ಕಲಬುರಗಿ; ಪ್ರಸಕ್ತ ವರ್ಷ ಹೆಚ್ಚಿನ ಮಳೆ ನಿರೀಕ್ಷೆ ಹಿನ್ನೆಲೆಯಲ್ಲಿ ಪ್ರವಾಹದಿಂದ ಆಗಬಹುದಾದ ಜನ-ಜಾನುವಾರಗಳ ಹಾನಿ ತಪ್ಪಿಸುವುದು ನಮ್ಮೆಲ್ಲರಮೊದಲ ಆದ್ಯತೆಯಾಗಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚು ಮುತುವರ್ಜಿ ವಹಿಸಿ ಕೆಲಸ ಮಾಡಬೇಕು ಎಂದು ರಾಜ್ಯದ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಸೋಮವಾರ ಡಿ.ಸಿ.ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರವಾಹದಿಂದ ಹಾನಿಯಿಂದ ನಂತರ ಪರಿಹಾರ ನೀಡುವುದು ನಮ್ಮ ಕರ್ತವ್ಯ. ಆದರೆ ಅಷ್ಟೆ ನಮ್ಮ ಕೆಲಸದ ಸೀಮಿತವಲ್ಲ. ಬದಲಾಗಿ ಪ್ರವಾಹ ಮುನ್ನ ಜನರ ರಕ್ಷಣೆ ಮಾಡಿ ಪ್ರಾಣಿ, ಮಾನವ ಹಾನಿಯಾಗದಂತೆ ತಡೆಯುವುದು ಸರ್ಕಾರದ ಉದ್ದೇಶ. ಇದನ್ನರಿತು ಅಧಿಕಾರಿಗಳು ಕೆಲಸ ಮಾಡಬೇಕು ಎಂದರು.
ಪ್ರವಾಹ ಬಂದ ನಂತರ ತಯ್ಯಾರಿ ಮಾಡುವುದು ಬೇಡ. ಮಳೆ ಮುನ್ಸೂಚನೆ ಮಾಹಿತಿ ನೀಡುವುದು ಬಹಳಷ್ಟು ಸುಧಾರಣೆಯಾಗಿದೆ. ಇದರ ಆಧಾರದ ಮೇಲೆ ಪ್ರವಾಹ ಭೀತಿ ಇರುವ ನದಿ, ಜಲಾಶಯ ಪಕ್ಕದಲ್ಲಿನ ಜನ ಮತ್ತು ಜಾನುವಾರು ಮುಂಚಿತವಾಗಿಯೇ ರಕ್ಷಣೆಗೆ ಮುಂದಾಗಬೇಕು. ಕಂದಾಯ, ಆರ್.ಡಿ.ಪಿ.ಆರ್, ಪೊಲೀಸ್, ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳದಲ್ಲಿದ್ದು ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಬೇಕು. ಇದಕ್ಕಾಗಿ ಪ್ರತಿ ಗ್ರಾಮ ಪಂಚಾಯತಿಗೆ ತಾಲೂಕು ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಬೇಕು. ಕಾಳಜಿ ಕೇಂದ್ರದಲ್ಲಿ ಜನರಿಗೆ ಸೂಕ್ತ ಉಪಚಾರ ಮಾಡಬೇಕು ಎಂದರು.
ತಾಲೂಕಿನ ತಹಶೀಲ್ದಾರರು ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಮುಂದಾಳತ್ವ ವಹಿಸಬೇಕು. ಪೊಲೀಸ್, ಅಗ್ನಿಶಾಮಕ, ಅರ್.ಡಿ.ಪಿ.ಆರ್. ಹೀಗೆ ಎಲ್ಲ ಅಧಿಕಾರಿಗಳ ಸಹಾಯ ಪಡೆದು ಯುದ್ದೋಪಾದಿಯಲ್ಲಿ ಕೆಲಸ ಮಾಡಬೇಕೆಂದು ತಹಶೀಲ್ದಾರರಿಗೆ ಸಚಿವರು ನಿರ್ದೇಶನ ನೀಡಿದರು.
ಭೀಮಾ ಭೀತಿ ಕಲಬುರಗಿ, ವಿಜಯಪುರ ಜಿಲ್ಲೆಗೆ ಹೆಚ್ಚು. ಮಹಾರಾಷ್ಟ್ರದ ಸರ್ಕಾರದೊಂದಿಗೆ ಕಲಬುರಗಿ ಜಿಲ್ಲಾಡಳಿತ ಸತತ ಸಂಪರ್ಕದಲ್ಲಿರಬೇಕು. ವಿಭಾಗದ ಎಲ್ಲಾ ಜಿಲ್ಲೆಗಳಲ್ಲಿ ಅಧಿಕಾರಿಗಳನ್ನು ಪ್ರವಾಹ ಭೀತಿ ಗ್ರಾಮಗಳಿಗೆ ಈಗಲೆ ಭೇಟಿ ನೀಡಿ ಪ್ರವಾಹ ಬಂದಲ್ಲಿ ಆಗಬಹುದಾದ ಸಮಸ್ಯೆಗಳ ಬಗ್ಗೆ ಅಂದಾಜಿಸಿ ಅಗತ್ಯ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ವಿಭಾಗದ ಡಿ.ಸಿ. ಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು.
ಇನ್ನು ಪ್ರಕೃತಿ ವಿಕೋಪ ಹಿನ್ನೆಲೆಯಲ್ಲಿ ಕೈಗೊಳ್ಳುವ ತಾತ್ಕಾಲಿಕ ಪರಿಹಾರ ರೂಪದ ರಸ್ತೆ, ಅಂಗನವಾಡಿ, ಶಾಲೆ ಕಟ್ಟಡ ದುರಸ್ತಿ, ರಸ್ತೆ ಸಂಪರ್ಕ ಜೋಡಣೆ ಇದೆಲ್ಲ ಕಾಮಗಾರಿಗಳು ತಿಂಗಳೊಳಗೆ ಮುಗಿಸಬೇಕು. ಇದನ್ನು ವರ್ಷಗಟ್ಟಲೆ ಎಳೆದಾಡಿದರೆ ಅದಕ್ಕೆ ಅರ್ಥವಿಲ್ಲ ಎಂದು ಡಿ.ಸಿ.ಗಳಿಗೆ ಕಂದಾಯ ಸಚಿವರು ಖಡಕ್ ಸೂಚನೆ ನೀಡಿದರು.
ಕಂದಾಯ ಇಲಾಖೆ ಜನರಿಗೆ ಪೂರಕವಾಗಿ ಕೆಲಸ ಮಾಡಬೇಕೇ ಹೊರತು ಜನರ ಬದುಕಿಗೆ ಹೊರೆಯಾಗಬಾರದು. ಹಲವಾರು ಕಂದಾಯ ಪ್ರಕರಣಗಳಲ್ಲಿ ಜನರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ.ಇವರನ್ನ ಸಮಸ್ಯೆಗಳಿಂದ ಹೊರತರಬೇಕಾದ ಕೆಲಸ ತಳ ಹಂತದ ಅಧಿಕಾರಿಗಳು ಮಾಡಬೇಕಿದೆ ಎಂದರು.
ಜಿಲ್ಲಾವಾರು ಪ್ರಗತಿ ಪರಿಶೀಲನೆ ವೇಳೆಯಲ್ಲಿ ಕಲಬುರಗಿ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಮಾತನಾಡಿ ಜಿಲ್ಲೆಯಲ್ಲಿ 135 ಗ್ರಾಮ ಪ್ರವಾಹಕ್ಕೆ ತುತ್ತಾಗುವ ಸಮಸ್ಯಾತ್ಮಕ ಹಳ್ಳಿಗಳನ್ನು ಗುರುತಿಸಿ ಇದಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯನ್ನಾಗಿಸಿ ನೇಮಿಸಿದೆ. ಅಲ್ಲದೆ ತರಬೇತಿ ಸಹ ನೀಡಲಾಗಿದೆ. 2020ರಲ್ಲಿ ಉಜನಿ ಜಲಾಶಯದಿಂದ ಭೀಮಾ ನದಿಗೆ 8 ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟ ಕಾರಣ 11 ಹಳ್ಳಿಗಳು ತುಂಬಾ ಸಮಸ್ಯೆಯಾಗಿದ್ದವು. ಈ ಬಾರಿ ಪ್ರವಾಹ ನಿಯಂತ್ರಣಕ್ಕೆ ಮುಂಜಾಗ್ರತೆ ಕ್ರಮ ಕೈಗೊಂಡಿದ್ದೇವೆ. 65 ಕಡೆ ಕಾಳಜಿ ಕೇಂದ್ರ, 40 ಕಡೆ ಪ್ರಾಣಿಗಳಿಗೆ ಪುನರ್ವಸತಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಸಭೆಗೆ ವಿವರಿಸಿದರು.
ಯಾದಗಿರಿ ಡಿ.ಸಿ. ಡಾ.ಸುಶೀಲಾ ಬಿ. ಮಾತನಾಡಿ ತಮ್ಮ ಜಿಲ್ಲೆಯಲ್ಲಿ ಕೃಷ್ಣಾ, ಭೀಮಾ ನದಿ ಪ್ರವಾಹಕ್ಕೆ 80 ಹಳ್ಳಿ ಸಂಕಷ್ಟಕ್ಕೆ ಸಿಲುಕಬಹುದೆಂದು ಅಂದಾಜಿಸಿ ಪೂರ್ವಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು. ಬೀದರ ಜಿಲ್ಲೆಯಲ್ಲಿ ಪ್ರವಾಹಕ್ಕೆ ಹಳ್ಳಿ ಮುಳುಗಡೆಯಾಗುವುದಿಲ್ಲ. ಬದಲಾಗಿ ಜಿಲ್ಲೆಯಲ್ಲಿ ಬಹುತೇಕ ಮನೆಗಳು ಮಣ್ಣಿನಿಂದ ನಿರ್ಮಾಣ ಮಾಡಿದ್ದರಿಂದ ಸತತ ಮಳೆ ಬಿದ್ದಲ್ಲಿ ಮನೆ ಹಾನಿ ಜೊತೆಗೆ ಬೆಳೆ ಹಾನಿ ಹೆಚ್ಚಲಿದೆ ಎಂದು ಡಿ.ಸಿ. ಗೋವಿಂದರೆಡ್ಡಿ ತಿಳಿಸಿದರು. ಬಳ್ಳಾರಿಯಲ್ಲಿ 19, ಕೊಪ್ಪಳದಲ್ಲಿ 27 ಹಾಗೂ ವಿಜಯನಗರ ಜಿಲ್ಲೆಯಲ್ಲಿ 22 ಹಳ್ಳಿ ಸಮಸ್ಯಾತ್ಮಕ ಇವೆ ಎಂದು ಕ್ರಮವಾಗಿ ಡಿ.ಸಿ. ಪ್ರಶಾಂತಕುಮಾರ ಮಿಶ್ರಾ, ನಳಿನ್ ಕುಮಾರ ಅತುಲ್ ಹಾಗೂ ಎಂ.ಎಸ್.ದಿವಾಕರ ತಿಳಿಸಿದರು. ಇನ್ನುಳಿದಂತೆ ರಾಯಚೂರು ಜಿಲ್ಲೆಯಲ್ಲಿ ಬಹುತೇಕ ಎಲ್ಲಾ ತಾಲೂಕು ಪ್ರವಾಹಕ್ಕೆ ತುತ್ತಾಗುತ್ತವೆ. ಕಳೆದ 2009ರಲ್ಲಿ ನಾರಾಯಣಪುರ ಜಲಾಶಯದಿಂದ 6 ಲಕ್ಷ ನೀರು ಹರಿಬಿಟ್ಟಿದರಿಂದ ಪ್ರವಾಹ ಭೀತಿ ಎದುರಾಗಿತ್ತು. ಭೀತಿಯಿಂದ 70 ಹಳ್ಳಿ ಗುರುತಿಸಿದೆ ಎಂದು ಡಿ.ಸಿ. ಚಂದ್ರಶೇಖರ ನಾಯಕ್ ತಿಳಿಸಿದರು.
ಆಧಾರ್ ಸೀಡಿಂಗ್ ಜುಲೈ ಮಾಸಾಂತ್ಯಕ್ಕೆ ಡೆಡ್‌ಲೈನ್: ರಾಜ್ಯದಲ್ಲಿ 4 ಕೋಟಿ ಪಹಣಿಗಳಲ್ಲಿ ಈಗಾಗಲೆ 1.70 ಕೋಟಿ ಪಹಣಿಗೆ ಆಧಾರ್ ಸೀಡಿಂಗ್ ಆಗಿದೆ. ಉಳಿದಿದದನ್ನು ಅಭಿಯಾನದ ಮೂಲಕ ಜುಲೈ ಮಾಸಾಂತಕ್ಕೆ ಪೂರ್ಣಗೊಳಿಸಬೇಕು. ಇದರಿಂದ ಫ್ರಾಡ್ ತಪ್ಪಲಿದೆ ಜೊತೆಗೆ ಪರಿಹಾರ, ವರ್ಗಾವಣೆ, ಮುಟೇಷನ್ ಪ್ರಕ್ರಿಯೆ ಸರಳವಾಗಲಿದೆ. ಜನರಿಗೆ ಸರ್ಕಾರಿ ಸೇವೆ ಬೇಗ ಲಭ್ಯವಾಗಲಿದೆ ಎಂದ ಅವರು ಆಧಾರ್ ಸೀಡಿಂಗ್ ಪ್ರಕ್ರಿಯೆ ಉತ್ತಮ ಪ್ರಗತಿ ಸಾದಿಸಿದಕ್ಕೆ ಸಂತಸ ವ್ಯಕ್ತಪಡಿಸಿದ ಸಚಿವರು, ಉತ್ತಮವಾಗಿ ಕಾರ್ಯನಿರ್ವಹಿಸಿದ ವಿ.ಎ.ಗಳನ್ನು ಹುರಿದುಂಬಿಸಲು ಮೊದಲನೇ ಹಂತದಲ್ಲಿ ಇವರಿಗೆ ಲ್ಯಾಪಟಾಪ್ ವಿತರಣೆ ಮಾಡಬೇಕು ಎಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ ಕಠಾರಿಯಾ ಅವರಿಗೆ ಕಂದಾಯ ಸಚಿವರು ನಿರ್ದೇಶನ ನೀಡಿದರು.
ಸರ್ಕಾರಿ ಆಸ್ತಿ ರಕ್ಷಣೆಗೆ ಲ್ಯಾಂಡ್ ಬೀಟ್: ಸರ್ಕಾರಿ ಆಸ್ತಿ ಸಂರಕ್ಷಣೆಗೆ ಸರ್ಕಾರ ಮುಂದಾಗಿದ್ದು, ಈಗಾಗಲೆ 14.50 ಲಕ್ಷ ಸರ್ಕಾರಿ ಆಸ್ತಿ (ಕಂದಾಯ, ಸ್ಮಶಾನ, ಕೆರೆ ಆಸ್ತಿ) ಗುರುತಿಸಿದ್ದು, ಈ ಅಸ್ತಿ ಎಲ್ಲಿ, ಎಷ್ಟು ಅಳತೆಯಲ್ಲಿದೆ ಎಂಬ ನಿಖರ ಮಾಹಿತಿ ಇದೀಗ ನಮ್ಮ ಬೆರಳು ತುದಿಯಲಿ ಲಭ್ಯವಿದೆ. ಸುಮಾರು 10 ಲಕ್ಷ ಆಸ್ತಿ ಸ್ಥಳಕ್ಕೆ ವಿ.ಎ.ಗಳು ಭೇಟಿ ನೀಡಿ ಬೌಂಡರಿ ಫೆನ್ಸಿಂಗ್ ಮಾಡಿದ್ದಾರೆ. ಉಳಿದ ಕಾರ್ಯ ಪ್ರಗತಿಯಲ್ಲಿದೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ರೈತರ ಸಾಗುವಳಿ ಹೊರತುಪಡಿಸಿ ಸ್ಮಶಾನ, ಕೆರೆ ಒತ್ತುವರಿಯಾದಲ್ಲಿ ಅದನ್ನು ತಹಶೀಲ್ದಾರರು ಕೂಡಲೆ ತೆರವುಗೊಳಿಸಬೇಕು. ಮುಂದುವರೆದು ಆಸ್ತಿ ಸಂರಕ್ಷಣೆ ನಿಟ್ಟಿನಲ್ಲಿ ಪ್ರತಿ 3-4 ತಿಂಗಳಿಗೊಮ್ಮೆ ಗ್ರಾಮ ಅಡಳಿತಾಧಿಕಾರಿಗಳು ಈ ಅಸ್ತಿ ಸ್ಥಳಕ್ಕೆ ಭೇಟಿ ನೀಡಿ ತಪಾಸಿಸುವ ಲ್ಯಾಂಡ್ ಬೀಟ್ ಕಾರ್ಯಕ್ರಮ ಜಾರಿಗೆ ತರಲಾಗುತ್ತಿದೆ ಎಂದರು.
1,000 ವಿ.ಎ.,750 ಸರ್ವೇಯರ್ ಭರ್ತಿ: ರಾಜ್ಯದಲ್ಲಿ 1,000 ಗ್ರಾಮ ಆಡಳಿತಾಧಿಕಾರಿಗಳು, 750 ಸರ್ಕಸರಿ ಸರ್ವೇಯರ್ ಭರ್ತಿ ಪ್ರಕಿಯೆ ನಡೆದಿದೆ. ಇದರ ಜೊತೆಗೆ 34 ಎ.ಡಿ.ಎಲ್.ಆರ್ ನೇಮಕಾತಿ ಸಹ ನಡೆದಿದೆ. ಇದರಿಂದ ಸರ್ವೇಯರ್ ಇಲಾಖೆಗೆ ಬಲ ಬರಲಿದೆ. ಇದನ್ನು ಬಳಸಿಕೊಂಡು ಪ್ರಸ್ತುತ ಇರುವ 22 ಲಕ್ಷ ಮಲ್ಟಿ ಹೋಲ್ಡರ್ ಆರ್.ಟಿ.ಸಿ. ಗಳನ್ನು ಅವರವರಿಗೆ ಪ್ರತ್ಯೇಕವಾಗಿ ಪೋಡಿ ಮಾಡಿ ಆರ್.ಟಿ.ಸಿ. ಮಾಡಿಸಿ ಕೊಡಬೇಕಾಗಿದೆ. ಇದಕ್ಕಾಗಿ ರೋಡ್ ಮ್ಯಾಪ್ ಸಿದ್ಧಗೊಳಿಸಲಾಗುತ್ತಿದೆ ಎಂದರು.
ಕಲುಷಿತ ನೀರು ಪೂರೈಕೆಯಾಗಬಾರದು: ಮಳೆಗಾಲ ಹಿನ್ನೆಲೆಯಲ್ಲಿ ಕಲುಷಿತ ನೀರು ಪೂರೈಕೆ ಸಾಮಾನ್ಯ. ಆದರೆ ಇದನ್ನು ಮೆಟ್ಟಿ ನಿಂತು ಪ್ರತಿ ಹಳ್ಳಿ, ಪಟ್ಟಣದ ಸಾರ್ವಜನಿಕರಿಗೆ ಶುದ್ಧೀಕರಿಸಿದ ಕುಡಿಯುವ ನೀರು ಪೂರೈಸುವುದು ನಮ್ಮ ಜವಾಬ್ದಾರಿ. ಮುಖ್ಯಮಂತ್ರಿಗಳು ಇತ್ತೀಚಿನ ಕಲುಷಿತ ನೀರು ಸೇವನೆ ಪ್ರಕರಣಗಳಿಂದ ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಈ ಬಗ್ಗೆ ಗಂಭೀರವಾಗಿರಿ, ನಿಣ್ಕಾಳಜಿ ವಹಿಸಿದರೆ ಶಿಸ್ತು ಕ್ರಮ ಅನಿವಾರ್ಯ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಸರ್ಕಾರದ ಪ್ರಧಾನ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ವಿ. ರಶ್ಮಿ ಮಹೇಶ್, ಕಂದಾಯ ಇಲಾಖೆಯ ಆಯುಕ್ತ ಪಿ. ಸುನೀಲಕುಮಾರ, ನೋಂದಣಿ ಮಹಾ ಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತೆ ಡಾ.ಬಿ.ಆರ್.ಮಮತಾ, ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ, ಎಸ್.ಎಸ್.ವೈ. ನಿರ್ದೇಶಕ ರಂಗಪ್ಪಾ, ಕರ್ನಾಟಕ ಪಬ್ಲಿಕ್ ಲ್ಯಾಂಡ್ ಕಾರ್ಪೋರೇಷನ್ ಎಂ.ಡಿ ವಸಂತಕುಮಾರ, ಅಪರ ಪ್ರಾದೇಶಿಕ ಆಯುಕ್ತ ಇಲಿಯಾಸ್ ಅಹ್ಮದ್ ಇಸಾಮದಿ ಇದ್ದರು.