ಕಲಬುರಗಿ: ಕಲ್ಯಾಣ ನಾಡು ಜ್ಞಾನದ ಫಲವತ್ತಾದ ಭೂಮಿಯಾಗಿದೆ. ಸರಿಯಾದ ಸಮಯಕ್ಕೆ ನೀರು ಕೊಟ್ಟರೆ ಸರ್ವರಿಗೂ ಆಸರೆಯಾಗುವ ಹೆಮ್ಮರವಾದ ಮರ ಬೆಳೆಸಬಹುದು ಎಂದು ಜಿಲ್ಲಾ ಮುಖ್ಯ ಗುರುಗಳ ಸಂಘದ ಗೌರವಧ್ಯಕ್ಷರಾದ ಕೆ.ಎಚ್. ಮಲ್ಲಿಕಾರ್ಜುನ ಹೇಳಿದರು.
ನಿನ್ನೆ ಸೋಮವಾರ ನಗರದ ಭವಾನಿನಗರದಲ್ಲಿರುವ ಬಬಲಾದ ಶ್ರೀಮಠದಲ್ಲಿ ನಡೆದ ಶಿವಾನುಭವಗೋಷ್ಠಿಯ ೬೭ನೇ ಮಾಲಿಕೆಯಲ್ಲಿ ಉಪನ್ಯಾಸ ನೀಡುತ್ತಾ ಈ ಭಾಗವು ಸಂತರು, ಶರಣರು ನಡೆದಾಡಿದ ಸ್ಥಳ. ಇಂತಹ ಸ್ಥಳದಲ್ಲಿ ನಾವೂ ಹುಟ್ಟಿರುವುದೇ ಒಂದು ಸೌಭಾಗ್ಯ. ಶರಣರ ಆದರ್ಶ ಹಾಗೂ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಸಾರ್ಥಕ ಪಡಿಸೋಣ ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ತಾಜ ಸುಲ್ತಾನಪೂರ ಗ್ರಾ. ಪಂ. ಉಪಾಧ್ಯಕ್ಷರಾದ ಶ್ರೀಮತಿ ಸಾವಿತ್ರಿ ಆರ್. ಕಲಕೋರಿ ಅವರಿಗೆ ಶ್ರೀಮಠದ ಪರವಾಗಿ ಸನ್ಮಾನಿಸಲಾಯಿತು. ಸನ್ಮಾನಿತಗೊಂಡು ಮಾತನಾಡುತ್ತಾ, ಮನುಷ್ಯ ಹಣ, ಸಂಪತ್ತು ಗಳಿಸಬಹುದು ಆದರೆ ಶಾಂತಿ, ನೆಮ್ಮದಿ ಸಿಗಬೇಕಾದರೆ ಇಂತಹ ಶಿವಾನುಭವಗೋಷ್ಠಿಯಿಂದಲೇ ಮಾತ್ರ ಸಾಧ್ಯ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಲಿ ಎಂದು ಕರೆ ನೀಡಿದರು.
ಸಂಚಾಲಕರಾದ ಸಂಗಮೇಶ ಹೂಗಾರ ನಿರೂಸಿದರು, ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ ಸ್ವಾಗತಿಸಿದರು, ಶಿಕ್ಷಕರಾದ ದೇವಯ್ಯ ಗುತ್ತೇದಾರ ವಂದಿಸಿದರು. ಕಾರ್ಯಕ್ರಮದಲ್ಲಿ ಶ್ರೀಮಠದ ಕಾರ್ಯದರ್ಶಿಗಳಾದ ಬಸಯ್ಯಾ ಶಾಸ್ತ್ರಿ, ಶಿವಕುಮಾರ ಗಣಜಲಖೇಡ, ಕವಿತಾ ದೇಗಾಂವ ಸೇರಿದಂತೆ ಶ್ರೀ ಮಠದ ಅನೇಕ ಭಕ್ತರೂ ಭಾಗವಹಿಸಿದ್ದರು.