-
ವಾಡಿ ಬಿಜೆಪಿ ಮಹಾಶಕ್ತಿ ಕೇಂದ್ರದ ಸಭೆಯಲ್ಲಿ ಗಂಭೀರ ಆರೋಪ
ವಾಡಿ: ಕಾಂಗ್ರೆಸ್ ಪಕ್ಷವು ದಲಿತರ ಬಂಧು, ಸಂವಿಧಾನ ರಕ್ಷಕ ಎಂದು ನಾಟಕ ಮಾಡಿ ದಲಿತರಿಗೆ ಮೀಸಲಿರಿಸಿದ 25 ಸಾವಿರ ಕೋಟಿ ರೂಪಾಯಿಯನ್ನು ಗ್ಯಾರೆಂಟಿ ಸ್ಕೀಮಿಗೆ ಬಳಸಿ ದಲಿತರ ವಿರೋಧಿಯಾಗಿದೆ ಎಂದು ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಅವರು ಗಂಭೀರ ಟೀಕೆ ಮಾಡಿದ್ದಾರೆ.
ವಾಡಿ ಪಟ್ಟಣದಲ್ಲಿ ಮಹಾಶಕ್ತಿ ಕೇಂದ್ರದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತ ದಿನ ಬೆಳಗಾದರೆ ದಲಿತರ ಸಂರಕ್ಷಕರು, ಸಂವಿಧಾನವನ್ನು ಕಾಪಾಡುವವರು ಎಂದು ಬೊಗಳೆ ಬಿಡುವ ಕಾಂಗ್ರೆಸ್ ಪಕ್ಷವು 25 ಸಾವಿರ ಕೋಟಿ ರೂಪಾಯಿಯನ್ನು ದಲಿತರಿಗೆ ನೀಡದೆ ಅನ್ಯ ಯೋಜನೆಗಳಿಗೆ ಬಳಸಿ ದಲಿತರನ್ನು ಶಾಶ್ವತವಾಗಿ ಹಿಂದುಳಿದಿರುವಂತೆ ಮಾಡಿದ ಕಾಂಗ್ರೆಸ್ ಪಕ್ಷದ ಬಗ್ಗೆ ಪ್ರಿಯಾಂಕ ಖರ್ಗೆಯವರು ಉತ್ತರ ಕೊಡಲಿ ಎಂದು ಸವಾಲೆಸೆದರು.
ದಲಿತ ಹಾಗೂ ಹಿಂದುಳಿದವರ ಬಗ್ಗೆ ಕಾಳಜಿ ವಹಿಸುತ್ತಿರುವ ಪಕ್ಷ ಬಿಜೆಪಿಯಾಗಿದ್ದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನದ ಮಹತ್ವದ ಪಂಚತೀರ್ಥಗಳನ್ನು ಅಭಿವೃದ್ಧಿ ಪಡಿಸಿದ ಕೀರ್ತಿ ಮೋದಿಯವರಿಗೆ ಸಲ್ಲುತ್ತದೆ. ಅಂಬೇಡ್ಕರ್ ಜನ್ಮ ಪಡೆದ ಮೊಹವಾ, ಇಂಗ್ಲೆಂಡಿನಲ್ಲಿ ವಿದ್ಯಾಭ್ಯಾಸ ಮಾಡುವಾಗ ಇದ್ದ ಮನೆ, ಬೌದ್ಧ ದೀಕ್ಷೆ ಪಡೆದ ಪುಣ್ಯಭೂಮಿ ನಾಗಪುರ, ಅಂಬೇಡ್ಕರ್ ಮಹಾ ಪರಿನಿರ್ವಾಣ ಹೊಂದಿದ ದೆಹಲಿಯ ಸ್ಥಳ ಸಂರಕ್ಷಣೆ ಹಾಗೂ ಮುಂಬೈಯಲ್ಲಿರುವ ಚೈತ್ಯ ಭೂಮಿ ಸ್ಮಾರಕವನ್ನು ಅಭಿವೃದ್ಧಿ ಪಡಿಸಿದವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು.
1990ರಲ್ಲಿ ಬಿಜೆಪಿ ಸರಕಾರವು ಬಾಬಾ ಸಾಹೇಬರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿತು. ಸಂಸತ್ ಭವನದ ಹಳೆಯ ಕಟ್ಟಡದ ಸೆಂಟ್ರಲ್ ಹಾಲಿನಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಕಾಂಗ್ರೆಸ್ ಹಾಕಲಿಲ್ಲ. ಅದನ್ನು ನೆರವೇರಿಸಿದವರು ಮೋದಿಯವರು. ಅಂಬೇಡ್ಕರ್ ಅವರಿಗೆ ಅಗೌರವ ತೋರಿದ ಕಾಂಗ್ರೆಸ್ ಪಕ್ಷಕ್ಕೆ ಅವರ ಹೆಸರನ್ನು ಕೂಡಾ ಎತ್ತಲು ನೈತಿಕ ಹಕ್ಕಿಲ್ಲ. ದಲಿತರ ಹಣವನ್ನು ಸರಕಾರವು ತನ್ನ ಸ್ವಾರ್ಥತೆಗೆ ಬಳಸಿ ದಲಿತ ಬಂಧುಗಳನ್ನು ಅಭಿವೃದ್ಧಿ ವಂಚಿತರನ್ನಾಗಿಸಿರುವುದು ಖೇದದ ಸಂಗತಿಯಾಗಿದೆ.
ಬಿಜೆಪಿ ಸರಕಾರ ಮತ್ತು ಜಾಧವ್ ಯಾವ ಅಭಿವೃದ್ಧಿ ಮಾಡಿದ್ದಾರೆ? ಎಂದು ಪ್ರಶ್ನೆ ಎತ್ತುವ ಪ್ರಿಯಾಂಕ ಖರ್ಗೆಯವರು ಐಟಿ – ಬಿಟಿ ಸಚಿವರಾಗಿ ಯಾವ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದು ಜನತೆಗೆ ಹೇಳಲಿ. ಪುಕ್ಕಟೆ ಪ್ರಚಾರಕ್ಕಾಗಿ ಬಿಜೆಪಿಯನ್ನು ಮತ್ತು ಸಂಸದರನ್ನು ಹೀಯಾಳಿಸುತ್ತಾ ಕಾಲಹರಣ ಮಾಡುತ್ತಿರುವುದನ್ನು ಬಿಟ್ಟು ಅಭಿವೃದ್ಧಿಯ ಕಡೆಗೆ ಗಮನಹರಿಸಲಿ. ರಾಜ್ಯದಲ್ಲಿ ಜನತೆ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದು ಬೆಂಗಳೂರಿಗೆ ಯಾರು ಬರಬೇಡಿ ಎಂದು ಸ್ವತಹ ಸಚಿವರಾದಿಯಾಗಿ ಎಲ್ಲರೂ ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ.
ಈ ರೀತಿ ರಾಜ್ಯವನ್ನು ಹೀನ ಸ್ಥಿತಿಗೆ ತಂದಿಟ್ಟ ಕಾಂಗ್ರೆಸ್ ಸರಕಾರಕ್ಕೆ ಈ ಬಾರಿಯ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಅದಕ್ಕಾಗಿ ಚಿತ್ತಾಪುರ ತಾಲೂಕಿಗೆ ಬಿಜೆಪಿ ನಾಯಕರು ಬಂದರೆ ಕಾಂಗ್ರೆಸ್ ನವರಿಗೆ ಬಿಪಿ – ಶುಗರ್ ಏರಿಕೆ ಆಗುತ್ತಿದೆ. ವಾಡಿಯಲ್ಲಿ ಅರ್ಧ ಕಿಲೋಮೀಟರ್ ರಸ್ತೆಯನ್ನು ನಿರ್ಮಾಣ ಮಾಡಲು ಕೂಡ ಸಾಧ್ಯವಾಗದೆ ಸ್ಥಳೀಯ ಶಾಸಕರು ತೆಪ್ಪಗೆ ಕುಳಿತಿದ್ದಾರೆ. ಸಾರ್ವಜನಿಕರ ಕೈಗೆ ಸಿಗದ ಕ್ಷೇತ್ರದ ಶಾಸಕರು ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿ ಅಭಿವೃದ್ಧಿಯನ್ನು ಮರೆತಿದ್ದಾರೆ ಎಂದು ಜಾಧವ್ ಆರೋಪಿಸಿದರು.
ಬಿಜೆಪಿಯು ಅಭಿವೃದ್ಧಿಯಲ್ಲಿ 10 ವರ್ಷಗಳಲ್ಲಿ ಮಹಾನ್ ಸಾಧನೆ ಮಾಡಿದ್ದು ವಾಡಿ ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ 32 ಕೋಟಿ ರೂಪಾಯಿ ನೀಡಿದ್ದು ಆರು ತಿಂಗಳಲ್ಲಿ ಶ್ರೇಷ್ಠ ದರ್ಜೆಯ ರೈಲು ನಿಲ್ದಾಣ ನಿರ್ಮಾಣವಾಗಲಿದೆ.
ಸನ್ನತಿ ಬ್ಯಾರೇಜ್ ನಿಂದ 280 ಕೋಟಿ ರೂಪಾಯಿಯಲ್ಲಿ ನಾಲವಾರ ಸೇರಿದಂತೆ 120 ಹಳ್ಳಿ ಮತ್ತು ತಾಂಡಾಗಳಿಗೆ ಜಲಜೀವನ್ ಮಿಷನ್ ಮೂಲಕ ನೀರುಣಿಸುವ ಯೋಜನೆ ಪ್ರಾರಂಭವಾಗಿದ್ದು ಕೇಂದ್ರದ ಮತ್ತು ಬೊಮ್ಮಾಯಿ ಸರಕಾರದ ಕೊಡುಗೆಯಾಗಿದೆ. ಈ ಯೋಜನೆಯನ್ನು ಯಾವುದೇ ಶಿಷ್ಟಾಚಾರವನ್ನು ಪಾಲಿಸದೆ ಗಪ್ ಚುಪ್ ಆಗಿ ಪ್ರಿಯಾಂಕ ಖರ್ಗೆ ಅವರು ಉದ್ಘಾಟಿಸಿ ನಾವೇ ಮಾಡಿದ್ದು ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ.
ಸನಾತನ ಹಿಂದೂ ಧರ್ಮವನ್ನು ಡಿಎಂಕೆಯ ಸ್ಟಾಲಿನ್ ಪುತ್ರ ದಯಾನಿಧಿ ಸ್ಟಾಲಿನ್ ಕ್ಯಾನ್ಸರ್, ಏಡ್ಸ್ ಮಲೇರಿಯಾ, ಡೆಂಗ್ಯೂ ಎಂ ಬಿತ್ಯಾದಿಯಾಗಿ ಅವಮಾನ ಮಾಡಿದಾಗ ಅದನ್ನು ಬೆಂಬಲಿಸಿದವರು ಪ್ರಿಯಾಂಕ ಖರ್ಗೆಯವರು.
ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಲಲ್ಲಾ ಮೂರ್ತಿಯ ಪ್ರತಿಷ್ಠಾಪನಾ ದಿನ ವಾಡಿಯಲ್ಲಿ 10 ಸಾವಿರಕ್ಕೂ ಹೆಚ್ಚು ಜನ ಸಂಭ್ರಮಿಸಲು ಮೆರವಣಿಗೆಯನ್ನು ಮಾಡಲು ಹೊರಟಾಗ ಅದನ್ನು ಪೊಲೀಸ್ ಬಲ ಪ್ರಯೋಗಿಸಿ ತಡೆದವರು ಕಾಂಗ್ರೆಸ್ಸಿಗರು. ಇಂತಹ ಹಿಂದೂ ವಿರೋಧಿ ಕಾಂಗ್ರೆಸ್ ಪಕ್ಷವನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜನ ತಿರಸ್ಕರಿಸುವುದು ಖಚಿತವಾಗಿದ್ದು ಕಾಂಗ್ರೆಸ್ಸಿಗರಿಗೆ ಭಯ ಶುರುವಾಗಿದೆ ಎಂದು ಹೇಳಿದರು.
ಅದಕ್ಕಾಗಿ ಪ್ರಜ್ಞಾವಂತ ಮತದಾರರು ತಮ್ಮ ಎಲ್ಲ ಕೆಲಸಗಳನ್ನು ಬದಿಗೊತ್ತಿ ಮೇ 7 ರಂದು ಶೇಕಡಾ ನೂರರಷ್ಟು ಮತದಾನ ವಾಗುವಂತೆ ನೋಡಿಕೊಳ್ಳಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತನ್ನ ತಾಯಿಯ ನಿಧನದ ದಿನ ಅಂತ್ಯಕ್ರಿಯೆ ಮುಗಿಸಿ ಕೊಲ್ಕತ್ತಕ್ಕೆ ಪ್ರಯಾಣ ಮಾಡಿ ದೇಶ ಸೇವೆಯಲ್ಲಿ ತೊಡಗಿದ್ದರು. ಅದಕ್ಕಾಗಿ ಈ ಬಾರಿ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗಬೇಕು ಮತ್ತು ಕಲಬುರ್ಗಿಯಿಂದ ಬಿಜೆಪಿಯನ್ನು ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡಿದರು.
ಸಮಾವೇಶದ ಪೂರ್ವಭಾವಿಯಾಗಿ ವಾಡಿ ಬಸವೇಶ್ವರ ಚೌಕ್ ನಲ್ಲಿ ಮೂರ್ತಿಗೆ ಮಾಲಾರ್ಪಣೆ ಮಾಡಿ 200ಕ್ಕೂ ಹೆಚ್ಚು ಮೋಟರ್ ಸೈಕಲ್ ರಾಲಿಯಲ್ಲಿ ಜಾಧವ ರವರನ್ನು ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಚೌಕ, ಶಿವಾಜಿ ಚೌಕ್, ಬಾಬು ಜಗಜೀವನ್ ರಾಮ್ ಹಾಗೂ ಅಂಬಿಗರ ಚೌಡಯ್ಯ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಬಸವರಾಜ್ ಮತ್ತಿಮೂಡು ಮಾತನಾಡಿ ಈ ಬಾರಿ ಬಿಜೆಪಿ ಅಭ್ಯರ್ಥಿ ಒಂದು ಲಕ್ಷ 50 ಸಾವಿರ ಮತಗಳ ಮುನ್ನಡೆಯನ್ನು ಸಾಧಿಸುವುದು ಖಚಿತ ಎಂದು ಹೇಳಿದರು.
ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಮಾತನಾಡಿ ಈ ಬಾರಿ ನಮ್ಮ ಮತ ಕೇವಲ ಲೋಕಸಭಾ ಸದಸ್ಯರಿಗಲ್ಲ, ಕೇಂದ್ರದ ಸಚಿವ ಸಂಪುಟದಲ್ಲಿ ಜಾಧವ್ ಸಚಿವರಾಗುವುದಕ್ಕೆ ನೀಡುವ ಮತವಾಗಿರುತ್ತದೆ ಎಂದು ಹೇಳಿದರು.
ಬಿಜೆಪಿ ಗ್ರಾಮೀಣ ಅಧ್ಯಕ್ಷರಾದ ಶಿವರಾಜ ಪಾಟೀಲ್ ರದ್ದೇವಾಡಗಿ ಮಾತನಾಡಿ 10 ವರ್ಷ ಕಪ್ಪು ಚುಕ್ಕೆ ಇಲ್ಲದೆ ಪ್ರಾಮಾಣಿಕ ಆಡಳಿತ ನೀಡಿದ ಮೋದಿಯವರು ದೇಶಕ್ಕಾಗಿ 18 ಗಂಟೆಗಳ ಕಾಲ ಸೇವೆ ಸಲ್ಲಿಸುತ್ತಿದ್ದಾರೆ.
ಮೋದಿ ಮತ್ತು ಜಾಧವ್ ಅವರು ಕೈಗೊಂಡ ಅಭಿವೃದ್ಧಿ ಕೆಲಸಗಳನ್ನು ನೋಡಿ ಕಾಂಗ್ರೆಸಿಗೆ ದಿಗಿಲು ಉಂಟಾಗಿದ್ದು ಅದಕ್ಕಾಗಿ ಕಾರ್ಯ ಕರ್ತರ ವಿರುದ್ಧ ಮೊಕದ್ದಮೆಗಳನ್ನು ಹೂಡುತ್ತಿದೆ. ಆದರೆ ಬಿಜೆಪಿ ಕಾರ್ಯಕರ್ತರು ಸಿಂಹದ ಮರಿಗಳಾಗಿ ಕಾಂಗ್ರೆಸ್ಸಿನ ಕುತಂತ್ರವನ್ನು ಎದುರಿಸಲು ಸದಾ ಸಿದ್ಧರು ಎಂದು ಹೇಳಿದರು.
ಎಸ್ಸಿ ಮೋರ್ಚಾದ ರಾಜು ಕುಪ್ಪಣ್ಣ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ವೀರಣ್ಣ ಯಾರಿ ಸ್ವಾಗತಿಸಿ ಬಸವರಾಜ್ ಪಾಂಚಾಳ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿಠಲ್ ನಾಯಕ್, ಬಸವರಾಜ್ ಬೆಣ್ಣೂರ್, ರೋಹಿತ್ ಸಜ್ಜನ್ ಶೆಟ್ಟಿ,ಅಣ್ಣಾ ರಾವ್ ಬಾಳಿ, ಭೀಮರಾಯ, ಅಶೋಕ್ ಪವಾರ್, ಮಲ್ಲಪ್ಪ ಕಟ್ಟಿಮನಿ, ಭೀಮರಾಯ ದೊರಿ, ಮಂಡಲ ಅಧ್ಯಕ್ಷ ರವಿ ಸಜ್ಜನ್ ಶೆಟ್ಟಿ, ರಾಮಚಂದ್ರ ರೆಡ್ಡಿ, ಭಗವಂತ ಸೂಳೆ ಮತ್ತಿತರರಿದ್ದರು. ಸಿದ್ದಣ್ಣ ಕಲಶೆಟ್ಟಿ ಧನ್ಯವಾದವಿತ್ತರು. ನಂತರ ಚಿತ್ತಾಪುರ ತಾಲೂಕಿನ ಭೀಮನಹಳ್ಳಿ ಮಹಾಶಕ್ತಿ ಕೇಂದ್ರ ಹಾಗೂ ನಾಲ್ವರ ಮಹಾಶಕ್ತಿ ಕೇಂದ್ರಗಳಲ್ಲಿ ಸಮಾವೇಶ ನಡೆಯಿತು.