ಕಲಬುರಗಿ; ಅಂಗನವಾಡಿ ನೌಕರರ ಬೃಹತ್ ಪ್ರತಿಭಟನೆ

0
266

ಕಲಬುರಗಿ: ಕಳೆದ ಮೇ 13ರಂದು ವಿಭಾಗೀಯ ಶಾಲಾ ಶಿಕ್ಷಣ ಇಲಾಖೆಯು ಹೊರಡಿಸಿರುವ ಆದೇಶದಲ್ಲಿ ಆರಂಭಿಕ ಬಾಲ್ಯದ ಆರೈಕೆ ಮತ್ತು ಇಸಿಸಿಇ ಶಿಕ್ಷಣವನ್ನು ಪ್ರಾರಂಭಿಸಲು ಹೊರಡಿಸಿರುವ ಸುತ್ತೋಲೆಯನ್ನು ತಕ್ಷಣವೇ ವಾಪಸ್ಸು ಪಡೆಯುವಂತೆ ಹಾಗೂ ಐಸಿಡಿಎಸ್ ಕೆಲಸವನ್ನು ಖಾಯಂ ಆಗಿ ಮುಚ್ಚಿಸುವ ಕೆಲಸವನ್ನು ಶಿಕ್ಷಣ ಇಲಾಖೆ ನಿಲ್ಲಿಸಬೇಕು ಎಂದು ಒತ್ತಾಯಿಸಿ ಕಲ್ಯಾಣ ಕರ್ನಾಟಕದ ವ್ಯಾಪ್ತಿಯ ಎಳು ಜಿಲ್ಲೆಗಳಲ್ಲಿನ ಅಂಗನವಾಡಿ ನೌಕರರು ಸೋಮವಾರ ಕಲಬುರಗಿ ಚಲೋ ಚಳುವಳಿ ನಿಮಿತ್ತ ಬೃಹತ್ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಕಾರರು ತಾವು ತಂದ ಬುತ್ತಿಯೂಟವನ್ನು ಮಾಡಿ ಅಹೋರಾತ್ರಿ ಚಳುವಳಿಯನ್ನು ಮುಂದುವರೆಸಿದರು. ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯ ಅಧ್ಯಕ್ಷೆ ಶ್ರೀಮತಿ ಎಸ್. ವರಲಕ್ಷ್ಮೀ, ಕಾರ್ಯಾಧ್ಯಕ್ಷೆ ಶಾಂತಾ ಎನ್. ಘಂಟೆ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಸುನಂದಾ, ಶ್ರೀಮತಿ ಗೌರಮ್ಮ ಪಾಟೀಲ್, ಜಿಲ್ಲಾ ಖಜಾಂಚಿ ಮಹಾದೇವಿ ಕೆ. ಪೋಲಕಪಳ್ಳಿ, ಜಿಲ್ಲಾ ಕಾರ್ಯದರ್ಶಿ ರಾಜಮತಿ ಪಾಟೀಲ್, ಪುಷ್ಪಾ ಆಳಂದ್, ದೇವಮ್ಮ ಅನ್ನದಾನಿ, ರತ್ನ ಕಲಬುರ್ಗಿ, ಶ್ರೀದೇವಿ ಚಾಂಡೆ, ಹೆಚ್. ಪದ್ಮಾ, ಗಿರಿಜಾ, ಉಮಾ, ಬಸಲಿಂಗಮ್ಮ ಮುಂತಾದವರು ಪಾಲ್ಗೊಂಡಿದ್ದರು.

Contact Your\'s Advertisement; 9902492681

ಪ್ರತಿಭಟನೆಕಾರರು ನಂತರ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿ, 1974ರ ರಾಷ್ಟ್ರೀಯ ಮಕ್ಕಳ ಶಿಕ್ಷಣ ನೀತಿಯ ಭಾಗವಾಗಿ ಮತ್ತು ಲೀಗ್ ಆಫ್ ನೇಷನ್ಸ್‍ನ ರಾಷ್ಟ್ರಗಳು ಪ್ರಾರಂಭಿಸಿದ ಯೂನಿಸೆಫ್ ಸಂಸ್ಥೆಯ ಮುಖಾಂತರ 6 ವರ್ಷದ ಮಕ್ಕಳು ದೇಶದ ಸಂಪತ್ತು ಮಾತ್ರವಲ್ಲದೇ ಸಮಾಜದ ಪುನರುತ್ಪಾನೆ ಎಂದು ಘೋಷಿಸಿ 1975ರಲ್ಲಿ ಐಸಿಡಿಎಸ್ ಭಾರತದಲ್ಲಿ ಪ್ರಾರಂಭಿಸಲಾಗಿದೆ.

ಯೋಜನೆ ಪ್ರಾರಂಭವಾದ ಮೇಲೆ ಭಾರತದ ಮಕ್ಕಳ ಮರಣ ಪ್ರಮಾಣ ಕಡಿಮೆಯಾಗಿ ಅಪೌಷ್ಠಿಕತೆಯ ವಿರುದ್ಧ ನಿರಂತರವಾಗಿ ಸೆಣಸಾಡಿ ದೇಶದ ಅಭಿವೃದ್ಧಿಗೆ ಸಹಕಾರಿಯಾಗಿದೆ. ಐಸಿಡಿಎಡಸ್ ಮಾರ್ಗದರ್ಶಿಯಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಕೊಡಬೇಕೆಂದು ಸ್ಪಷ್ಟಪಡಿಸಿದೆ ಎಂದರು.

ಆದಾಗ್ಯೂ, ಸರ್ಕಾರದ ಇಬ್ಬಗೆಯ ನೀತಿಗಳಿಂದ ಮತ್ತು ಹೆಚ್ಚುವರಿ ಕೆಲಸಗಳನ್ನು ಕೊಟ್ಟಿದ್ದರಿಂದ ಐಸಿಡಿಎಸ್‍ಗೆ ಹೆಚ್ಚಿನ ಆದ್ಯತೆ ಸಿಗಲಿಲ್ಲ. 1990ರಲ್ಲಿ ವಿಶ್ವಸಂಸ್ಥೆ ಎಲ್ಲರಿಗೂ ಶಿಕ್ಷಣ ಎಂಬುದನ್ನು ಘೋಷಿಸಿದ ನಂತರ ಹಲವು ಚರ್ಚೆಗಳ ನಂತರ ಮತ್ತು ಬದಲಾಗುತ್ತಿರುವ ಸಮಾಜದಲ್ಲಿ ಇಂದು ಶಿಕ್ಷಣ ಆದ್ಯತೆಯ ವಿಷಯವಾಗಿ ಬರುತ್ತಿದೆ. ಆ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಆದ್ಯತೆಯ ವಿಷಯವಾಗಿ ಬೆಳಿಗ್ಗೆ 10ರಿಂದ 1 ಗಂಟೆಯ ತನಕ ಇಸಿಸಿಇ ನಡೆಯುತ್ತಿದೆ. ಭಾರತ ಸರ್ಕಾರದ ಎನ್‍ಸಿಇಆರ್‍ಟಿ ಅಂತಿಮ ಮಾಡಿರುವ ಇಸಿಸಿಇಯನ್ನು ಮಕ್ಕಳಿಗೆ ಔಪಚಾರಿಕ ಶಿಕ್ಷಣವಾಗಿ ಕಲಿಸಲಾಗುತ್ತದೆ ಎಂದು ಅವರು ಹೇಳಿದರು.

ವಿಭಾಗದ ಆಯುಕ್ತರು ಕಳೆದ ಮೇ 13ರಂದು ಕಲ್ಯಾಣ ಕರ್ನಾಟಕಕ್ಕೆ ಬರುವ 8 ಜಿಲ್ಲೆಗಳಾದ ಬಳ್ಳಾರಿ, ವಿಜಯನಗರ, ಕೊಪ್ಪಳ್, ರಾಯಚೂರು, ಯಾದಗಿರಿ, ಕಲಬುರ್ಗಿ ಮತ್ತು ಬೀದರ್ ಜಿಲ್ಲೆಗಳ 39 ತಾಲ್ಲೂಕುಗಳಲ್ಲಿ 1,170 ಅಂದರೆ ಒಂದು ತಾಲ್ಲೂಕಿಗೆ 30 ಪ್ರಾಥಮಿಕ ಶಾಲೆಗಳಲ್ಲಿ ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ (ಇಸಿಸಿಇ)ಯನ್ನು ಪ್ರಾರಂಭಿಸಲು ಏಕಮುಖವಾಗಿ ಆದೇಶಿಸಲಾಗಿದೆ ಎಂದು ಅವರು ದೂರಿದರು.

2016ರಿಂದ ಶಿಕ್ಷಣ ಇಲಾಖೆ ಇಂತಹ ಪ್ರಯತ್ನಗಳು ನಡೆಸುತ್ತಲೇ ಬರುತ್ತಿದೆ. ಇರುವಂತಹ ಐಸಿಡಿಎಸ್‍ನ್ನು ಬಲಿಷ್ಠಗೊಳಿಸುವ ಬದಲಿಗೆ ಆಯಾಯ ಇಲಾಖೆಗಳು ತಮ್ಮ ವ್ಯಾಪ್ತಿಯನ್ನು ಮೀರಿ ಐಸಿಡಿಎಸ್‍ನ ಕೆಲಸಗಳನ್ನು ಹಂಚಿಕೊಳ್ಳುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದ ಅವರು, ಕಳೆದ 2019ರ ಜನವರಿ 7ರಂದು ನಡೆದ ಅಂದಿನ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಸಭೆಯ ತಿರ್ಮಾನದಂತೆ ಡಬ್ಲುಸಿಡಿ ಮತ್ತು ಶಿಕ್ಷಣ ಇಲಾಖೆಯು ತಮ್ಮ ವಾದಗಳನ್ನು ಸಚಿವ ಸಂಪುಟಕ್ಕೆ ಸಲ್ಲಿಸಬೇಕು ಎಂಬುದನ್ನು ತೀರ್ಮಾನಿಸಿದರು. ಆದರೆ ಎರಡೂ ಇಲಾಖೆಗಳು ಇದಿವರೆಗೂ ವರದಿ ಸಲ್ಲಿಸಲಿಲ್ಲ ಶಿಕ್ಷಣ ಇಲಾಖೆ ಏಕಮುಖವಾಗಿ ವರ್ಷದಿಂದ ವರ್ಷಕ್ಕೆ ಕೆಪಿಎಸ್ ಶಾಲೆಗಳನ್ನು ಹೆಚ್ಚಿಸುತ್ತಿದೆ. ಇಂದಿನ ಕರ್ನಾಟಕ ಸರ್ಕಾರ ಹೊಸ ಶಿಕ್ಷಣ ನೀತಿ ಅಳವಡಿಸುವುದಿಲ್ಲ ಎಂದು ಹೇಳುತ್ತಿದೆ. ಅದಕ್ಕಾಗಿ ರಾಜ್ಯದ ಶಿಕ್ಷಣ ನೀತಿಯನ್ನು” ರೂಪಿಸಲು ಪ್ರತ್ಯೇಕ ಆಯೋಗವನ್ನು ಮಾಡಿದೆ. ಆಯೋಗ ರಚನೆಯ ವರದಿ ಬರುವ ಮುಂಚೆನೇ ಈ ರೀತಿಯ ಆದೇಶ ಮಾಡಿರುವುದು ಏಕಮುಖವಾಗಿದೆ ಎಂದು ಟೀಕಿಸಿದರು.

ಡಬ್ಲುಸಿಡಿ ಮತ್ತು ಶಿಕ್ಷಣ ಇಲಾಖೆ ಎರಡೂ ಸರ್ಕಾರದಡಿಯಲ್ಲಿಯೇ ಬರುತ್ತದೆ. ಒಂದು ಇಲಾಖೆಯ ಕಾರ್ಯಕ್ರಮವನ್ನು ಮುಚ್ಚಿಸಿ ಇನ್ನೊಂದು ಇಲಾಖೆ ಬಲಿಷ್ಠವಾಗುವುದು ಹೇಗೆ? ಐಸಿಡಿಎಸ್‍ನಡಿಯಲ್ಲಿನ ಅನುಭವ ಇರುವ, ಮಕ್ಕಳೊಡನೆ ಬೆರೆಯುವಂತಹ ಕಲೆಯಿರುವ, ಶಿಕ್ಷಣವಂತ ಅಂಗನವಾಡಿ ನೌಕರರು ಇರುವಾಗ, ಪಿಯುಸಿ ಮಾನದಂಡ ಮೇಲೆ ಹೊಸದಾಗಿ ಅತಿಥಿ ಶಿಕ್ಷಕರನ್ನು ನೇಮಿಸಿ, ಅವರಿಗೆ ತರಬೇತಿ ಕೊಟ್ಟು ಕೆಲಸ ಮಾಡಿಸಿದರೆ ಮಕ್ಕಳ ಒಡನಾಟ ಎಂಬುದು ಖಂಡಿತ ಸಾಧ್ಯವಿಲ್ಲ. ಹಣವಿಲ್ಲ ಎಂದು ಹೇಳುವ ಸರ್ಕಾರ ಈ ರೀತಿಯ ನಕಲು ಯೋಜನೆಗಳನ್ನು ತರಲು ಒಪ್ಪಿಗೆ ಕೊಡುವುದು ನಿಲ್ಲಿಸಬೇಕು. ಆದ್ದರಿಂದ ಕೂಡಲೇ ಈ ಸುತ್ತೋಲೆ ವಾಪಸ್ಸು ತಗೆಯಬೇಕು ಡಬ್ಲುಸಿಡಿ ಇಲಾಖೆ ಇದಕ್ಕೆ ಬೇಕಾದ ಎಲ್ಲ ರೀತಿಯ ತುರ್ತು ಕ್ರಮಗಳನ್ನು ತೆಗೆದು ಕೊಳ್ಳಬೇಕೆಂದು ಅವರು ಒತ್ತಾಯಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here