ಕಲಬುರಗಿ; ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ದಿನದಂದು ಕರ್ತವ್ಯಕ್ಕೆ ನಿಯೋಜನೆಗೊಂಡ ಪ್ರೆಸಿಡಿಂಗ್ ಆಫೀಸರ್ ಮತ್ತು ಅಸಿಸ್ಟೆಂಟ್ ಪ್ರೆಸಿಡಿಂಗ್ ಆಫೀಸರ್ ಗಳಿಗೆ ಸೋಮವಾರ ಜಿಲ್ಲೆಯಾದ್ಯಂತ ಮೊದಲ ಹಂತದ ತರಬೇತಿ ನೀಡಲಾಯಿತು.
ಕಲಬುರಗಿ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಗುಲಬರ್ಗಾ ಗ್ರಾಮೀಣ, ಅಪ್ಪಾ ಕಿಡ್ಸ್ ವರ್ಲ್ಡ್ ನಲ್ಲಿ ಕಲಬುರಗಿ ಉತ್ತರ ಹಾಗೂ ಎನ್.ವಿ.ಕಾಲೇಜಿನಲ್ಲಿ ಕಲಬುರಗಿ ದಕ್ಷಿಣ ಕ್ಷೇತ್ರದ ಚುನಾವಣಾ ಸಿಬ್ಬಂದಿಗಳಿಗೆ ತರಬೇತಿ ನೀಡಲಾಯೊತು. ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ತರಬೇತಿ ಕೇಂದ್ರಕ್ಕೆ ಭೇಟಿ ತರಬೇತಿ ಕಾರ್ಯ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಪಿ.ಆರ್.ಓ, ಎ.ಪಿ.ಆರ್.ಓ ಗಳು ಇಂದಿಲ್ಲಿ ಇವಿ.ಎಂ, ಕಂಟ್ರೋಲ್ ಯೂನಿಟ್, ವಿ.ವಿ. ಪ್ಯಾಟ್ ಹೀಗೆ ಎಲ್ಲದರ ಬಗ್ಗೆ ಸರಿಯಾಗಿ ಮಾಹಿತಿ ಪಡೆಯಬೇಕು. ಹ್ಯಾಂಡ್ಸ್ ಆನ್ ಟ್ರೀನಿಂಗ್ ಮೂಲಕ ತರಬೇತಿ ಪಡೆದಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಚುನಾವಣಾ ಆಯೋಗದ ಎಲ್ಲಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಕರ್ತವ್ಯ ಲೋಪಕಗಕೆ ಇಲ್ಲಿ ಅವಕಾಶವಿಲ್ಲ ಎಂದು ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದ ಅವರು, ಏನೇ ಸಂದೇಹಗಳಿದ್ದರು ತರಬೇತುದಾರರಿಂದ ಪರಿಹಾರ ಕಂಡುಕೊಳ್ಳಬೇಕು ಎಂದರು.
ಉಳಿದಂತೆ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರವಾರು ತರಬೇತಿ ಕಾರ್ಯ ಸಹಾಯಕ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ಸುಸೂತ್ರವಾಗಿ ನಡೆಯಿತು. ತರಬೇತಿಗೆ ಆಗಮಿಸಿದ ಚುನಾವಣಾ ಸಿಬ್ಬಂದಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಹಾಗೂ ಕಲಬುರಗಿ ಉತ್ತರ ಎ.ಆರ್.ಓ ಭುವನೇಶ ಕುಮಾರ ಪಾಟೀಲ, ಉಪ ಆಯುಕ್ತ ಹಾಗೂ ಕಲಬುರಗಿ ದಕ್ಷಿಣ ಎ.ಆರ್.ಓ ಮಾಧವ ಗಿತ್ತೆ, ಕಲಬುರಗಿ ಗ್ರಾಮೀಣ ಎ.ಆರ್.ಓ ಮತ್ತು ಸಹಾಯಕ ಆಯುಕ್ತೆ ರೂಪಿಂದರ್ ಸಿಂಗ್ ಕೌರ್ ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.