ಕಲಬುರಗಿ ನಗರಕ್ಕೆ ವೇಳಾಪಟ್ಟಿಯಂತೆ ನೀರು ಪೂರೈಸುವಂತೆ ಸೂಚನೆ

0
26

ಕಲಬುರಗಿ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ವೇಳಾಪಟ್ಟಿಯಂತೆ ಕುಡಿಯುವ ನೀರು ಪೂರೈಕೆಯಾಗಬೇಕು. ತಾಂತ್ರಿಕ ಕಾರಣದಿಂದ ನಲ್ಲಿ ಮೂಲಕ ನೀರು ಬಿಡುಗಡೆ ಮಾಡಲು ಸಾಧ್ಯವಾಗದಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವುದು ಪಾಲಿಕೆ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗುರುವಾರ ಬೇಸಿಗೆ ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆ, ಕೆ.ಯು.ಐ.ಡಿ.ಎಫ್.ಸಿ., ಎಲ್ & ಟಿ ಕಂಪನಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಬೇಸಿಗೆ ಜೊತೆಗೆ ಹಬ್ಬ-ಹರಿದಿನಗಳ ಸಮಯ ಇದಾಗಿದೆ. ಹೀಗಾಗಿ ಸಮಯಕ್ಕೆ ಸರಿಯಾಗಿ ನೀರು ಬಿಡುಗಡೆ ಮಾಡದಿದ್ದಲ್ಲಿ ಸಾರ್ವಜನಿಕರಿಗೆ ಅನಾನುಕೂಲತೆ ಹೆಚ್ಚಾಗುತ್ತದೆ. ಅಧಿಕಾರಿಗಳು ಇದನ್ನರಿತು ಕೆಲಸ ಮಾಡಬೇಕು ಎಂದರು.

Contact Your\'s Advertisement; 9902492681

ಕಲಬುರಗಿ ನಗರದ ವಾರ್ಡ್ ಸಂಖ್ಯೆ 14, 15, 31, 32, 47, 48 ಸೇರಿದಂತೆ ಒಟ್ಟಾರೆ 11 ವಾರ್ಡುಗಳಲ್ಲಿ ವೇಳಾಪಟ್ಟಿ ಪ್ರಕಾರ ನೀರು ಬಿಡುಗಡೆ ಮಾಡುತ್ತಿಲ್ಲ ಎಂಬುದು ಸಾರ್ವಜನಿಕರ ದೂರಾಗಿದೆ. ನೀರು ಬಿಡುಗಡೆ ಮಾಡುವ ವೇಳಾಪಟ್ಟಿಯನ್ನು ಸಾರ್ವಜನಿಕರಿಗೆ ಮೊದಲೇ ತಿಳಿಸಬೇಕು. ಅದರಂತೆ ನೀರು ಪೂರೈಸಬೇಕು ಎಂದು ಪಾಲಿಕೆ ಅಧಿಕಾರಿಗಳ ಡಿ.ಸಿ. ಅವರು ನಿರ್ದೇಶನ ನೀಡಿದರು.

ಬೆಂಗಳೂರಲ್ಲಿ ಇತ್ತೀಚೆಗೆ ಕಲುಷಿತ ನೀರು ಸೇವನೆಯಿಂದ ಕಾಲೆರಾ ಪ್ರಕರಣ ಬೆಳಕಿಗೆ ಬರುತ್ತಿದ್ದು, ಇಲ್ಲಿ ಇದು ಮರುಕಳಿಸದಂತೆ ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಶುದ್ಧೀಕರಣಗೊಂಡ ಕುಡಿಯುವ ನೀರು ಮಾತ್ರ ಪೂರೈಸಬೇಕು. ಶುದ್ಧೀಕರಣ ಘಟಕಕ್ಕೆ ಅಧಿಕಾರಿಗಳು ಆಗಾಗ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ, ನೈರ್ಮಲ್ಯದ ಬಗ್ಗೆ ಪರಿಶೀಲಿಸಬೇಕು ಎಂದರು.

ಕುರಿಕೋಟಾ ಇನ್‍ಟೇಕ್‍ನಲ್ಲಿ ಲೀಕೇಜ್ ಕಾರಣ ನಗರಕ್ಕೆ ಕಾಲಮಿತಿಯಲ್ಲಿ ನೀರು ಪೂರೈಕೆ ಮಾಡಲು ಆಗುತ್ತಿಲ್ಲ ಎಂಬ ಪಾಲಿಕೆ ಅಧಿಕಾರಿಗಳು ಡಿ.ಸಿ. ಗಮನಕ್ಕೆ ತಂದರು. ಈ ಕುರಿತು ಮಾತನಾಡಿದ ಡಿ.ಸಿ. ಅವರು, ಕೂಡಲೆ ಶನಿವಾರದೊಳಗೆ ಲೀಕೇಜ್ ದುರಸ್ತಿ ಮಾಡಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನೀರು ಮಿತವಾಗಿ ಬಳಸಿ: ಭೀಕರ ಬರಗಾಲ ಎದುರಾಗಿದೆ. ಎಲ್ಲೆಡೆ ನೀರಿನ ಸಮಸ್ಯೆ ಕಂಡುಬರುತ್ತಿದ್ದು, ಸಾರ್ವಜನಿಕರು ಕುಡಿಯುವ ನೀರು ಪೋಲಾಗದಂತೆ ಎಚ್ಚರಿಕೆ ವಹಿಸಬೇಕು. ಅವಶ್ಯಕತೆ ಅನುಗುಣವಾಗಿ ಮಿತವಾಗಿ ನೀರು ಬಳಸಬೇಕು. ಜೀವನಕ್ಕೆ ಜೀವ ಜಲ ತುಂಬಾ ಅವಶ್ಯಕ, ಇದನ್ನು ಸಮರ್ಪಕ ರೀತಿಯಲ್ಲಿ ಉಪಯೋಗಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಯಾ ತರನ್ನುಮ್ ಅವರು ಜಿಲ್ಲೆಯ ಜನತೆಯಲ್ಲ್ಲಿ ಮನವಿ ಮಾಡಿದ್ದಾರೆ.

ಸಭೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಉಪ ಆಯುಕ್ತ (ಅಭಿವೃದ್ಧಿ) ಆರ್.ಪಿ.ಜಾಧವ, ಕೆ.ಯು.ಐ.ಎಫ್.ಡಿ.ಸಿ. ಕಾರ್ಯನಿರ್ವಾಹಕ ಅಭಿಯಂತ ಅಹ್ಮದ್ ಹುಸೇನ್, ಎಲ್ & ಟಿ ಕಂಪನಿಯ ಟೀಮ್ ಲೀಡರ್ ಕುಮಾರೇಶ, ಸ್ನೆಕ್ ಕನ್ಸಲಟೆನ್ಸಿಯ ರಂಗಧಾಮ ಸೇರಿದಂತೆ ಇನ್ನಿತರ ಅಧಿಕಾರಿಗಳಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here