ಕಲಬುರಗಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ಹರಸಿದ ಎಲ್ಲ ಮತದಾರ ಪ್ರಭುಗಳಿಗೆ ಮತ್ತು ಅಭಿಮಾನಿಗಳಿಗೆ ಕಾರ್ಯಕರ್ತರಿಗೆ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಡಾ. ಉಮೇಶ್ ಜಾಧವ್ ಅವರು ತಿಳಿಸಿದ್ದಾರೆ.
ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಆರು ಲಕ್ಷಕ್ಕಿಂತಲೂ ಹೆಚ್ಚು ಮತವನ್ನು ನೀಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕಲಬುರಗಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮಾನ್ಯತೆ ನೀಡಿದ ಮತದಾರರಿಗೆ ನಾನು ಶಿರಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸುತ್ತೇನೆ. ಚುನಾವಣೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಸೋಲನ್ನು ಕೂಡ ಸಮಾನವಾಗಿ ಸ್ವೀಕರಿಸುತ್ತೇನೆ ಹಾಗೂ ಕ್ಷೇತ್ರದ ಜನತೆ ಜೊತೆ ಸದಾ ಸ್ಪಂದಿಸುತ್ತೇನೆ ಕೇಂದ್ರದಲ್ಲಿ ಎನ್ ಡಿ ಎ ಸರಕಾರವೇ ಅಧಿಕಾರದಲ್ಲಿ ಇರುವುದರಿಂದ ಕೇಂದ್ರದ ಯೋಜನೆಗಳನ್ನು ಕಲಬುರಗಿಗೆ ತರಲು ಸದಾ ತಮ್ಮ ಜೊತೆ ಇರುತ್ತೇನೆ ಎಂದಿದ್ದಾರೆ.
ಚುನಾವಣೆಯ ಸೋಲನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಿ ಪಕ್ಷದ ಕಾರ್ಯಕರ್ತರು ನಾಡಿನ ಅಭಿವೃದ್ಧಿ ಮತ್ತು ಪಕ್ಷದ ಹಿತಕ್ಕಾಗಿ ಮುಂದೆಯೂ ಕೂಡ ಅಹರ್ನಿಶಿ ದುಡಿಯುವಂತೆ ಮನವಿ ಮಾಡಿಕೊಳ್ಳುತ್ತೇನೆ ಮತ್ತು ಸದಾ ತಮ್ಮೊಂದಿಗೆ ಇರುತ್ತೇನೆ ಎಂದು ಭರವಸೆ ನೀಡಿದರು.
ಈ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನ ಕಾರ್ಯಕರ್ತರು ಪೂರ್ಣ ಸಹಕಾರ ನೀಡಿ ದ ಪರಿಣಾಮವಾಗಿ ಇಷ್ಟು ಮತಗಳನ್ನು ಗಳಿಸಲು ಸಾಧ್ಯವಾಗಿದೆ ಎಂದು ಹೇಳಿದರು. ಕಲಬುರಗಿ ಲೋಕಸಭಾ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಉತ್ತಮ ಬೆಂಬಲ ನೀಡಿದ ಮತದಾರರಿಗೆ ಮತ್ತು ಪಕ್ಷದ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸೋಲು ಗೆಲುವಿನ ಸೋಪಾನವಾಗಿದ್ದು ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಯನ್ನು ಮಾಡಿ ಬರುವ ಚುನಾವಣೆಗಳನ್ನು ಪ್ರಾಮಾಣಿಕವಾಗಿ ಗೆಲ್ಲುವ ಪ್ರಯತ್ನ ಮಾಡೋಣ. ನನಗೆ ಸ್ಪರ್ಧಿಸಲು ಅವಕಾಶ ನೀಡಿದ ಪಕ್ಷದ ಕೇಂದ್ರ ಮತ್ತು ರಾಜ್ಯದ ನಾಯಕರಿಗೆ ಸದಾ ಋಣಿಯಾಗಿರುತ್ತೇನೆ.