ಕಲಬುರಗಿ: ಹಂಶಿಕಾ ಶಿಕ್ಷಣ ಸಂಸ್ಥೆಯ ಅನನ್ಯ ಪದವಿ ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ರವಿವಾರ ಡಾ. ಬಿ.ಆರ್. ಅಂಬೇಡ್ಕರ ರವರ 133ನೇ ಜಯಂತ್ಯುತ್ಸವ ಆಚರಿಸಲಾಯಿತು.
ಈ ವೇಳೆ ಸಂಸ್ಥೆಯ ಅಧ್ಯಕ್ಷೆ ಸುಷ್ಮಾವತಿ ಎಸ್ ಹೊನ್ನಗಜ್ಜಿ ಅವರು ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ ಕುರಿತು ಮಾತನಾಡಿದರು. ಡಾ.ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಶ್ರೇಷ್ಠ ವ್ಯಕ್ತಿಗಳ ಆದರ್ಶ ಕೇಳಿಸಿಕೊಂಡರೆ ಸಾಲದು, ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ನಿಜವಾದ ಗೌರವ ನೀಡಿದಂತಾಗುತ್ತದೆ ಎಂದರು
ಬಡವ, ಶ್ರೀಮಂತರ ನಡುವಿನ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಎಲ್ಲರೂ ಚಿಂತಿಸಬೇಕು. ಆಗ ಮಾತ್ರ ಅಂಬೇಡ್ಕರ್‍ರಂತಹ ದಾರ್ಶನಿಕರ ಜನ್ಮ ದಿನಾಚರಣೆಗಳಿಗೆ ಅರ್ಥ ಬರುತ್ತದೆ ಎಂದು ಅಭಿಪ್ರಾಯಪಟ್ಟರು.
ಸಂಸ್ಥೆಯ ಪ್ರಾಚಾರ್ಯ ಡಾ.ಶರಣು ಹೊನ್ನಗೆಜ್ಜಿ (ಪೂಜಾರಿ) ಅವರು ಡಾ. ಬಿ.ಆರ್.ಅಂಬೇಡ್ಕರವರ ಸಾಧನೆಯ ಕುರಿತು ಮಾತನಾಡಿದರು.ದೀನ ದಲಿತರ ಏಳಿಗೆಗಾಗಿ ತಮ್ಮನ್ನೇ ಮುಡಿಪಿಟ್ಟ ಅಂಬೇಡ್ಕರ್ ಅವರ ಹೋರಾಟ ಮತ್ತು ಆದರ್ಶ ಇಂದಿನ ಯುವಜನತೆಗೆ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯ ಉಪನ್ಯಾಸಕರಾದ ಆಶಾರಾಣಿ ಕುಲಕೇರಿ, ರಾಹುಲ ಶೇರಿಕರ್, ಅಕ್ಷತಾ ಪಾಟೀಲ, ರಾಜೇಶ್ವರಿ ಮಲ್ಕೂಡ ಸುಜಾತಾ ದೇವನೂರಕರ್ & ಸಂಸ್ಥೆಯ ವಿದ್ಯಾರ್ಥಿಗಳು ಇದ್ದರು.