ಕೌಶಲ್ಯ ಕಲಿಕೆಯಿಂದ ಉತ್ತಮ ಅವಕಾಶ: ಪ್ರೊ. ರಾಜನಾಳ್ಕರ್ ಲಕ್ಷ್ಮಣ

0
98

ಗುವಿವಿಯಲ್ಲಿ ಪತ್ರಿಕಾ ದಿನಾಚರಣೆ ಹಾಗೂ ವಿದ್ಯಾರ್ಥಿ ಸಂಘ ಉದ್ಘಾಟನೆ

ಕಲಬುರಗಿ: ಪ್ರಸ್ತುತ ಪತ್ರಿಕೋದ್ಯಮ ಕ್ಷೇತ್ರ ವಿಸ್ತಾರವಾಗಿ ಬೆಳೆದಿದ್ದು, ಉದ್ಯೋಗ ಹೆಚ್ಚು ಸೃಷ್ಠಿಯಾಗುತ್ತಿವೆ. ಗುಣಾತ್ಮಕ ವರದಿ, ಕೌಶಲ್ಯ ಕಲಿಕೆ ಜೊತೆಗೆ ಸಮರ್ಪಣಾ ಮನೋಭಾವ ಬೆಳೆಸಿಕೊಳ್ಳಬೇಕು. ಕ್ರಿಯಾಶೀಲತೆ ಮತ್ತು ಕೌಶಲ್ಯ ಕಲಿಕೆಯಿಂದ ಉತ್ತಮ ಅವಕಾಶಗಳನ್ನು ಪಡೆಯಬಹುದು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ರಾಜನಾಳ್ಕರ್ ಲಕ್ಷ್ಮಣ ಅಭಿಪ್ರಾಯಪಟ್ಟರು.

ಗುಲಬರ್ಗಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ಹಾಗೂ ಸಂಶೋಧನಾ ವಿಭಾಗದಲ್ಲಿ ಆಯೋಜಿಸಿದ ಪತ್ರಿಕಾ ದಿನಾಚರಣೆ ಹಾಗೂ ಪತ್ರಿಕೋದ್ಯಮ ವಿಭಾಗದ ಹಳೆಯ ವಿದ್ಯಾರ್ಥಿಗಳ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

Contact Your\'s Advertisement; 9902492681

ಸಮಾಜಕ್ಕೆ ಅಪಾರ ಕೊಡುಗೆ ನೀಡುತ್ತಿರುವ ಪತ್ರಕರ್ತರ ಸೇವೆಯನ್ನು ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿ ಸ್ಮರಿಸುವುದು ತುಂಬಾ ಮುಖ್ಯ. ಹಗಲಿರುಳು ಸಮಾಜಕ್ಕೆ ಸತ್ಯ ಮತ್ತು ನಿಖರ ಸಂದೇಶ ನೀಡುವ ಮೂಲಕ ಜಾಗೃತಿ ಬೆಳೆಸುತ್ತಿರುವ ಪತ್ರಕರ್ತ ವೃತ್ತಿ ತುಂಬಾ ಜವಾಬ್ದಾರಿಯುತ ಕೆಲಸ. ಸಮಾಜದ ಅಬ್ಯುದಯಕ್ಕಾಗಿ ಮಿಡಿಯುತ್ತಿರುವ ಮಾಧ್ಯಮ ವರ್ಗದವರ ಸೇವೆಯಲ್ಲಿ ಶ್ರೇಷ್ಠತೆಯಿದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಪತ್ರಕರ್ತರಾಗಿ ಸಮಾಜ ಸೇವೆಗೆ ತೊಡಗಿಸಿಕೊಳ್ಳಿ. ವಿಭಾಗದ ಹಳೆಯ ವಿದ್ಯಾರ್ಥಿಗಳು ಸಕಾರಾತ್ಮಕ ಮನೋಭಾವನೆಯಿಂದ ವಿಭಾಗದ ಬೆಳವಣಿಗೆಗೆ ಶ್ರಮಿಸಬೇಕು ಎಂದು ಆಶಿಸಿದರು.

ಕಲಬುರಗಿ ದೇವತಾ ಆಸ್ಪತ್ರೆಯ ಖ್ಯಾತ ವೈದ್ಯೆ ಡಾ. ಮೇಘಾ ಕಮಲಾಪುರಕರ್ ಮಾತನಾಡಿ ಸಮುದಾಯದ ಆರೋಗ್ಯ ಕಾಪಾಡಬೇಕಾದರೆ ಮಾಧ್ಯಮಗಳು ಹಾಗೂ ಪತ್ರಿಕರ್ತರ ಸೇವೆ ಬಹಳ ಮುಖ್ಯ. ಸೂಕ್ತ ಸಂದರ್ಭಗಳಲ್ಲಿ ಆರೋಗ್ಯ ಮಾಹಿತಿಯನ್ನು ಪ್ರಕಟಿಸಿ ಜನರಿಗೆ ಅರಿವು ಮೂಡಿಸಬೇಕು. ವೃತ್ತಿಯಲ್ಲಿನ ಧಾವಂತದ ಜೊತೆಗೆ ಒತ್ತಡಗಳು ಪತ್ರಕರ್ತರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಆದರಿಂದ ಪತ್ರಕರ್ತರು ಆರೋಗ್ಯದ ಕಡೆಗೆ ಕಾಳಜಿವಹಿಸುವುದು ಬಹಳ ಅಗತ್ಯ. ಆನರಲ್ಲಿ ಆರೋಗ್ಯದಾಯಕ ಚಿಂತನೆ ಮತ್ತು ಆರೋಗ್ಯವರ್ಧಿತ ಮನೋಭಾವ ಬೆಳೆಸಲು ಮಾಧ್ಯಮಗಳು ಶ್ರಮಿಸಬೇಕಿದೆ ಎಂದರು.

ಪತ್ರಕರ್ತ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಡಾ. ಶಿವರಂಜನ ಸತ್ಯಂಪೇಟೆ ‘ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣ’ ಕುರಿತು ಮಾತನಾಡಿ ಪತ್ರಿಕಾ ದಿನ ಆಚರಣೆ ಸಂದರ್ಭದಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಜನರ ನಿರೀಕ್ಷೆಗೆ ತಕ್ಕಂತಹ ಸಕರಾತ್ಮಕ ಮತ್ತು ಸಮಾಜಮುಖಿ ವರದಿಗಳಿಂದ ಮಾತ್ರ ಪತ್ರಕರ್ತರಿಗೆ ಒಳ್ಳೆಯ ಹೆಸರು ಬರುತ್ತದೆ. ಜೊತೆಗೆ ಸಾರ್ಥಕಭಾವ ಮೂಡುತ್ತದೆ ಎಂದರು.

ಮಾಧ್ಯಮ ಕ್ಷೇತ್ರ ವೇಗವಾಗಿ ಬೆಳೆದು ನಾಗಲೋಟದಲ್ಲಿ ಸಾಗುತ್ತಿದೆ. ಅದರಲ್ಲೂ ಡಿಜಿಟಲ್ ಮಾಧ್ಯಮ ಸೇವೆಯಿಂದ ತಕ್ಷಣವೇ ಸುದ್ದಿ ಸಮಾಜಕ್ಕೆ ತಲುಪುತ್ತಿದ್ದು, ಇಡೀ ಸಮಾಜ ಮಾಧ್ಯಮ ಮತ್ತು ಪತ್ರಕರ್ತರನ್ನು ಗಮನಿಸುತ್ತಿದೆ. ಆದರಿಂದ ಖಚಿತ, ನಿಖರ ಮತ್ತು ನೈಜ ವರದಿಗಳನ್ನು ಜನರಿಗೆ ತಲುಪಿಸಬೇಕು. ಪತ್ರಿಕೋದ್ಯಮ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳು ವಿಭಿನ್ನ ಆಲೋಚನೆ, ಬರವಣಿಗೆಯಲ್ಲಿ ಪರಿಪಕ್ವತೆ ಬೆಳೆಸಿಕೊಂಡರೆ ಪ್ರಸಿದ್ಧ ಸಂಸ್ಥೆಗಳಲ್ಲಿ ಪತ್ರಕರ್ತರಾಗಬಹುದು ಎಂದರು.

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ಸಂಯೋಜನಾಧಿಕಾರಿ ಡಾ. ಸುರೇಶ್ ಜಂಗೆ ಅಧ್ಯಕ್ಷತೆ ವಹಿಸಿ ಮಾತನಾಡಿ ಹಳೆಯ ವಿದ್ಯಾರ್ಥಿ ಸಂಘ ಸ್ಥಾಪನೆ ಯಿಂದ ವಿಭಾಗದ ಬೆಳವಣಿಗೆ ಸಾಧ್ಯವಿದೆ. ಕೋರ್ಸಿಗೆ ಪೂರಕ ಪ್ರಾಯೋಗಿಕ ಕಲಿಕೆ ಮತ್ತು ವೃತ್ತಿ ಆಧಾರಿತ ಕಾರ್ಯಕ್ರಮ ಆಯೋಜಿಸಲಾಗುವುದು. ಇದರಿಂದ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು.

ಪತ್ರಕರ್ತ ಅರುಣ ಕದಂ ಅನಿಸಿಕೆ ಹಂಚಿಕೊಂಡರು. ಸಂಘದ ಅಧ್ಯಕ್ಷ ನಿಂಗಣ್ಣ ಉದನೂರು, ಅತಿಥಿ ಉಪನ್ಯಾಸಕರಾದ ಡಾ.ಕೆ.ಎಂ. ಕುಮಾರಸ್ವಾಮಿ, ಡಾ. ಸರ್ದಾರ ರಾಯಪ್ಪ ಇದ್ದರು. ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ಶಿಕ್ಷಕೇತರ ಸಿಬ್ಬಂದಿ ಭಾಗವಹಿಸಿದ್ದರು.

ವಿಭಾಗದ ಹಳೆಯ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕು. ಬೋರಮ್ಮ ಪ್ರಾರ್ಥಿಸಿದರು. ಡಾ. ಸಾಯಿಬಣ್ಣ ಗುಡುಬ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ರಾಜಕುಮಾರ್ ದಣ್ಣೂರು ಅತಿಥಿ ಪರಿಚಯಿಸಿದರು. ಡಾ. ಅಶೋಕ ಶರಣಪ್ಪ ನಿರೂಪಿಸಿದರು.

ಭರವಸೆಯಿಂದಲೇ ಪತ್ರಿಕೋದ್ಯಮ ಬೆಳೆಯುತ್ತಿದೆ. ಪತ್ರಕರ್ತರಿಗೆ ವೃತ್ತಿ ಎಷ್ಟು ಮುಖ್ಯವೋ, ಮಾನವೀಯತೆ ಅಷ್ಟೇ ಮುಖ್ಯ. ಕೆವಿನ್ ಕಾರ್ಟರ್ ಜೀವನ ಪತ್ರಕರ್ತರಿಗೆ ಒಂದು ಪಾಠವಾಗಿದೆ. ಕಾರ್ಯನಿರತ ಪತ್ರಕರ್ತರಿಗೆ ವೃತ್ತಿಯಲ್ಲಿ ಜಟಿಲತೆ ಮತ್ತು ಸಂದಿಗ್ಧತೆಗಳಿವೆ. ಸಾಂತ್ವನ ಮತ್ತು ಪ್ರೇರಣದಾಯಕ ವರದಿಗಳು ನೊಂದವರಿಗೆ ಸಮಾಧಾನ ತರುತ್ತವೆ. ಪತ್ರಿಕಾವೃತ್ತಿಗೆ ಬರುವ ವಿದ್ಯಾರ್ಥಿಗಳು ಓದುವ ಮತ್ತು ಕುತೂಹಲದ ಮನಸ್ಸಿರಬೇಕು. ಬರವಣಿಗೆ ರುಚಿ ರೂಢಿಸಿಕೊಳ್ಳಬೇಕು.- ಡಾ. ಶಿವರಂನ ಸತ್ಯಂಪೇಟೆ, ಪತ್ರಕರ್ತರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here