ಕಲಬುರಗಿಯನ್ನು ಅಗ್ರಿಕಲ್ಚರ್ ಹಬ್ ಮಾಡಲು ಅಗತ್ಯ ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ

0
44

ಕಲಬುರಗಿ: ಜಿಲ್ಲೆಯನ್ನು ಅಗ್ರಿಕಲ್ಚರ್ ಹಬ್ ಮಾಡಲು ನಿರ್ಧರಿಸಿದ್ದು ಮುಂದಿನ ಆರು ತಿಂಗಳಲ್ಲಿ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ರೂ 39 ಕೋಟಿ ವೆಚ್ಚ ಮಾಡಲಾಗುವುದು. ಇದಕ್ಕೆ ಗಂಜ್ ವರ್ತಕರ ಸಂಘ ಸೇರಿದಂತೆ ಎಲ್ಲ‌ ಸಂಘಗಳು ಸಹಕಾರ ನೀಡಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಗಂಜ್ ವರ್ತಕರ ಸಂಘದ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರ ಪರ ಮತಯಾಚಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಜಿಲ್ಲೆಯ ರೈತರು ಬೆಳೆಗಳ ಸಂರಕ್ಷಣೆ,ಪೋಷಣೆ ಹಾಗೂ ಉತ್ತಮ ಮಾರುಕಟ್ಟೆ ಕಲ್ಪಿಸುವ ಉದ್ದೇಶ ಹೊಂದಿದ್ದು ಈ ನಿಟ್ಟಿನಲ್ಲಿ ಕೋಲ್ಡ್ ಸ್ಟೋರೇಜ್, ಕಸ್ಟಮ್ ಹೈರ್ ಸೆಂಟರ್, ಆಧುನಿಕ ಉಪಕರಣಗಳ ವಿತರಣೆ ಕೇಂದ್ರ, ವ್ಯಾಲ್ಯು ಎಡಿಷನ್ ಸೆಂಟರ್ ಸೇರಿದಂತೆ ಹಲವಾರು ಯೋಜನೆಗಳನ್ನು ಮುಂದಿನ ಆರು ತಿಂಗಳಲ್ಲಿ ಜಾರಿಗೆ ತರುವ ಮೂಲಕ ಅಗ್ರಿಕಲ್ಚರ್ ಹಬ್ ಮಾಡಲಾಗುವುದು. ಇದಕ್ಕಾಗಿ ರೂ 39 ಕೋಟಿ ವೆಚ್ಚಮಾಡಲಾಗುವುದು ಎಂದು ಸಚಿವರು ಹೇಳಿದರು.

ಗಂಜ್ ವರ್ತಕರ ಸಮಸ್ಯೆ ಬಗೆಹರಿಸಲು ಹಾಗೂ ವಯೋಸಹಜ ನಿವೃತ್ತರಾಗುವ ಹಮಾಲರ ಆರ್ಥಿಕ ಸದೃಢತೆ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಸಚಿವರು ಈ ಹಿಂದಿನ‌ ಸಂಸದರು ಜಿಲ್ಲೆಯ ರೈತರ, ವರ್ತಕರ ಸಮಸ್ಯೆಗಳ ಪರಿಹಾರಕ್ಕಾಗಿ ಯಾವುದೇ ಕ್ರಮ ಕೈಗೊಂಡಿಲ್ಲ. ಕೇಂದ್ರ ಸರ್ಕಾರದ ಎಪಿಎಂಸಿ ಕಾಯ್ದೆ ತಿದ್ದುಪಡಿಯ ನಿರ್ಧಾರದ ವಿರುದ್ದ ಧ್ವನಿ ಎತ್ತಿ ವರ್ತಕರ ಹಿತ ಕಾಪಾಡುವ ಪ್ರಯತ್ನ ಮಾಡಲಿಲ್ಲ ಎಂದರು.

ನೆಹರು ಗಂಜನ್ನು ನಗರದ ಹೊರ ವಲಯದಲ್ಲಿ ಶಿಫ್ಟ್ ಮಾಡುವ ಪ್ರಸ್ತಾವನೆ ಕುರಿತು ಹೇಳಿದ ಸಚಿವರು ಚುನಾವಣೆ ಮುಗಿದ ನಂತರ ಈ ವಿಷಯಕ್ಕೆ ಕುರಿತಂತೆ ಸೂಕ್ತ ಕ್ರಮ‌ಕೈಗೊಳ್ಳಲಾಗುವುದು. ಇದರ ಜೊತೆಗೆ ಒಂದು ವೇರ್ ಹೌಸ್, ಕೋಲ್ಡ್ ಸ್ಟೋರೇಜ್, ಕುಡಿಯುವ ನೀರು ಹಾಗೂ ಶೌಚಾಲಯ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿ ” ನಾವು ಮಾತು ಕೊಟ್ಟರೆ ಅದು ಕಲ್ಲಿನಲ್ಲಿ ಕೆತ್ತಿದಂತೆ. ನೀಡಿದ ಭರವಸೆ ಈಡೇರಿಸುವ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇವೆ” ಎಂದರು.

ಇದು ರಾಧಾಕೃಷ್ಣ ಹಾಗೂ ಜಾಧವ್ ನಡುವಿನ ಚುನಾವಣೆಯಲ್ಲ ಇದು ಕಲಬುರಗಿ ಅಭಿವೃದ್ದಿ, ಜಿಲ್ಲೆಯ ರೈತರ ಹಾಗೂ ವರ್ತಕರ ಹಿತ ಕಾಪಾಡುವ ಚುನಾವಣೆಯಾಗಿದೆ. ಹಾಗಾಗಿ, ನೀವೆಲ್ಲ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರಿಗೆ ಮತ ಹಾಕಬೇಕು ಎಂದು ಮನವಿ ಮಾಡಿದರು.

ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಮಾತನಾಡಿ ಕಲಬುರಗಿ ಜಿಲ್ಲೆಯ ಅಭಿವೃದ್ದಿಗೆ ಸಹಕಾರ ನೀಡಬೇಕು.ಈಗಾಗಲೇ ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಇದ್ದಾರೆ, ಜಿಲ್ಲೆಯಲ್ಲಿ ಮೂವರು ಸಚಿವರು ಇದ್ದಾರೆ. ನನಗೆ ಆಶೀರ್ವಾದ ಮಾಡಿದರೆ ನಾನೂ ಕೂಡಾ ಅವರೊಂದಿಗೆ ಕೈ ಜೋಡಿಸಿ ಅಭಿವೃದ್ದಿ ಪಡಿಸುತ್ತೇನೆ ಎಂದರು.

ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ಮಾತನಾಡಿ ಗಂಜ್ ವರ್ತಕರ ಸಂಘದ ಹಿತಾಸಕ್ತಿಗೆ ವಿರುದ್ಧವಾಗಿ ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿತ್ತು. ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಕಾಯ್ದೆಯನ್ನು ಜಾರಿಗೊಳಿಸಲಿಲ್ಲ ಎಂದರು‌.

ವೇದಿಕೆಯ ಮೇಲೆ ಶಾಸಕರಾದ ಕನೀಜ್ ಫಾತಿಮಾ, ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ, ನೀಲಕಂಠರಾವ ಮೂಲಗೆ, ಭಾಗನಗೌಡ, ಗಂಜ್ ವರ್ತಕರ ಸಂಘದ ಅಧ್ಯಕ್ಷ ಶ್ರೀಮಂತರಾವ್ ಉದನೂರು, ಬಸವರಾಜ ಭೀಮಳ್ಳಿ, ಅಕ್ಕಿ ವ್ಯಾಪಾರದ ಸಂಘದ ಅಧ್ಯಕ್ಷ ರವೀಂದ್ರ ಮಾಧಂ ಶೆಟ್ಟಿ, ದಾಲ್ ಮಿಲ್ ಸಂಘದ ಅದ್ಯಕ್ಷ ಚಂದ್ರಶೇಖರ ಕೋಬಾಳ, ಪೆಸ್ಟಿಸೈಡ್ ವಿತರಕರ ಸಂಘದ ಅದ್ಯಕ್ಷ ಬಸವರಾಜ ಮಂಗಲಗಿ, ಮುನಿಮ್ ಸಂಘದ ಅಧ್ಯಕ್ಷ ಭೀಮಶ್ಯಾ‌ ಜೀವಣಗಿ, ಹಮಾಲರ ಸಂಘದ ಅಧ್ಯಕ್ಷ ಮೌಲಾನಾ ಸೇರಿದಂತೆ ವರ್ತಕರು, ಹಮಾಲರು ಸೇರಿದಂತೆ ಇತರರು‌ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here