ಸುರಪುರ: ತಾಲೂಕಿನ ಎಲ್ಲಾ ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡುವಂತೆ ಹಾಗೂ ವಿವಿಧ ಗ್ರಾಮಗಳಿಗೆ ಬಸ್ ಓಡಿಸಲು ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರತಿಭಟನೆ ನಡೆಸಿ ಒತ್ತಾಯಿಸಿದರು.
ಎಬಿವಿಪಿ ತಾಲೂಕ ಘಟಕದ ಮುಖಂಡರು ನಗರದ ತಹಸಿಲ್ದಾರ್ ಕಚೇರಿ ಹಾಗೂ ಬಸ್ ಡಿಪೋಗೆ ತೆರಳಿ ಸಾಂಕೇತಿಕ ಪ್ರತಿಭಟನೆ ನಡೆಸಿ ಮಾತನಾಡಿ,ಈಗಾಗಲೇ ಶಾಲಾ ಕಾಲೇಜು ಆರಂಭಗೊಂಡು ಒಂದು ತಿಂಗಳಾಗಿದೆ,ಆದರೂ ವಿದ್ಯಾರ್ಥಿಗಳಿಗೆ ಇದುವರೆಗೂ ಬಸ್ ಪಾಸ್ ನೀಡಿಲ್ಲ ಇದರಿಂದ ವಿದ್ಯಾರ್ಥಿಗಳು ನಿತ್ಯವೂ ಶಾಲಾ ಕಾಲೇಜಿಗೆ ಆಗಮಿಸಲು ಪರದಾಡುವಂತಾಗಿದೆ.ಅಲ್ಲದೆ ತಾಲೂಕಿನ ಬಾದ್ಯಾಪುರ ಮಾರ್ಗವಾಗಿ ಶೆಟ್ಟಿಕೆರಾ ವರೆಗೆ,ಸಿದ್ದಾಪುರ ಮಾರ್ಗವಾಗಿ ರತ್ತಾಳ ಮುಖಾಂತರ ದೇವಿಕೇರಾಕ್ಕೆ ಹಾಗೂ ಜಾಲಿಬೆಂಚಿ,ಹೆಗ್ಗಣದೊಡ್ಡಿ ಸೇರಿದಂತೆ ತಾಲೂಕಿನ 21 ಗ್ರಾಮಗಳಿಗೆ ಸರಿಯಾದ ಸಮಯಕ್ಕೆ ಬಸ್ ಇಲ್ಲದೆ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಬರಲು ಸಾಧ್ಯವಾಗದೆ ತರಗತಿಯಿಂದ ವಂಚಿತರಾಗುತ್ತಿದ್ದಾರೆ,ಆದ್ದರಿಂದ ಕೂಡಲೇ ಎಲ್ಲಾ ಗ್ರಾಮಗಳಿಗೆ ಬಸ್ ಓಡಿಸಬೇಕು ಎಂದು ಆಗ್ರಹಿಸಿ ಒಂದು ವೇಳೆ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಎಬಿವಿಪಿ ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು.
ನಂತರ ಗ್ರೇಡ-2 ತಹಸಿಲ್ದಾರ್ ಮಲ್ಲಯ್ಯ ದಂಡು ಅವರ ಮೂಲಕ ತಹಸಿಲ್ದಾರರಿಗೆ ಹಾಗೂ ಬಸ್ ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘಟನೆಯ ನಗರಾಧ್ಯಕ್ಷ ಮಹಾಂತೇಶ ಸುಬೇದಾರ,ಕಾರ್ಯದರ್ಶಿ ವಿನೋದಕುಮಾರ ಯಾಳಗಿ,ತಿಮ್ಮಯ್ಯ,ಸುರೇಶ್.ಭಾಗಣ್ಣ,ಶ್ರಾವಣಕುಮಾರ,ಸುರೇಶ,ಭಾಗಪ್ಪ,ಮಹೇಶ,ಶಿವಶಕ್ತಿ,ಸಾಮಯ್ಯ,ದೇವರಾಜ ಕನ್ನೆಳ್ಳಿ ಸೇರಿದಂತೆ ಅನೇಕರಿದ್ದರು.