ಕಲಬುರಗಿ; ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಮತ್ತು ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಭಂವರ್ ಸಿಂಗ್ ಮೀನಾ ಅವರು ಸೋಮವಾರ ಆಳಂದ ತಾಲೂಕಿನ ಹಿರೊಳ್ಳಿ ಚೆಕ್ ಪೋಸ್ಟ್ ಭೇಟಿ ನೀಡಿದಾಗ, ಎಫ್.ಎಸ್.ಟಿ ತಂಡದ ಮುಖ್ಯಸ್ಥ ರಮೇಶ ಅವರು ಸರಿಯಾಗಿ ಕೆಲಸ ನಿರ್ವಹಿಸದಿರುವುದು ಕಂಡುಬಂದ ಕಾರಣ ಅವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಆಳಂದ ಎ.ಆರ್.ಓ ಅವರಿಗೆ ನಿರ್ದೇಶನ ನೀಡಿದರು.
ನಂತರ ಹಿರೊಳ್ಳಿ ಗ್ರಾಮದಲ್ಲಿ ನರೇಗಾ ಯೋಜನೆಯಡಿಯಲ್ಲಿನ ನಾಲಾ ಹೂಳೆತ್ತುವ ಕಾಮಗಾರಿ ವೀಕ್ಷಿಸದರು. ವಿಪರೀತ ಬಿಸಿಲು ಕಾರಣ ಕೂಲಿ ಕಾರ್ಮಿಕರಿಗೆ ನೆರಳು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿದಕ್ಕೆ ಸಂತಸ ವ್ಯಕ್ತಪಡಿಸಿದರು. ಇನ್ನು ಇದೇ ಸಂದರ್ಭದಲ್ಲಿ ಗ್ರಾಮದ ಮತಗಟ್ಟೆ ಕೇಂದ್ರದಲ್ಲಿಮೂಲಭೂತ ಸೌಲಭ್ಯಗಳ ಕುರಿತು ಪರಿಶೀಲನೆ ಮಾಡಿದರು.
ನಂತರ ಗ್ರಾಮಸ್ಥರಿಗೆ ಕುಡಿಯುವ ನೀರು ಪೂರೈಕೆಗೆ ಬಾಡಿಗೆ ಬೋರ್‌ವೆಲ್ ದಿಂದ ತೆರೆದ ಬಾವಿಗೆ ನೀರು ಸರಬರಾಜು ಮಾಡುತ್ತಿರುವುದನ್ನು ಪರಿಶೀಲಿಸಿದರು.
ಇದಲ್ಲದೆ ಆಳಂದ ಪಟ್ಟಣದಲ್ಲಿ ನಡೆಯುತ್ತಿದ್ದ ಪಿ.ಆರ್.ಓ, ಎ.ಪಿ.ಆರ್.ಓ ಗಳಿಗೆ ಮೊದಲ ಹಂತದ ತರಬೇತಿ ಕೇಂದ್ರಕ್ಕೂ ಸಹ ಭಂವರ್ ಸಿಂಗ್ ಮೀನಾ ಅವರು ಭೇಟಿ ನೀಡಿ ತರಬೇತಿ ಕಾರ್ಯ ಪರಿಶೀಲಿಸಿದರು.