ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆಯಲ್ಲಿ ಶೇ.69.51 ರಷ್ಟು ಮತದಾನ: ಕೃಷ್ಣ ಭಾಜಪೇಯಿ

0
20

ಕಲಬುರಗಿ: ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿನ ಆಯ್ಕೆಗಾಗಿ ಸೋಮವಾರ ಕ್ಷೇತ್ರದಾದ್ಯಂತ ಶಾಂತಿಯುತ ಮತದಾನ ನಡೆದಿದ್ದು, ಕ್ಷೇತ್ರದಾದ್ಯಂತ ಅಂದಾಜು ಶೇ.69.51 ರಷ್ಟು ಮತದಾನವಾಗಿದೆ ಎಂದು ಕ್ಷೇತ್ರದ ಚುನಾವಣಾಧಿಕಾರಿ ಮತ್ತು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ ಹೇಳಿದರು.

ಕಲಬುರಗಿ ಶೇ.66.90, ಬೀದರ್ ಶೇ.69.74, ರಾಯಚೂರು ಶೇ.71.28, ಬಳ್ಳಾರಿ ಶೇ.66.86, ಯಾದಗಿರಿ ಶೇ.61.38, ಕೊಪ್ಪಳ ಶೇ.81.61 ಹಾಗೂ ವಿಜಯನಗರ ಜಿಲ್ಲೆ ಶೇ.72.76 ರಷ್ಟು ಸೇರಿ ಒಟ್ಟಾರೆ ಶೇ.69.51 ರಷ್ಟು ಮತದಾನವಾಗಿದೆ. ಕಳೆದ ಬಾರಿ 2018ರಲ್ಲಿ ನಡೆದ ಚುನಾವಣೆಯಲ್ಲಿ ಶೇ.67.5 ರಷ್ಟು ಮತದಾನವಾಗಿತ್ತು ಎಂದು ಅವರು ಮಾಹಿತಿ ನೀಡಿದರು.

Contact Your\'s Advertisement; 9902492681

ಕಲಬುರಗಿ ವಿಭಾಗದ ಕಲಬುರಗಿ, ಯಾದಗಿರಿ, ಬೀದರ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ವ್ಯಾಪ್ತಿ ಹೊಂದಿರುವ ಈ ಕ್ಷೇತ್ರದ 195 ಮತಗಟ್ಟೆಯಲ್ಲಿ ಶಾಂತಿಯುತ ಮತದಾನ ಜರುಗಿದೆ. ಜೂನ್ 6 ರಂದು ಗುಲಬರ್ಗಾ ವಿ.ವಿ. ಹೇಮರೆಡ್ಡಿ ಮಲ್ಲಮ್ಮ ಸಂಶೋಧನಾ ಕೇಂದ್ರದಲ್ಲಿ ಮತ ಎಣಿಕೆ ನಡೆಯಲಿದೆ ಎಂದರು.

ಮತದಾನದ ಹಕ್ಕನ್ನು ಚಲಾಯಿಸಿದ್ದಕ್ಕಾಗಿ ಕ್ಷೇತ್ರದ ಮತದಾರರಿಗೆ, ಚುನಾವಣೆ ಸುಸೂತ್ರವಾಗಿ ನಡೆಯಲು ಹಗಲು-ರಾತ್ರಿ ಕಾರ್ಯನಿರ್ವಹಿಸಿದ ಕಲಬುರಗಿ ವಿಭಾಗದ ಎಲ್ಲಾ ಡಿ.ಸಿ., ಎಸ್.ಪಿ., ಜಿಲ್ಲಾ ಪಂಚಾಯತ್ ಸಿ.ಇ.ಓ, ಮಹಾನಗರ ಪಾಲಿಕೆ ಆಯುಕ್ತರು, ಸಹಾಯಕ ಚುನಾವಣಾಧಿಕಾರಿಗಳು, ಸಿಬ್ಬಂದಿಗಳಿಗೆ, ಪೆÇಲೀಸರಿಗೆ, ಶಾಂತಿಯುತ ಚುನಾವಣೆಗೆ ಸಹಕರಿಸಿದ ರಾಜಕೀಯ ಪಕ್ಷದ ನಾಯಕರು, ಅಭ್ಯರ್ಥಿಗಳು, ಏಜೆಂಟರಿಗೆ, ಕೃಷ್ಣ ಭಾಜಪೇಯಿ ಅವರು ಧನ್ಯವಾದ ಅರ್ಪಿಸಿದ್ದಾರೆ.

ಪ್ರಜ್ಞಾವಂತ ಮತದಾರರಿಂದ ಬಿರುಸಿನ ಮತದಾನ: ಕಲಬುರಗಿ ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ 8 ಗಂಟೆಗೆ ಮತದಾನ ಎಲ್ಲೆಡೆ ಆರಂಭವಾಯಿತು. ತುಂತುರು ಮಳೆ ಸುರಿದ ಕಾರಣ ಸಂಪೂರ್ಣ ವಾತಾವರಣ ತಂಪಾಗಿದಲ್ಲದೆ ಆರಂಭಿಕ ಎರಡು ಗಂಟೆ ಮತದಾನ ನಿಧಾನಗತಿಗೆ (ಶೇ.8) ಕಾರಣವಾಯಿತು. ತದನಂತರ ಪದವೀಧರರು ತಂಡೋಪ ತಂಡವಾಗಿ ಬಂದು ಉತ್ಸಾಹ ಹುಮ್ಮಸ್ಸಿನಿಂದ ಮತದ ಹಕ್ಕು ಚಲಾಯಿಸಿದರು. ಮಧ್ಯಾಹ್ನ 12 ಗಂಟೆ ಹೊತ್ತಿಗೆ ಶೇ.26, ಮಧ್ಯಾಹ್ನ 2 ಗಂಟೆ ಹೊತ್ತಿಗೆ ಶೇ.45.03 ರಷ್ಟು ಮತದಾನವಾಗಿತ್ತು. ಅಂತಿಮವಾಗಿ ಅಂದಾಜು ಶೇ. ಶೇ.69.51 ರಷ್ಟು ಮತದಾನವಾಗಿದೆ.

ಕಲಬುರಗಿ ನಗರದ ತಹಶೀಲ್ದಾರ ಕಚೇರಿ ಮತಗಟ್ಟೆ ಸಂ.32/32ಎ ರಲ್ಲಿ ಬೆಳಿಗ್ಗೆ 9.30 ಗಂಟೆಗೆ 1,810 ಮತದಾರರ ಪೈಕಿ 78 ಜನ ಮತ ಚಲಾಯಿಸಿದ್ದರು. ನಗರೇಶ್ವರ ಬಾಲ ವಿಕಾಸ ಮಂದಿರ ಮತಗಟ್ಟೆ ಸಂ.27/ಬಿ ರಲ್ಲಿ ಬೆಳಗ್ಗೆಯಿಂದಲೆ ಮತದಾನಕ್ಕೆ ಪದವೀಧರರು ಕ್ಯೂ ನಿಂತಿದ ದೃಶ್ಯ ಕಂಡಿತು. ಇಲ್ಲಿ ಬೆಳಿಗ್ಗೆ 10 ಗಂಟೆಗೆ 1,389 ಮತದಾರರ ಪೈಕಿ 102 ಜನ ತಮ್ಮ ಹಕ್ಕು ಚಲಾಯಿಸಿದ್ದರು.

ಮಹಾಗಾಂವ್ ಕ್ರಾಸ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂ.34ಕ್ಕೆ ಬೆಳಿಗ್ಗೆ 11 ಗಂಟೆಗೆ ಭೇಟಿ ನೀಡಿದಾಗ 942 ಮತದರರ ಪೈಕಿ 143 ಜನ ಆಗಲೆ ಮತ ಚಲಾವಣೆ ಮಾಡಿದರು. ಸುಮಾರು 50ಕ್ಕೂ ಹೆಚ್ಚು ಜನ ಸರದಿಯಲ್ಲಿ ನಿಂತ ದೃಶ್ಯ ಕಂಡುಬಂತು. ಬಹುತೇಕ ಸರ್ಕಾರಿ ನೌಕರರು, ಶಿಕ್ಷಕರು ಇಲ್ಲಿರುವುದು ಗಮನಾರ್ಹವಾಗಿದೆ.

ಕಲಬುರಗಿ ಜಿಲ್ಲೆಯ ಕಮಲಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜು ಮತಗಟ್ಟೆ ಸಂ.33ರಲ್ಲಿ ಬೆಳಿಗ್ಗೆ 11.30 ಗಂಟೆ ಹೊತ್ತಿಗೆ 919 ಮತದಾರರ ಪೈಕಿ 130 ಜನ ಮತ ಚಲಾಯಿಸಿದರು. ಮತಗಟ್ಟೆ ಹೊರಗಡೆ ಇಲ್ಲಿಯೂ ಜನ ಕ್ಯೂನಲ್ಲಿ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇಲ್ಲಿ ಮತಗಟ್ಟೆಗೆ ಬಂದು ಹಿರಿಯ ಜೀವಿ ನಿವೃತ್ತ ಶಿಕ್ಷಕ ಪುಂಡಲಿಕಪ್ಪ ಚಿರಡೆ (87) ಮತದಾನ ಮಾಡುವ ಮೂಲಕ ಯುವ ಮತದಾರರಿಗೆ ಮಾದರಿಯಾದರು. ಜಿಲ್ಲೆಯ ಶಹಾಬಾದ ಪಟ್ಟಣದಲ್ಲಿ ಬೆಳ್ಳಂಬೆಳಿಗ್ಗೆ ಮಳೆ ಮುಂದುವರಿದ ಕಾರಣ ಮತಗಟ್ಟೆ ಸಂ.16ಕ್ಕೆ ಮತದಾರರು ಕೊಡೆ ಹಿಡಿದುಕೊಂಡು ಬಂದು ಮತ ಚಲಾಯಿಸಿದರು.

ಆರ್.ಸಿ.-ಡಿ.ಸಿ.ಯಿಂದ ಮತದಾನ: ಕಲಬುರಗಿ ನಗರದ ತಾಲೂಕ ಪಂಚಾಯತ್ ಕಚೇರಿ ಮತಗಟ್ಟೆ ಸಂ.18ರಲ್ಲಿ ಕ್ಷೇತ್ರದ ಚುನಾವನಾಧಿಕಾರಿ ಕೃಷ್ಣ ಭಾಜಪೇಯಿ ಅವರು ಮತದಾನ ಮಾಡಿದರು. ಅದೇ ರೀತಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮತ್ತು ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ಅವರು ಕಲಬುರಗಿ ನಗರದ ಹಳೇ ಎಸ್.ಪಿ. ಕಚೇರಿ ಎದುರಿರುವ ಸರ್ಕಾರಿ ಬಾಲಕೀಯರ ಜ್ಯೂನಿಯರ್ ಕಾಲೇಜು ಮತಗಟ್ಟೆ ಸಂ.26ರಲ್ಲಿ ಮತ ಚಲಾವಣೆ ಮಾಡಿದರು.

ಮತದಾರರು ಏನಂದ್ರು: ಸೋಮವಾರ ವಿವಿಧ ಮತಗಟ್ಟೆಗೆ ಭೇಟಿ ನೀಡಿದ ಪತ್ರಿಕಾ ತಂಡವು ಮತ ಚಲಾಯಿಸಲು ಬಂದ ಯುವ ಮತದಾರರನ್ನು ಅಭಿಪ್ರಾಯ ಆಲಿಸಿದ್ದು, ಅದರಲ್ಲಿ ಕೆಲವರ ಅನಿಸಿಕೆ ಇಲ್ಲಿವೆ.

ಶಿಕ್ಷಣ ಕ್ಷೇತ್ರ ಅಭಿವೃದ್ಧಿ ಹೊಂದಬೇಕು. ಗುಣಮಟ್ಟದ ಶಿಕ್ಷಣ ಎಲ್ಲರಿಗೂ ಲಭ್ಯವಾಗಬೇಕು. ಕಲಬುರಗಿಯಲ್ಲಿ ಐ,ಎ,ಎಸ್, ಕೋಚಿಂಗ್ ಸೆಂಟರ್ ಹೆಚ್ಚಿಸಬೇಕು. ಖಾಲಿ ಹುದ್ದೆ ಭರ್ತಿ ಮಾಡುವ ಮೂಲಕ ಪದವೀಧರರಿಗೆ ಉಯೋಗ ದೊರಕಿಸಬೇಕು. – ನಾಗವೇಣಿ ಪಾಟೀಲ,ಬಿ.ಎಡ್ ಪದವೀಧರೆ ಕಲಬುರಗಿ.

ಇತ್ತೀಚೆಗಿನ ಎಸ್.ಎಸ್.ಎಲ್.ಸಿ. ಫಲಿತಾಂಶ ಜಿಲ್ಲೆಯಲ್ಲಿ ಶಿಕ್ಷಣ ಯಾವ ಮಟ್ಟಿಗೆ ಇದೆ ಎಂದು ತೋರಿಸಿದೆ. ತಾಂತ್ರಿಕತೆ ಹೆಚ್ಚು ಉಪಯೋಗಿಸಿ ಗುಣಾತ್ಮಕ ಶಿಕ್ಷಣ ನೀಡುವತ್ತ ಹೆಚ್ಚು ಗಮನಹರಿಸಬೇಕಿದೆ. ಪ್ರತಿ ವರ್ಷ ಲಕ್ಷಾಂತರು ಪದವೀಧರರು ತೇರ್ಗಡೆಯಾಗುತ್ತಿದ್ದು, ಸರ್ಕಾರಿ-ಖಾಸಗಿ ಕಂಪನಿಯಲ್ಲಿ ಉದ್ಯೋಗ ಲಭಿಸಬೇಕು. ಐ.ಟಿ.-ಬಿ.ಟಿ. ಕಂಪನಿಗಳು ಕಲಬುರಗಿಗೆ ಬರಬೇಕಿದೆ. -ಗೀತಾ ಸುತಾರ,ಶಿಕ್ಷಕಿ ಕಲಬುರಗಿ.

ಯು.ಪಿ.ಎಸ್.ಸಿ.ಯಲ್ಲಿಯೂ ನಮ್ಮ ಭಾಗದ ಜನರು ತೇರ್ಗಡೆಯಾಗುವಂತ ತರಬೇತಿ ಕೇಂದ್ರ ಇಲ್ಲಿ ಆರಂಭಿಸುವ ಅವಶ್ಯಕತೆ ಇದೆ. ಉದ್ಯೋಗ ಅರಸಿ ಬೆಂಗಳೂರು, ಹೈದ್ರಾಬಾದ, ಮುಂಬೈದಂತಹ ಮಹಾನಗರಗಳಿಗೆ ಹೋಗುವುದನ್ನು ತಪ್ಪಿಸಲು ಇಲ್ಲಿನ ಪದವೀಧರರಿಗೆ ಇಲ್ಲಿಯೇ ಕೆಲಸ ಸಿಗುವಂತೆ ಕಾರ್ಖಾನೆ, ಐ.ಟಿ.-ಬಿ.ಟಿ. ವಲಯ ಸ್ಥಾಪಿಸಬೇಕು. –ಕಿರಣ,ಮೆಡಿಕಲ್ ಪ್ರತಿನಿಧಿ ಕಲಬುರಗಿ.

ವಿದ್ಯಾರ್ಥಿ ವೇತನ ತುಂಬಾ ಸಮಸ್ಯೆಯಾಗಿದ್ದು, ಈ ಸಮಸ್ಯೆ ಶೀಘ್ರ ಬಗೆಹರಿಯಬೇಕು. ಬಡ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀತಿ ರೂಪಿಸಬೇಕಿದೆ. ಪ್ರಥಮ ಬಾರಿಗೆ ಮತ ಚಲಾಯಿಸಲು ಬಂದಿರುವೆ, ಖುಷಿ ನೀಡಿದೆ. –ಪಲ್ಲವಿ ಸಂಗಾಣಿ,ಮಹಾಗಾಂವ್ ಕ್ರಾಸ್.

ಇಳಿ ವಯಸ್ಸಿನಲ್ಲಿಯೂ ಇಂದು ಮತಗಟ್ಟೆಗೆ ಬಂದು ಮತ ಚಲಾಯಿಸಿರುವೆ. ಮತ ಮೌಲ್ಯವಾದರೆ ಅದೇ ನನಗೆ ಸಂತೋಷ. ದೇಶ ನಮಗೆಲ್ಲವನ್ನು ನೀಡಿದೆ. ಪ್ರಜ್ಞಾವಂತ ಮತದಾರರಾದ ನಾವು ನಮ್ಮ ಹಕ್ಕು ಚಲಾಯಿಸುವುದನ್ನು ಮರೆಯಬಾರದು. –ಪುಂಡಲಿಕ್ ಚಿರಡೆ (87),ನಿವೃತ್ತ ಶಿಕ್ಷಕ ಕಮಲಾಪುರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here