮುನ್ನಡೆದಿದೆ, ಶರಣಬಸವೇಶ್ವರರ ಮೇಲೆ ನಂಬಿಕೆ ಇಟ್ಟವರು ಎಂದಿಗೂ ಜೀವನದಲ್ಲಿ ವಿಫಲವಾಗುವುದಿಲ್ಲ ಎಂದರು.
ನ್ಯಾಯಮೂರ್ತಿ ಡಾ. ಶಿವರಾಜ್ ಪಾಟೀಲ್ ಅವರ ಜೀವನದಂತೆ, ನನ್ನ ಜೀವನವೂ ಶರಣಬಸವೇಶ್ವರರ ಆಶೀರ್ವಾದದಿಂದ ಮಾರ್ಗದರ್ಶಿಸಲ್ಪಟ್ಟಿದೆ…ಎಂದ ಅವ್ವಾಜಿಯವರು, ಸಾಮಾನ್ಯ ಗೃಹಿಣಿಯಾದ ನನಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಸ್ಥಾನ ಮತ್ತು ದಾವಣಗೆರೆ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ಎರಡು ಗೌರವ ಡಾಕ್ಟರೇಟ್‍ಗಳನ್ನು ನೀಡಿ ಗೌರವಿಸಿದೆ.
ಪ್ರತಿಷ್ಠಿತ ದಾಸೋಹ ಜ್ಞಾನರತ್ನ ಪುರಸ್ಕಾರವನ್ನು ಸ್ವೀಕರಿಸಿ ಮಾತನಾಡಿದ 84ರ ಹರೆಯದ ನ್ಯಾಯಮೂರ್ತಿ ಡಾ. ಶಿವರಾಜ ಪಾಟೀಲ ಅವರು ನನ್ನ 17ನೇ ವಯಸ್ಸಿನಲ್ಲಿಯೇ ಶರಣಬಸವೇಶ್ವರರ ಪರಮ ಭಕ್ತನಾದೆ ಹಾಗೂ ಶರಣಬಸವೇಶ್ವರ ದೇವಸ್ಥಾನದ ದಾಸೋಹ ಮಹಾಮನೆಯಲ್ಲಿ ಪ್ರಸಾದ ಸೇವಿಸಿ ಬೆಳೆದ ನನಗೆ, ನನ್ನ ಕಷ್ಟದ ದಿನಗಳಲ್ಲಿ ಕಾಲೇಜು ಶಿಕ್ಷಣವನ್ನು ಮುಂದುವರಿಸಲು ಶರಣ ಸಂಸ್ಥಾನವು ಬಹಳ ಸಹಾಯ ಮಾಡಿದೆ. ನನ್ನ ಜೀವನದಲ್ಲಿ ನನಗೆ ಸುಮಾರು ಪ್ರಶಸ್ತಿಗಳು ಹಾಗೂ ಗೌರವ ಡಾಕ್ಟರೇಟ್ ಪುರಸ್ಕಾರಗಳು ದೊರೆತಿವೆ ಆದರೆ ನಾನು ಪಡೆದ ಎಲ್ಲಾ ಪ್ರಶಸ್ತಿಗಳಿಗಿಂತ ಇಂದು ಪಡೆದ ದಾಸೋಹ ಜ್ಞಾನರತ್ನ ಪ್ರಶಸ್ತಿ ಶ್ರೇಷ್ಠವಾಗಿದೆ ಎಂದು ಅಭಿಪ್ರಾಯ ಪಟ್ಟರು.
“17 ನೇ ವಯಸ್ಸಿನಲ್ಲಿ ಪ್ರಾರಂಭವಾದ ಶರಣಬಸವೇಶ್ವರ ಸಂಸ್ಥಾನದೊಂದಿಗಿನ ನನ್ನ ಬಾಂಧವ್ಯ ಇಂದಿಗೂ ಮುಂದುವರೆದಿದೆ. ಕಲಬುರಗಿಯಲ್ಲಿಯೇ ಇದ್ದು ಕಾಲೇಜು ವಿದ್ಯಾಭ್ಯಾಸವನ್ನು ನಡೆಸುವುದು ಹೇಗೆ ಎಂಬ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾಗ ಶರಣಬಸವೇಶ್ವರ ಸಂಸ್ಥಾನವು ನನಗೆ ಎಲ್ಲಾ ರೀತಿಯ ಸಹಾಯ ಮಾಡಿತು. ನಾಮಮಾತ್ರದ ವೆಚ್ಚದಲ್ಲಿ ಸಂಸ್ಥಾನ ನಡೆಸುತ್ತಿದ್ದ ಹಾಸ್ಟೆಲ್‍ನಲ್ಲಿ ಇದ್ದುಕೊಂಡು, ದಾಸೋಹಮನೆ ನನ್ನ ಕಾಲೇಜು ಶಿಕ್ಷಣ ಮುಗಿಯುವವರೆಗೂ ನನ್ನ ಹಸಿವನ್ನು ನೀಗಿಸಿತು” ಎಂದರು.
ಡಾ. ಪಾಟೀಲ್ ಮಾತನಾಡಿ, ನನ್ನ ಜೀವನದ ಪ್ರತಿ ನಿರ್ಣಾಯಕ ಘಟ್ಟದಲ್ಲಿ ಶರಣಬಸವೇಶ್ವರರು ನನಗೆ ಸರಿಯಾದ ಮಾರ್ಗದಲ್ಲಿ ಮಾರ್ಗದರ್ಶನ ನೀಡಿದರು, “ನಾನು ನನ್ನ ಕಾನೂನು ಅಭ್ಯಾಸವನ್ನು ಕಲಬುರಗಿಯಿಂದ ಬೆಂಗಳೂರಿಗೆ ಬದಲಾಯಿಸಲು ನಿರ್ಧರಿಸಿದಾಗ, ಮುಕ್ತಕಂಠದಿಂದ ಶರಣಬಸವೇಶ್ವರ ದೇವರ ಸಲಹೆಯನ್ನು ಕೇಳಿದೆ ಆಗ ನನಗೆ ದೇಗುಲದ ಗರ್ಭಗುಡಿಯಲ್ಲಿ ನನ್ನ ನೆಲೆಯನ್ನು ಬೆಂಗಳೂರಿಗೆ ಸ್ಥಳಾಂತರಿಸಲು ಹಸಿರು ನಿಶಾನೆ ಸಿಕ್ಕಿತು. ಅದು ಅಂತಿಮವಾಗಿ ನನ್ನ ಜೀವನದ ನಿರ್ಣಾಯಕ ಘಳಿಗೆಯಾಗಿದ್ದು, ನಾನು ಹೈಕೋರ್ಟ್‍ನ ನ್ಯಾಯಾಧೀಶನಾಗಲು ಮತ್ತು ನಂತರ ಸುಪ್ರೀಂ ಕೋರ್ಟ್ ನ್ಯಾಯಾಧೀಶನಾಗಲು ಸಹಾಯ ಮಾಡಿತು” ಎಂದು ಹೇಳಿದರು.
ಡಾ. ಶಿವರಾಜ ಪಾಟೀಲ ಅವರು ಶರಣಬಸವ ವಿಶ್ವವಿದ್ಯಾಲಯದ ಪ್ರಕಾಶನ ವಿಭಾಗವು ಪ್ರಕಟಿಸಿದ “ಕಲ್ಯಾಣ ಕರ್ನಾಟಕ ಶರಣ ಸಂಪದ”, “ಕಲ್ಯಾಣ ಕರ್ನಾಟಕ ಸಾಹಿತ್ಯ ಸಂಚಯ”, “ಕಲ್ಯಾಣ ಕರ್ನಾಟಕ ಶೋಧ ಸಿಂಚನ” ಮತ್ತು “ಮಹಾದಾಸೋಹಿ ಮತ್ತು ಮಹಾಮನ” ಎಂಬ ನಾಲ್ಕು ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿದರು.
ಶರಣಬಸವ ವಿಶ್ವವಿದ್ಯಾಲಯದಲ್ಲಿ ನ್ಯಾಯಮೂರ್ತಿ ಡಾ. ಶಿವರಾಜ ವಿ ಪಾಟೀಲ ಅಧ್ಯಯನ ಪೀಠ ಸ್ಥಾಪನೆಗೆ 11 ಲಕ್ಷ ರೂಪಾಯಿಗಳ ಚೆಕ್ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ ಅವರಿಗೆ ಪೆÇ್ರ. ಚೆನ್ನಾರೆಡ್ಡಿ ಪಾಟೀಲ ಹಸ್ತಾಂತರಿಸಿದರು. ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ ಅಧ್ಯಕ್ಷತೆ ವಹಿಸಿದ್ದರು. ಪೆÇ್ರ. ಕಲ್ಯಾಣರಾವ್ ಪಾಟೀಲ ಸ್ವಾಗತಿಸಿದರು. ರಾಯಚೂರಿನ, ನ್ಯಾಯಮೂರ್ತಿ ಡಾ. ಶಿವರಾಜ ವಿ ಪಾಟೀಲ ಪ್ರತಿμÁ್ಠನದ ಅಧ್ಯಕ್ಷ ಶ್ರೀ ಎಸ್. ಎಂ. ರೆಡ್ಡಿ, ವಿವಿಯ ಉಪಕುಲಪತಿ ಡಾ. ನಿರಂಜನ ವಿ. ನಿಷ್ಠಿ, ಕುಲಸಚಿವ ಡಾ. ಅನಿಲಕುಮಾರ ಬಿಡವೆ, ಡೀನ್ ಡಾ. ಲಕ್ಷ್ಮೀ ಪಾಟೀಲ್ ಮಾಕಾ, ಕುಲಸಚಿವ(ಮೌಲ್ಯಮಾಪನ) ಡಾ. ಎಸ್.ಎಚ್.ಹೊನ್ನಳ್ಳಿ, ಹಣಕಾಸು ಅಧಿಕಾರಿ ಡಾ. ಕಿರಣ್ ಮಾಕಾ ಸೇರಿದಂತೆ ಇತರ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.