ಶಹಾಬಾದ: ತಾಲೂಕಿನ ಭಂಕೂರ ಗ್ರಾಮದ ಗ್ರಾಮ ದೇವತೆಯಾದ ಕೆರಿಯಮ್ಮ ದೇವಿಯ ಜಾತ್ರೆಯಲ್ಲಿ ಮಂದಿರದ ಪಕ್ಕದಲ್ಲಿರುವ ಗುಡ್ಡದಿಂದ ಬಂಡಿ ಓಡಿಸಿ ಹಾಗೂ ಕರಿ ಹರಿಯುವ ವಿಶಿಷ್ಟವಾದ ಕಾರ್ಯಕ್ರಮ ಕಾರ ಹುಣ್ಣಿಮೆ ನಿಮಿತ್ಯ ಶನಿವಾರ ಗ್ರಾಮದಲ್ಲಿ ಅಪಾರ ಭಕ್ತಾಧಿಗಳ ಮಧ್ಯೆ ಸಡಗರ – ಸಂಭ್ರಮದಿಂದ ನಡೆಯಿತು.
ಬಂಡಿ ಓಡಿಸಿ ಕರಿ ಹರಿದರು : ಕರಿ ಹರಿಯುವುದಕ್ಕಾಗಿ ಸುಮಾರು ದಿನಗಳಿಂದ ಜೋಡೆತ್ತುಗಳನ್ನು ಮೇಯಿಸಿ ಬಂಡಿಗೆ ಕಟ್ಟುತ್ತಾರೆ. ಅದರೂಳಗೆ ಖಡ್ಗದಾರಿಯಾದ ಕುಲಕರ್ಣಿ ಹಾಗೂ ಬಾರಕೋಲು ಹಿಡಿದ ಮಜ್ಜಿಗೆ ಮನೆತನದ ವ್ಯಕ್ತಿ ವಿಶೇಷ ಪೂಜೆ ಸಲ್ಲಿಸಿ ಸಂಜೆ ಮಂದಿರದ ಗುಡ್ಡದಿಂದ ಬಂಡಿ ಓಡುವ ಮನಮೋಹಕ ದೃಶ್ಯವನ್ನು ನೋಡಲು ಸಾವಿರಾರು ಜನರು ತುದಿಗಾಲಿನಲ್ಲಿ ನಿಂತ್ತಿತ್ತು. ಬಂಡಿ ಓಡುವ ರೋಮಾಂಚನ ನೋಟವನ್ನು ನೋಡಿ ದೇವಿಗೆ ಕೈ ಮುಗಿದು ಧನ್ಯಾರ್ಥತೆಯನ್ನು ಅನುಭವಿಸಿದರು.
ನಂತರ ಬಂಡಿಯೂ ಊರೊಳಗೆ ಪ್ರವೇಶಿಸಿ ಈಶ್ವರ ದೇವಸ್ಥಾನದ ಹತ್ತಿರ ಬಂದು ನಿಂತು ಅಗಸಿಗೆ ಕಟ್ಟಿದ ಸಿಂಗರಿಸಿದ ಹಗ್ಗವನ್ನು (ಕರಿ) ಹರಿಯುವ ರೋಮಾಂಚನ ದೃಶ್ಯವನ್ನು ನೋಡಲು ಸಾವಿರಾರು ಜನರು ಕಿಕ್ಕಿರಿದು ನಿಂತ್ತಿತ್ತು. ಖಡ್ಗದಾರಿಯಾದ ಕುಲಕರ್ಣಿ ಹಗ್ಗವನ್ನು ಕಡಿದಾಗ ಎಲ್ಲರೂ ಕರಿಹರಿಯಿತು ಎಂದು ಹರ್ಷೋದ್ಘಾರಗೈದರು.
ಬೆಳಿಗ್ಗೆಯಿಂದಲೇ ಉಪವಾಸವಿದ್ದ ಗ್ರಾಮಸ್ಥರು ಕರಿ ಹರಿದ ನಂತರವೇ ಉಪವಾಸವನ್ನು ಬಿಟ್ಟರು. ಈ ಪದ್ಧತಿ ಎಂದಿನಿಂತಲೂ ನಡೆದುಬಂದಿದೆ.ಅಲ್ಲದೇ ಬಂಧು ಮಿತ್ರರನ್ನು ನೆರೆ ಹೊರೆಯವರನ್ನು ಕರೆದು ಪ್ರಸಾದ ಸ್ವೀಕರಿಸುವ ಕ್ಷಣಗಳು ಗ್ರಾಮದ ತುಂಬೆಲ್ಲಾ ಕಂಡುಬಂದಿತು.ಅಲ್ಲದೇ ದೇವಿಯ ಜಾತ್ರೆಯಾಗುವವರೆಗೂ ಯಾರು ಬಿತ್ತನೆ ಕಾರ್ಯ ಕೈಗೊಳ್ಳುವುದಿಲ್ಲ. ಜಾತ್ರೆಯ ನಂತರವೇ ಈ ಗ್ರಾಮದ ಜನರು ಬಿತ್ತನೆ ಮಾಡುವುದು ಎಂದಿನಿಂದಲೂ ನಡೆದುಕೊಂಡು ಬದಿರುವುದು ಇಲ್ಲಿನ ವಿಶೇಷ ಪದ್ಧತಿಯಾಗಿದೆ. ಈ ಒಂದು ಜಾತ್ರೆಯಲ್ಲಿ ಎಲ್ಲಾ ಜಾತಿ ಜನಾಂಗದವರು ತಮ್ಮ ತಮ್ಮ ಚಾಜಾ ಮಾಡುತ್ತಾ ದೇವಿಗೆ ಸೇವೆ ಸಲ್ಲಿಸಿದರು.
ಗ್ರಾಮದ ಎಲ್ಲಾ ಸಮುದಾಯದ ಮುಖಂಡರು ಸೇರಿಕೊಂಡು ಜಾತ್ರೆಯನ್ನು ಯಶಸ್ವಿಗೊಳಿಸಿದರು.
ದೂರದ ಆಂದ್ರಪ್ರದೇಶ, ಗುಜರಾತ, ಮಹಾರಾಷ್ಟ್ರ ಹಾಗೂ ಸುತ್ತಮುತ್ತಲಿನ ಶಹಾಬಾದ, ವಾಡಿ,ರಾವೂರ, ಮುತ್ತಗಿ, ಶಂಕರವಾಡಿ, ವಾಡಾ ತಾಂಡಾ, ತರಿತಾಂಡಾ, ತೆಗನೂರ ಮುಗುಳನಾಗಾಂವ, ನಂದೂರ , ಅಲ್ದಿಹಾಳ, ಪೇಠಸಿರೂರ, ಗೋಳಾ,ಮಾಲಗತ್ತಿ ,ಶಹಾಬಾದ ಮುಂತಾದ ಗ್ರಾಮದ ಸಮಸ್ತ ಜನರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಜಾತ್ರೆಯ ನಿಮಿತ್ತ ಬಿಗಿ ಪೊಲೀಸ್ ಬಂದೋಬಸ್ತ ಮಾಡಲಾಗಿತ್ತು.