ಚಿಮಣಿ ಬೆಳಕಲ್ಲಿ ಓದಿದ ಅಂಬೇಡ್ಕರ್ ಆದರ್ಶ: ‘ಶಾಲೆಯ ಶ್ರೇಷ್ಠ ಪ್ರತಿಭೆ’ ಪ್ರಶಸ್ತಿ-ಪುರಸ್ಕಾರ

0
25

ವಾಡಿ: ಬಡತನ ಎಂಬ ಮಹಾ ಕ್ರೌರ್ಯದ ನಡುವೆ ಎದೆಗುಂದದೆ ಚಿಮಣಿ ಬೆಳಕಿನಲ್ಲಿ ಅಭ್ಯಾಸ ಮಾಡಿ ವಿಶ್ವಜ್ಞಾನಿ ಎನ್ನಿಸಿಕೊಂಡಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ವ್ಯಕ್ತಿತ್ವ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಆದರ್ಶವಾಗಿದೆ ಎಂದು ಚಿತ್ತಾಪುರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಜಗದೇವಿ ಹತ್ತೂರ ಹೇಳಿದರು.

ಗುರುವಾರ ಪಟ್ಟಣದ ಅದಾನಿ ಫೌಂಡೇಷನ್ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಎಸಿಸಿ ಅದಾನಿ ಫೌಂಡೇಷನ್ ವತಿಯಿಂದ ಏರ್ಪಡಿಸಲಾಗಿದ್ದ ಹತ್ತನೇ ತರಗತಿಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದು ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾದ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ‘ಶಾಲಾ ಶ್ರೇಷ್ಠ ಪ್ರತಿಭೆ’ ಪ್ರಶಸ್ತಿ-ಪುರಸ್ಕಾರ ಪ್ರಧಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

12ನೇ ಶತಮಾನದಲ್ಲಿ ಬಸಣ್ಣನವರು ಪಾರ್ಲಿಮೆಂಟ್ ಪದ್ಧತಿಯ ಆಡಳಿತ ಜಾರಿಗೆ ತಂದರು. ಕಷ್ಟಗಳ ಮಧ್ಯೆ ಶಿಕ್ಷಣ ಪಡೆದುಕೊಂಡ ಅಂಬೇಡ್ಕರರು ಅದೇ ಕಲ್ಪನೆಯಲ್ಲಿ ಸಂವಿಧಾನ ಬರೆದು ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಯನ್ನು ಪ್ರಜೆಗಳ ಕೈಗಿಟ್ಟರು. ಇಂದು ಜಗತ್ತು ಬಹಳ ವೇಗವಾಗಿ ಬದಲಾಗಿದೆ. ಇಂದಿನ ವಿದ್ಯಾರ್ಥಿಗಳು ವಿದ್ಯುತ್ ದೀಪಗಳ ಬೆಳಕಿನಲ್ಲಿ ಓದುವ ಸೌಲತ್ತು ಹೊಂದಿದ್ದಾರೆ. ಶೈಕ್ಷಣಿಕ ಗೊಂದಲಗಳನ್ನು ಬಗೆಹರಿಸಿಕೊಳ್ಳಲು ಅಂತರ್ಜಾಲದಲ್ಲಿ ಸಾಕಷ್ಟು ಸೌಲಭ್ಯ ಸಂಪನ್ಮೂಲಗಳಿವೆ. ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಯಾಗಿ ಬೆಳೆಯಲು ಅಂಕ ಶಿಕ್ಷಣದ ಜತೆಗೆ ಬದುಕಿನ ಸಂಸಕಾರವನ್ನೂ ಕಲಿತುಕೊಳ್ಳಬೇಕು ಎಂದರು.

ಕಸಾಪ ಗೌರವ ಸಲಹೆಗಾರ ಮಡಿವಾಳಪ್ಪ ಹೇರೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಅಧ್ಯಕ್ಷ ಸಿದ್ಧಯ್ಯಶಾಸ್ತ್ರೀ ನಂದೂರಮಠ ಅಧ್ಯಕ್ಷತೆ ವಹಿಸಿದ್ದರು. ಎಸಿಸಿ ಕಾರ್ಖಾನೆಯ ಎಚ್‍ಆರ್ ವಿಭಾಗದ ಮುಖ್ಯಸ್ಥ ಎಡ್ಡು ಕೋಟೇಶ್ವರರಾವ, ಸಿಎಸ್‍ಆರ್ ವಿಭಾಗದ ಮುಖ್ಯಸ್ಥರಾದ ಎಂ.ಯು.ವೀರೇಶ, ರಮೇಶ ಉಡಪಡಿ, ಜಗದೀಶ ರಾಠೋಡ, ಶ್ರೀಶೈಲ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಸದಾಶಿವ ಕಟ್ಟಿಮನಿ, ಕಸಾಪ ತಾಲೂಕು ಆಧ್ಯಕ್ಷ ವೀರೇಂದ್ರಕುಮಾರ ಕೊಲ್ಲೂರ, ಸಿಆರ್‍ಪಿ ಸೂರ್ಯಕಾಂತ ದಿಗ್ಗಾಂವ, ಚಂದ್ರು ಕರಣಿಕ, ಬಸವರಾಜ ಕೇಶ್ವಾರ, ಶಿಕ್ಷಕರಾದ ಶೇಖ ಅನ್ವರಖಾನ್, ಜಯಾರಾಣಿ ವಸಂತಾ, ಉದಯ ಧರೆಣ್ಣವರ್, ಶರಣುಕುಮಾರ ದೋಶೆಟ್ಟಿ, ಶ್ರೀನಾಥ ಇರಗೊಂಡ, ವಿ.ಕೆ.ಕೆದಿಲಾಯ, ಜಯದೇವ ಜೋಗಿಕಲ್‍ಮಠ, ಶಿವಪ್ಪ ಮುಂಡರ್ಗಿ, ಕಾಶೀನಾಥ ಶೆಟಗಾರ ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಪೋಷಕರು ಪಾಲ್ಗೊಂಡಿದ್ದರು. ದಯಾನಂದ ಖಜೂರಿ ಸ್ವಾಗತಿಸಿದರು. ರವಿ ಕೋಳಕೂರ ನಿರೂಪಿಸಿದರು. ರಾಯಣ್ಣ ಕಮರವಾಡಿ ವಂದಿಸಿದರು. ಎಸ್ಸೆಸ್ಸೆಲ್ಸಿಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಜನಕಲಾ ಸಮಿತಿಯ ಶೋಭಾ ನಿಂಬರ್ಗಾ ತಂಡದವರು ಸಂವಿಧಾನ ಪೀಠಿಕೆ ಪಠಣ, ನಾಡಗೀತೆ ಹಾಗೂ ಪರಿಸರ ಗೀತೆಗಳನ್ನು ಹಾಡಿದರು.

“ಶೈಕ್ಷಣಿಕ ಗುಣಮಟ್ಟ ಹೆಚ್ಚಬೇಕು ಎಂದರೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು. ಮಕ್ಕಳು ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆಯುವಂತಾಗಲು ಶಿಕ್ಷಕರಿಗೆ ವಿಶೇಷ ತರಬೇತಿ ನೀಡುವ ಅಗತ್ಯವಿದೆ. ಶಾಲೆಯ ವಾತಾವರಣವೂ ಕೂಡ ಬದಲಾಗಬೇಕಾಗುತ್ತದೆ. ಶಿಕ್ಷಣಕ್ಕೆ ಸಂಬಂದಿಸಿದಂತೆ ಕನ್ನಡ ಸಾಹಿತ್ಯ ಪರಿಷತ್ತು ಇನ್ನುಮುಂದೆಯೂ ಕಾರ್ಯಕ್ರಮಗಳನ್ನು ರೂಪಿಸುವುದಾದರೆ ಎಸಿಸಿ ಅದಾನಿ ಫೌಂಡೇಷನ್ ವತಿಯಿಂದ ಸಹಕಾರ ನೀಡಲಾಗುವುದು. ವಾಡಿಯಲ್ಲಿ ತಾಲೂಕು ಮಟ್ಟದ ಶಿಕ್ಷಕರ ಕಾರ್ಯಾಗಾರ ಏರ್ಪಡಿಸಲು ಮುಂದಾದರೆ ಅದಕ್ಕೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ”. -ಎಡ್ಡು ಕೋಟೇಶ್ವರರಾವ್. ಮುಖ್ಯಸ್ಥರು, ಎಚ್‍ಆರ್ ವಿಭಾಗ ಎಸಿಸಿ ವಾಡಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here