ಕಲಬುರಗಿ: ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಮಾತನಾಡಿ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಿ ಪಕ್ಷಕ್ಕೆ ಮತ ಹಾಕಿಸಿದರೆ ನಾನು ಗೆಲ್ಲುವುದು ಶತಃಸಿದ್ದ ಎಂದರು.
ಕಮಲಾಪುರದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ ರಾಜ್ ಪ್ರಿಯಾಂಕ್ ಖರ್ಗೆ ಮಾತನಾಡಿ ನಿಮ್ಮಮತದ ಶಕ್ತಿಯ ಪರಿಣಾಮವಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಜೊತೆಗೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದು ನುಡಿದಂತೆ ನಡೆದ ಸರ್ಕಾರವಾಗಿದೆ ಎಂದರು.
ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ 52,000 ಕೋಟಿ ಬೇಕಾಗುತ್ತದೆ. ಆದರೂ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಬಿಜೆಪಿ ನಮ್ಮ ಯೋಜನೆಗಳನ್ನು ಬಿಟ್ಟಿಬಾಗ್ಯ ಎಂದು ಟೀಕಿಸಿದೆ. ಆದರೆ ನಮ್ಮ ಸರ್ಕಾರ ಜನರು ಕಟ್ಟಿದ ತೆರಿಗೆಯನ್ನೇ ಗ್ಯಾರಂಟಿ ಯೋಜನೆಗಳ ಮೂಲಕ ವಾಪಸ್ ಕೊಟ್ಟಿದ್ದೇವೆ. ಬಿಜೆಪಿಗರು ಇಂತಹ ಯಾವದಾದರೊಂದು ಯೋಜನೆ ಜಾರಿಗೆ ತಂದಿದ್ದರೆ ಹೇಳಲಿ ಎಂದು ಸವಾಲಾಕಿದರು.
ಕೇಂದ್ರ ಸರ್ಕಾರ ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ ಎಂದ ಸಚಿವರು ಸಂಸದ ಉಮೇಶ ಜಾಧವ ಅವರು ಕೇಂದ್ರದಿಂದ ಅನುದಾನ ಬಿಡುಗಡೆ ಮಾಡಿಸುವಲ್ಲಿ ವಿಫಲರಾಗಿದ್ದಾರೆ. ಜಿಲ್ಲೆಯ ಅಭಿವೃದ್ದಿ ಮಾಡುವಲ್ಲಿ ಕೂಡಾ ವಿಫಲರಾಗಿರುವ ಜಾಧವ, ಕೇವಲ ಐದು ಯೋಜನೆ ಮಾಡಿರುವುದನ್ನು ತೋರಿಸಲಿ. ಕೋಲಿ, ಕಬ್ಬಲಿಗ ಸಮಾಜವನ್ನ ಎಸ್ ಟಿ ಗೆ ಸೇರಿಸುತ್ತೇನೆ ಎಂದು ಭರವಸೆ ನೀಡಿದ್ದರು ಈಗ ಏನು ಹೇಳುತ್ತಾರೆ? ಎಂದರು.
ಯುವಕರ ಉಜ್ವಲ ಭವಿಷ್ಯಕ್ಕಾಗಿ, ರೈತರ ಕೂಲಿ ಕಾರ್ಮಿಕರ ಬದುಕಿಗಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಿ. ಮುಂದಿನ ಐದು ವರ್ಷ ನಿಮಗಾಗಿ ಇನ್ನೂ ಹಲವಾರು ಗ್ಯಾರಂಟಿಗಳನ್ನು ನಾವು ಕೊಡುತ್ತೇವೆ ಎಂದು ಭರವಸೆ ನೀಡಿದರು.
ಸಚಿವ ಶರಣಪ್ರಕಾಶ ಪಾಟೀಲ ಮಾತನಾಡಿ, ಕೇಂದ್ರ ಸರ್ಕಾರ ನಮ್ಮ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿತ್ತು. ಅನ್ನಭಾಗ್ಯ ಯೋಜನೆಗೆ ಬೇಕಾಗುವ ಅಕ್ಕಿಯನ್ನು ಕೊಡಲಿಲ್ಲ. ಆದರೂ ಕೂಡಾ ಸರ್ಕಾರ ಅಕ್ಕಿ ಖರೀದಿ ಮಾಡಲು ಹಣ ಕೊಡುವ ಮೂಲಕ ಕೊಟ್ಟ ಮಾತನ್ನ ಉಳಿಸಿಕೊಂಡಿದ್ದೇವೆ ಎಂದರು.
ಕೇಂದ್ರ ಸರ್ಕಾರ ನಮ್ಮ ಬಿಜೆಪಿ ಪಕ್ಷ ಶ್ರೀಮಂತರ ಪರ ಇರುವ ಪಕ್ಷ. ಕಾಂಗ್ರೆಸ್ ಪಕ್ಷ ಬಡವರ ಪಕ್ಷ. ನಮ್ಮ ಸರ್ಕಾರ ಕೇಂದ್ರದಲ್ಲಿದ್ದಾಗ ರೈತರ 72,000 ಕೋಟಿ ಸಾಲ ಮನ್ನಾ ಮಾಡಿದ್ದೇವೆ. ಆದರೆ, ಬಿಜೆಪಿ ರೈತರ ಸಾಲ ಮನ್ನಾ ಮಾಡಲು ಹಣವಿಲ್ಲ ಎಂದು ಹೇಳಿ ಶ್ರೀಮಂತರ ಹಾಗೂ ಬಂಡವಾಳಶಾಹಿ ಗಳ ಸಾಲ ಮನ್ನಾಮಾಡಿತ್ತು ಎಂದರು.
ಬಂಗಾರದ ಮನುಷ್ಯ ರಾಧಾಕೃಷ್ಣ ಅವರು ಚುನಾವಣೆಗೆ ನಿಂತಿದ್ದಾರೆ. ಅವರನ್ನು ಆರಿಸಿ ಕಳಿಸಿ ಕ್ಷೇತ್ರದ ಅಭಿವೃದ್ದಿಗೆ ಸಹಕರಿಸಿ ಎಂದು ಶರಣಪ್ರಕಾಶ ಪಾಟೀಲ ಹೇಳಿದರು.
ಮಾಜಿ ಸಚಿವ ಬಾಬುರಾವ ಚಿಂಚನ ಸೂರು ಮಾತನಾಡಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರನ್ನು ಎರಡು ಲಕ್ಷಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ವೇದಿಕೆಯ ಮೇಲೆ ಡಿಸಿಸಿ ಅಧ್ಯಕ್ಷರಾದ ಜಗದೇವ ಗುತ್ತೇದಾರ, ಎಂ.ಎಲ್.ಸಿ ತಿಪ್ಪಣ್ಣಪ್ಪ ಕಮಕನೂರು, ಮಾಜಿ ಸಚಿವ ಬಾಬುರಾವ ಚಿಂಚನಸೂರು, ರೇವು ನಾಯಕ ಬೆಳಮಗಿ , ಸುಭಾಷ್ ರಾಠೋಡ, ರಾಜಗೋಪಾಲರೆಡ್ಡಿ, ಜಗನ್ನಾಥ ಗೋದಿ, ಶ್ಯಾಮ್ ನಾಟೀಕಾರ್, ಡೇವಿಡ್ ಸಿಮೆಯೋನ್, ವೈಜನಾಥ್ ಪಾಟೀಲ ತಡಕಲ್, ವಿಜಯಕುಮಾರ ಆರ್ ಸೇರಿದಂತೆ ಹಲವರಿದ್ದರು.