ಕಲಬುರಗಿ: ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ವಾರ್ಷಿಕ ಒಂದು ಲಕ್ಷ ನೀಡುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ. ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಂತೆ ಈ ಯೋಜನೆಯನ್ನೂ ಕೂಡಾ ಜಾರಿಗೊಳಿಸಲಿದ್ದೇವೆ ಎಂದು
ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರು ಮನವಿ ಮಾಡಿದರು.
ಕಲಬುರಗಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಗುರುಮಠಕಲ್ ಮತಕ್ಷೇತ್ರದ ಚಂಡ್ರಕಿ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಗ್ರಾಮೀಣ ಭಾಗದ ಅಭಿವೃದ್ದಿ ಹಾಗೂ ನೆಮ್ಮದಿಯ ಬದುಕಿಗಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ನನಗೆ ಮತನೀಡಿ ಎಂದು ಮನವಿ ಮಾಡಿದರು.
ಮಾಜಿ ಸಚಿವ ಬಾಬುರಾವ ಚಿಂಚನಸೂರು ಮಾತನಾಡಿ ಉಮೇಶ್ ಜಾಧವ ನನಗೆ ಮೋಸ ಮಾಡಿದರು. ಕೋಲಿ ಕಬ್ಬಲಿಗ ಸಮಾಜವನ್ನು ಎಸ್ ಟಿ ಗೆ ಸೇರಿಸುವುದಾಗಿ ನನ್ನ ಮನೆಗೆ ಬಂದು ಕಾಲು ಹಿಡಿದು ಬೇಡಿಕೊಂಡಿದ್ದರಿಂದ ನಾನು ಬಿಜೆಪಿಗೆ ಹೋಗಿದ್ದೆ. ಸಮಾಜವನ್ನು ಎಸ್ ಟಿಗೆ ಸೇರಿಸದೆ ಮೋಸ ಮಾಡಿದ್ದಾರೆ ಎಂದರು.
ರಾಧಾಕೃಷ್ಣ ಅವರು ಸೌಮ್ಯ ಸ್ವಭಾವದವರು. ಜನರಪರವಾಗಿ ಕೆಲಸ ಮಾಡಿಕೊಂಡೇ ಬಂದವರು. ಈಗ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಮ್ಮ ಮುಂದೆ ನಿಂತಿದ್ದಾರೆ. ಈಗ ಎಲ್ಲ ಕಡೆ ಮಲ್ಲಿಕಾರ್ಜುನ ಖರ್ಗೆ ಅವರ ಅಲೆ ಎದ್ದಿದೆ. ನೀವು ರಾಧಾಕೃಷ್ಣ ಅವರನ್ನು ಗೆಲ್ಲಿಸಿ. ರಾಧಾಕೃಷ್ಣ ಗೆದ್ದರೆ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿಯಾಗಲಿದ್ದಾರೆ ಎಂದರು.
ಡಿಸಿಸಿ ಅಧ್ಯಕ್ಷ ಬಸರೆಡ್ಡಿ ಅನಪೂರ ಮಾತನಾಡಿ, ಕಳೆದ ಸಲ ಚುನಾವಣೆಯಲ್ಲಿ ಗೆದ್ದ ನಂತರ ಆ ಕಡೆ ಹೋದ ಉಮೇಶ ಜಾಧವ ಈ ಕಡೆ ಬಂದಿರಲೇ ಇಲ್ಲ. ಈಗ ಚುನಾವಣೆ ಬಂದಿದೆ ಎಂದು ಮತ್ತೆ ಬಂದಿದ್ದಾರೆ.ಯಾವುದೇ ಅಭಿವೃದ್ದಿ ಮಾಡಿಲ್ಲ. ಯಾವ ಮುಖವಿಟ್ಟುಕೊಂಡು ಮತ ಕೇಳಲು ಬರುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಚೆಪೆಟ್ಲಾ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ರೈತರಿಗೆ, ನಿರುದ್ಯೋಗಿಗಳಿಗೆ ಹಾಗೂ ಬಡವರಿಗೆ ಯಾವುದೇ ಯೋಜನೆ ಜಾರಿಗೆ ತಂದಿಲ್ಲ. ಅಧಿಕಾರಕ್ಕೆಬಂದರೆ ಪ್ರತಿಯೊಬ್ಬರ ಅಕೌಂಟ್ ಗೆ 15 ಲಕ್ಷ ಹಾಕುವುದಾಗಿ ಹೇಳಿದ್ದರು. ಒಂದು ರೂಪಾಯಿ ಕೂಡಾ ಹಾಕಿಲ್ಲ ಎಂದರು.
ಮುಖಂಡ ಸಾಯಬಣ್ಣ ಬೋರಬಂಡಾ ಮಾತನಾಡಿ ರಾಧಾಕೃಷ್ಣ ಅವರು ಯಾವುದೇ ಸಾಂವಿಧಾನಿಕ ಅಧಿಕಾರವಿಲ್ಲದೆ ಇದ್ದರೂ ಕೂಡಾ ಕಳೆದ ನಾಲ್ಕು ದಶಕದಿಂದ ಸಾರ್ವಜನಿಕ ಸೇವೆಯಲ್ಲಿ ಇದ್ದಾರೆ. ಅಂತವರು ಈಗ ಅಭ್ಯರ್ಥಿ ಆಗಿದ್ದಾರೆ. ಅವರನ್ನು ಆರಿಸಿ ಕಳಿಸಿ ಎಂದು ಮನವಿ ಮಾಡಿದರು.
ವೇದಿಕೆಯ ಮೇಲೆ ಡಿಸಿಸಿ ಅಧ್ಯಕ್ಷ ಬಸರೆಡ್ಡಿ ಅನಪೂರ, ಮಾಜಿ ಎಂಎಲ್ ಸಿ ಶರಣಪ್ಪ ಮಟ್ಟೂರ, ಸಾಯಬಣ್ಣ ಬೋರಬಂಡಾ, ಶ್ರೇಣಿಕ್ ಕುಮಾರ ಧೋಕಾ, ಚಿದಾನಂದಪ್ಪ ಕಾಳಬೆಳಗುಂದಿ, ನರಸಿಂಗರೆಡ್ಡಿ , ಬಾಲಪ್ಪ ನಿರೇಟಿ, ಶರಣಪ್ಪ ಮಾನೇಗಾರ, ನಿತ್ಯಾನಂದ ಸ್ವಾಮಿ ಸೇರಿದಂತೆ ಹಲವರಿದ್ದರು.