ಕಲಬುರಗಿ: ಜಿಲ್ಲೆಯಲ್ಲಿ ನಿಯಮ ಉಲ್ಲಂಘಿಸಿ ಬೀಜ ಮತ್ತು ರಸಗೊಬ್ಬರ ಮಾರಾಟ ಮಾಡುತ್ತಿದ್ದ 11 ಕೃಷಿ ಮಾರಾಟ ಮಳಿಗೆಗಳ ಪರವಾನಿಗೆಯನ್ನು ಅಮಾನತ್ತು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.
ಜಂಟಿ ಕೃಷಿ ನಿರ್ದೇಶಕರು ಹಾಗೂ ಬೀಜ ಪರಿವೀಕ್ಷಕರು ನೇತೃತ್ವದ ತಂಡ ಕಳೆದ ಒಂದು ವಾರದಿಂದ ಜಿಲ್ಲೆಯ ವಿವಿಧ ತಾಲೂಕಿನ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ದಿಢೀರ ದಾಳಿ ಮಾಡಿ ತಪಾಸಣೆ ಮಾಡಿದಾಗ ಬೀಜ ಅಧಿನಿಯಮ-1966 ಹಾಗೂ ಬೀಜಗಳ (ನಿಯಂತ್ರಣ) ಆದೇಶ-1983 ಉಲ್ಲಂಘಿಸಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಕಲಬುರಗಿ ನಗರದ ನೆಹರು ಗಂಜ್ ಪ್ರದೇಶದ ಓಂಪ್ರಕಾಶ ಶ್ರೀನಿವಾಸ್ & ಸನ್ಸ್ ಮತ್ತು ನೀಲಾ ಎಂಟರ್‍ಪ್ರೈಸೆಸ್, ಜೇವರ್ಗಿ ತಾಲೂಕಿನ ಶ್ರೀ ಸಾಯಿ ಟ್ರೇಡರ್ಸ್ ಜೇವರ್ಗಿ ಮತ್ತು ಸೊನ್ನ ಗ್ರಾಮದ ಸೌದಾಗರ್ ಟ್ರೇಡರ್ಸ್, ಯಡ್ರಾಮಿ ಪಟ್ಟಣದ ಭಾಗ್ಯವಂತಿ ಅಗ್ರೋ ಏಜೆನ್ಸಿಸ್ ಹಾಗೂ ಅಫಜಲಪೂರ ಪಟ್ಟಣದ ಗೊಲ್ಲಾಳೇಶ್ವರ ಅಗ್ರೋ ಏಜೆನ್ಸಿಸ್ ಬೀಜ ಮಾರಾಟ ಮಳಿಗೆಗಳ ಪರವಾನಿಗೆಯನ್ನು ನಿಲಂಬನೆ/ ಅಮಾನತ್ತಿನಲ್ಲಿಟ್ಟು ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಅವರೊಂದಿಗೆ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇನ್ನು ರಸಗೊಬ್ಬರ ನಿಯಂತ್ರಣ ಆದೇಶ-1985ರ ನಿಯಮಾವಳಿ ಉಲ್ಲಂಘನೆ ಹಿನ್ನೆಲೆಯಲ್ಲಿ ಚಿಂಚೋಳಿ ತಾಲೂಕಿನ ಸುಲೇಪೇಟ್ ಗ್ರಾಮದ ಕೇತಕಿ ಸಂಗಮೇಶ್ವರ ಕೃಷಿ ಸೆಂಟರ್ ಮತ್ತು ವೀರಭದ್ರೇಶ್ವರ ಕೃಷಿ ಸೆಂಟರ್ ಮತ್ತು ಜೇವರ್ಗಿ ತಾಲೂಕಿನ ದಂಡಗುಂಡಾ ಬಸವೇಶ್ವರ ಅಗ್ರೋ ಏಜನ್ಸಿ ಜೇವರ್ಗಿ ಮತ್ತು ಜೇರಟಗಿಯ ಶ್ರೀ ಕರಿಸಿದ್ದೇಶ್ವರ ಟ್ರೇಡರ್ಸ್ ಚಿಲ್ಲರೆ ರಸಗೊಬ್ಬರ ಮಾರಾಟ ಮಳಿಗೆಗಳ ಪರವಾನಿಗೆ ಸಹ ಅಮಾನತ್ತು ಮಾಡಲಾಗಿದೆ.
ಹೆಚ್ಚಿನ ದರದಲ್ಲಿ ಮಾರಾಟ ಮಾಡಿದಲ್ಲಿ ದೂರು ಕೊಡಿ: ಅಮಾನತ್ತು ಮಾಡಲಾದ ಮೇಲ್ಕಂಡ ಬೀಜ ಮತ್ತು ರಸಗೊಬ್ಬರ ಮಳಿಗೆಯಲ್ಲಿ ರೈತರು ಬೀಜ ಮತ್ತು ರಸಗೊಬ್ಬರ ಖರೀದಿಸಬಾರದೆಂದು ತಿಳಿಸಿರುವ ಜಿಲ್ಲಾಧಿಕಾರಿಗಳು, ಸರ್ಕಾರ ನಿಗದಿಪಡಿಸಿದಂತೆ ಡಿ.ಎ.ಪಿ. ರಸಗೊಬ್ಬರ ಪ್ರತಿ ಬ್ಯಾಗಿಗೆ 1,350 ರೂ., ಯೂರಿಯಾ ರಸಗೊಬ್ಬರ ಪ್ರತಿ ಬ್ಯಾಗಿಗೆ 266 ರೂ. ಹತ್ತಿ (ಃoಟಟgಚಿಡಿಜ II) ಪ್ರತಿ ಪ್ಯಾಕೆಟ್‍ಗೆ 864 ರೂ. ದರಕ್ಕಿಂತ ಹೆಚ್ಚಿನ ದರಕ್ಕೆ ಯಾರಾದರು ಮಾರಾಟ ಮಾಡಿದಲ್ಲಿ ಹತ್ತಿರದ ರೈತ ಸಂಪರ್ಕ ಕೇಂದ್ತ ಅಥವಾ ಸಹಾಯಕ ನಿರ್ದೇಶಕರ ಕಚೇರಿಗೆ ದೂರು ಸಲ್ಲಿಸುವಂತೆ ರೈತರಲ್ಲಿ ಮನವಿ ಮಾಡಿದ್ದಾರೆ.