ಕಲಬುರಗಿ; ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಗುರುವಾರ ಚಿತ್ತಾಪುರ ಮತ್ತು ಶಹಾಬಾದ ತಾಲೂಕಿನ ವಿವಿಧ ಇಲಾಖೆಗಳೀಗೆ ಅನಿರೀಕ್ಷಿತ ಭೇಟಿ ನೀಡಿ ಸರ್ಕಾರಿ ಕಚೇರಿಗಳ ಕಾರ್ಯನಿರ್ವಹಣೆ ವೀಕ್ಷಿಸಿದ ಅವರು, ಚಿತ್ತಾಪೂರ ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ನಿರ್ಮಾಣದ ಹಂತದಲ್ಲಿರುವ ವಿವಿಧ ಕ್ರೀಡೆಗಳ ಅಂಕಣ, ಮೈದಾನ ಕಾಮಗಾರಿಗಳನ್ನು ಬರುವ ಜುಲೈ 30 ರೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಗಡುವು ನೀಡಿದರು.
ಕ್ರೀಡಾ ಚಟುವಟಿಕೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಇಂಡೋರ್ ಸ್ಟೇಡಿಯಂ, ಫುಟ್‍ಬಾಲ್ ಮೈದಾನ, ಸೆಟಲ್ ಬ್ಯಾಡ್ಮಿಂಟನ್, ವಾಲಿಬಾಲ್ ಅಂಕಣ ಹೀಗೆ ವಿವಿಧ ಕ್ರೀಡಾ ಕಾಮಗಾರಿಗಳನ್ನು ವೀಕ್ಷಿಸಿದ ಅವರು ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಉಳಿದ ಕಾಮಗಾರಿ ಜುಲೈ ಮಾಸಾಂತ್ಯಕ್ಕೆ ಮುಗಿಸಿದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ದಿನಾಂಕ ಪಡೆದು ಇದನ್ನು ಉದ್ಘಾಟಿಸಲಾಗುವುದೆಂದ ಅವರು, ಕ್ರೀಡಾಂಗಣದಕಂಪೌಂಡ್ ಗೋಡೆ ನಿರ್ಮಾಣಕ್ಕೆ ಕೂಡಲೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇದಕ್ಕು ಮುನ್ನ ಚಿತ್ತಾಪೂರ ಪಟ್ಟಣದ ಸರ್ಕಾರಿ ಮೆಟ್ರಿಕ್ ನಂತರ ಬಾಲಕೀಯರ ವಸತಿ ನಿಲಯಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ನಿಲಯಾರ್ಥಿಗಳೊಂದಿಗೆ ಕುಶಲೋಪರಿ ವಿಚಾರಿಸುತ್ತಾ ವಸತಿ ನಿಲಯದಲ್ಲಿ ಟ್ಯೂಷನ್ ಹೇಳಲಾಗುತ್ತಿದಿಯೆ, ಆತ್ಮ ರಕ್ಷಣೆಗೆ ಕರಾಟೆ ತರಬೇತಿ ನೀಡಲಾಗುತ್ತಿದಿಯೇ, ವಸತಿ-ಊಟ ಚೆನ್ನಾಗಿ ನೀಡಲಾಗುತ್ತಿದಿಯೇ ಎಂದು ವಿದ್ಯಾರ್ಥಿನಿಯರನ್ನು ಪ್ರಶ್ನಿಸಿದರು. ನಿಲಯದ ಮಲಗುವ ಕೋಣೆ, ಅಡುಗೆ ಕೋಣೆ ವೀಕ್ಷಿಸಿ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡುವಂತೆ ವಾರ್ಡ್‍ನ್ ಅವರಿಗೆ ಸೂಚಿಸಿದರು. ಪಟ್ಟಣದ ಬಹಾರ್‍ಪೇಟ್ ಅಂಗನವಾಡಿ ಕೇಂದ್ರಕ್ಕೂ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ದೈನಂದಿನ ನಲಿ-ಕಲಿ ಕಾರ್ಯಕ್ರಮ ಕುರಿತು ಮಾಹಿತಿ ಪಡೆದುಕೊಂಡರು. ಮಕ್ಕಳಿಗೆ ನೀಡಲಾಗುತ್ತಿರುವ ಪೌಷ್ಠಿಕ ಆಹಾರ ಸವಿಯುವ ಮೂಲಕ ಪರೀಕ್ಷಿಸಿದರು.
ನಂತರ ಪಟ್ಟಣದ ತಹಶೀಲ್ದಾರ ಕಚೇರಿ ಎದುರು ಹೊಸದಾಗಿ ನಿರ್ಮಿಸಲಾಗುತ್ತಿರುವ ಮಿನಿ ವಿಧಾನ ಸೌಧ ಕಟ್ಟಡಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು. ಪೊಲೀಸ್ ಠಾಣೆ, ಸಾರ್ವಜನಿಕ ಆಸ್ಪತ್ರೆಗೂ ಭೇಟಿ ನೀಡಿದರು. ಇದೇ ಸಂದರ್ಭದಲ್ಲಿ ತಾಲೂಕಿನಲ್ಲಿ ಜಾನುವಾರುಗಳಿಗೆ ನೀಡಲಾಗುವ ಲಸಿಕಾಕರಣ ಕಾರ್ಯಕ್ಕೆ ಡಿ.ಸಿ. ಅವರು ಚಾಲನೆ ನೀಡಿದರು.
ಅರ್ಜಿ ವಿಲೇವಾರಿ ತ್ವರಿತಗೊಳಿಸಲು ಸೂಚನೆ:
ಚಿತ್ತಾಪೂರ ತಾಲೂಕು ಭೇಟಿ ಪೂರ್ವ ರಸ್ತೆ ಮಧ್ಯೆ ಬರುವ ಶಹಾಬಾದ ಪಟ್ಟಣದ ನಾಡ ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು, ಸಾರ್ವಜನಿಕರಿಗೆ ಸಾಮಾಜಿಕ ಪಿಂಚಣಿ ಸೇರಿದಂತೆ ವಿವಿಧ ರೀತಿಯ ಕಂದಾಯ ಸೇವೆ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡುವಂತೆ ಸಿಬ್ಬಂದಿಗಳೀಗೆ ತಾಕೀತು ಮಾಡಿದರು. ಪಟ್ಟಣದ ರೈತ ಸಂಪರ್ಕ ಕೇಂದ್ರಕ್ಕೂ ಭೇಟಿ ನೀಡಿದ ಅವರು ರೈತರಿಗೆ ಸಕಾಲದಲ್ಲಿ ಬೀಜ, ರಸಗೊಬ್ಬರ ವಿತರಣೆ ಮಾಡಬೇಕು. ಯಾವುದೇ ಗೊಂದಲಕ್ಕೆ ಅವಕಾಶ ಮಾಡಿಕೊಡಬಾರದೆಂದು ಕೃಷಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿಗಳ ಜೊತೆ ಎಸ್.ಪಿ. ಅಕ್ಷಯ್ ಹಾಕೈ, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವಾರ್ ಸಿಂಗ್ ಮೀನಾ, ಪ್ರೋಬೇಷನರ್ ಐ.ಎ.ಎಸ್. ಅಧಿಕಾರಿ ಮೀನಾಕ್ಷಿ ಆರ್ಯ, ಸಹಾಯಕ ಆಯುಕ್ತ ಆಶಪ್ಪ ಪೂಜಾರಿ, ಚಿತ್ತಾಪೂರ ತಹಶೀಲ್ದಾರ ಅಮರೇಶ ಬಿರಾದಾರ, ತಾಲೂಕ ಪಂಚಾಯತ್ ಇ.ಓ. ನೀಲಗಂಗಾ ಬಬಲಾದ ಸೇರಿದಂತೆ ಮೊದಲಾದ ಅಧಿಕಾರಿಗಳಿದ್ದರು.