ಕಲಬುರಗಿ: ರಾಜ್ಯದಲ್ಲಿ ಕಾನೂನನ್ನು ಕೈಗೆತ್ತಿಕೊಂಡು ಕೊಲೆ, ದೌರ್ಜನ್ಯವೇಸಾಗಿದರೂ ಸರ್ಕಾರ ಮಾತ್ರ ದಿವ್ಯ ಮೌನ ವಹಿಸಿರುವುದು ಖಂಡನೀಯ ಎಂದು ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಕಟು ಟೀಕೆ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಪ್ರಕರಣದಂತೆ ಅಮಾಯಕ ಹೆಣ್ಣು ಮಗಳು ಯುವತಿ ಅಂಜಲಿ ಹತ್ಯೆ ಘಟನೆಯು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ರಾಜ್ಯದಲ್ಲಿ ಮೇಲಿಂದ ಮೇಲೆ ಈ ರೀತಿಯ ಹತ್ಯೆ, ವಿವಸ್ತ್ರಗೊಳಿಸಿ ಶಾಕ್ ನೀಡಿ ದೌರ್ಜನ್ಯ, ಅಮಾಯಕರ ಮೇಲೆ ದಲಿತ ನಿಂದನೆ (ಅಟ್ರಾಸಿಟಿ) ಮೊಕದ್ದಮೆ, ರಾಜಕೀಯ ದ್ವೇಷದಿಂದ ಅಮಾಯಕರ ಮೇಲೆ ಸುಳ್ಳು ಕೇಸುಗಳನ್ನು ಹಾಕುವುದು, ಗೂಂಡಾಗಳನ್ನು ಬಿಟ್ಟು ಪ್ರತಿಪಕ್ಷದವರ ಮೇಲೆ ಹಲ್ಲೆ, ಬೆದರಿಕೆಯೊಡ್ದು ವುದು ಮುಂತಾದ ಕೃತ್ಯಗಳು ಯಾವುದೇ ಬೆದರಿಕೆ ಇಲ್ಲದೆ ನಡೆಯುತ್ತಿರುವುದು ವಿಷಾದಕರ ಸಂಗತಿ ಎಂದರು.
ಈಗಿನ ರಾಜ್ಯ ಸರ್ಕಾರವು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣವಾಗಿ ವೈಫಲ್ಯ ಕಂಡಿದೆ. ಅಪರಾಧ ಹಾಗೂ ಕೊಲೆ ಸುಲಿಗೆ ಮಾಡುವ ಪಾತಕಿಗಳಿಗೆ ಪೊಲೀಸರ ಹಾಗೂ ಕಾನೂನಿನ ಯಾವುದೇ ರೀತಿಯ ಭಯ ಇಲ್ಲದಂತಾಗಿದೆ. ಇದಕ್ಕೆ ಆಡಳಿತ ನಡೆಸುವ ರಾಜಕೀಯ ವ್ಯಕ್ತಿಗಳ ಕುಮ್ಮಕ್ಕು ಇರುವುದರಿಂದ ಇಂತಹ ದುಷ್ಟ ಶಕ್ತಿಗಳು ಭಂಡ ಧೈರ್ಯ ಮಾಡಿ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ತೀವ್ರ ಆರೋಪ ಹೊ ರಿಸಿದ್ದಾರೆ.ಅಮಾಯಕ ಹೆಣ್ಣು ಮಗಳು ಅಂಜಲಿ ಕುಟುಂಬಕ್ಕೆ ನ್ಯಾಯ ದೊರಕಿಸಲು ಸರ್ಕಾರ ತಕ್ಷಣ ಕ್ರಮ ಜರುಗಿಸಬೇಕು ಮತ್ತು ಆರೋಪಿಯನ್ನು ಶೀಘ್ರವಾಗಿ ಬಂಧಿಸಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವುದಲ್ಲದೆ ಆ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿ ನೆರವು ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ಕ್ರೈಂ ರೇಟ್ ಹೆಚ್ಚಳವಾಗುತ್ತಿದ್ದು ಅದರಲ್ಲೂ ಶಾಂತಿ ಸಾಮರಸ್ಯವನ್ನು ಕೆಡಿಸಿ ಆತಂಕದ ವಾತಾವರಣವನ್ನು ಸೃಷ್ಟಿ ಮಾಡುತ್ತಿರುವ ದುಷ್ಟ ಶಕ್ತಿಗಳನ್ನು ಬಗ್ಗುಬಡಿಯಲು ಕಠಿಣ ಕಾನೂನು ಕ್ರಮ ಜರಗಿಸಬೇಕು. ಅದರಲ್ಲೂ ಸಣ್ಣ ಸಣ್ಣ ಸಮುದಾಯಗಳ ಮತ್ತು ಹಿಂದುಗಳನ್ನು ಗುರಿಯಾಗಿಸಿ ಕೃತ್ಯಗಳನ್ನು ನಡೆಸುತ್ತಿರುವುದು ಆತಂಕದ ಸಂಗತಿ. ಪೊಲೀಸರು ಮತ್ತು ರಾಜ್ಯ ಸರ್ಕಾರವು ದುಷ್ಟ ಶಕ್ತಿಗಳ ದಮನಕ್ಕೆ ತಕ್ಷಣದಲ್ಲಿ ಕ್ರಮ ಕೈಗೊಳ್ಳದಿದ್ದಲ್ಲಿ ಜನರು ರೊಚ್ಚಿಗೆದ್ದು ಬೀದಿಗೆ ಇಳಿಯುವ ಸಂಭವ ಕಾಣುತ್ತಿದೆ ಎಂದು ಎಚ್ಚರಿಕೆ ನೀಡಿದರು.
ನಾಗರಿಕರ ಶಾಂತಿ ಸಾಮರಸ್ಯದ ಬದುಕಿಗೆ ಅಡ್ಡಿಯಾಗುವ ಶಕ್ತಿಗಳನ್ನು ಮಟ್ಟ ಹಾಕಲು ಪೊಲೀಸರಿಗೆ ಪೂರ್ಣ ಸಹಕಾರ ನೀಡಲಾಗುವುದು. ಆದರೆ ಪೊಲೀಸರು ಸರಕಾರದ ಕೈಗೊಂಬೆಯಾಗಿ ಪಕ್ಷಪಾತ ಧೋರಣೆ ಅನುಸರಿಸಿದರೆ ಬೀದಿಗಿಳಿದು ಹೋರಾಟ ಮಾಡಲಾಗುವುದು. ಚುನಾವಣೆಯ ಸಂದರ್ಭದಲ್ಲಿ ಎರಡು ಮೂರು ತಿಂಗಳು ಕಲಬುರ್ಗಿಯಲ್ಲಿ ಠಿಕಾಣಿ ಹೂಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರು ಕಲಬುರ್ಗಿಯಲ್ಲಿ ಇಂತಹ ಮಾನವೀಯ ಕೃತ್ಯ ನಡೆದರೂ ಮೌನವಹಿಸಿ ಡಾಲರ್ಸ್ ಕಾಲನಿಯಲ್ಲಿ ತಲೆಮೆಲೆಸಿಕೊಂಡು ಕೂತಿರುವುದು ನಾಚಿಕೆಗೇಡಿತನ ಸಂಗತಿ ಎಂದು ಪ್ರಿಯಾಂಕ್ ಖರ್ಗೆ ವಿರುದ್ಧ ಪರೋಕ್ಷವಾಗಿ ಟೀಕಿಸಿದರು.
ಜಗತ್ತಿನ , ರಾಷ್ಟ್ರದ ಮತ್ತು ರಾಜ್ಯದ ಎಲ್ಲಾ ಘಟನೆಗಳಿಗೂ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರನ್ನು ಮೀರಿಸುವಂತೆ ಪ್ರತಿಕ್ರಿಯೆ ನೀಡುವ ಪ್ರಿಯಾಂಕ ಖರ್ಗೆ ತನ್ನ ಸಹಚರರು ಮಾಡಿದ ಕೃತ್ಯದ ಬಗ್ಗೆ ತುಟಿ ಬಿಚ್ಚದಿರುವುದು ಅಚ್ಚರಿ ಮೂಡಿಸಿದೆ.ಉಸ್ತುವಾರಿ ಸಚಿವರ ವರ್ತನೆಗೆ ಕಲಬುರಗಿ ನಾಗರಿಕರು ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ಜಾಧವ್ ಟೀಕಿಸಿ ಇಂತಹ ಕೃತ್ಯಗಳ ವಿರುದ್ಧ ಸಿಡಿದೇಳಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.