ವಚನಗಳ ಮೂಲಕ ಮಾನವೀಯ ಮೌಲ್ಯಗಳು ಬಿತ್ತಿದ ಬಸವಣ್ಣ: ಡಾ. ಸತ್ಯಂಪೇಟೆ

0
111

ಶಹಾಪುರ: 12 ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಮಾನವೀಯ ಮೌಲ್ಯಗಳನ್ನು ಬಿತ್ತಿದವರು ವಿಶ್ವಗುರು ಬಸವಣ್ಣನವರು,ಅವರ ವಚನಗಳು ಇಂದಿಗೂ ಆದರ್ಶಮಯವಾಗಿವೆ ಎಂದು ಲೇಖಕ ಪತ್ರಕರ್ತರಾದ ಡಾ. ಶಿವರಂಜನ ಸತ್ಯಂಪೇಟೆ ಹೇಳಿದರು.

ನಗರದ ಬೋರುಕಾ ಶಿಕ್ಷಣ ಸಂಸ್ಥೆಯಲ್ಲಿ ಸಗರದ ಕಲಾನಿಕೇತನ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ, ಕರ್ನಾಟಕ ಸುವರ್ಣ ಸಂಭ್ರಮಾಚರಣೆ ಮತ್ತು ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಘೋಷಣೆ ಮಾಡಿದ ಪ್ರಯುಕ್ತ ವಚನೋತ್ಸವ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

Contact Your\'s Advertisement; 9902492681

ಕಾಯಕ ದಾಸೋಹ,ಸಾಮಾಜಿಕ ನ್ಯಾಯದಂತ ಮೌಲ್ಯಗಳನ್ನು ಬಸವಣ್ಣನವರು ಈ ನಾಡಿಗೆ ಪರಿಚಯಿಸಿದ್ದಾರೆ. ಸತ್ಯ,ಅಹಿಂಸೆ,ನಿಸ್ವಾರ್ಥ,ಸ್ನೇಹ, ಪ್ರೀತಿ,ಪ್ರಾಮಾಣಿಕತೆ,ಇಂಥ ಹಲವಾರು ಬದುಕಿನ ಮೌಲ್ಯಗಳು ವಚನಗಳಲ್ಲಿ ನಾವು ಇಂದಿಗೂ ಕಾಣಬಹುದು.

ಮುಖ್ಯ ಅತಿಥಿಗಳು ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಸಿದ್ದರಾಮ ಹೊನ್ಕಲ್ ಮಾತನಾಡಿ, ವಚನ ಸಾಹಿತ್ಯವು ಆಧ್ಯಾತ್ಮಿಕ ಮತ್ತು ಸಾಹಿತ್ಯ ಪರಂಪರೆಯಲ್ಲಿ ಒಂದು ಅಮೂಲ್ಯ ಕೊಡುಗೆಯಾಗಿದ್ದು,ಸಾಮಾಜಿಕ ಹಾಗೂ ಧಾರ್ಮಿಕ ಮುಖಾಂತರ ಸಾಕಷ್ಟು ಬದಲಾವಣೆಗಳನ್ನು ತಂದಿವೆ ಹಾಗೂ ವಚನ ಸಾಹಿತ್ಯ ಆತ್ಮಶೋದನೆ ಮತ್ತು ಆತ್ಮಸಾಕ್ಷಾತ್ಕಾರದ ಪರಿಕಲ್ಪನೆಗಳನ್ನು ಸ್ಪಷ್ಟಪಡಿಸಿ, ಆಂತರಿಕ ಪರಿಶುದ್ಧಿಗೆ ಮಹತ್ವ ನೀಡಿವೆ,ಆದ್ದರಿಂದ ಪ್ರತಿಯೊಬ್ಬರೂ ವಚನ ಸಾಹಿತ್ಯವನ್ನು ಬದುಕಿನದುದ್ದಕ್ಕೂ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ವೇದಿಕೆ ಮೇಲೆ ದಿವ್ಯ ಸಾನಿಧ್ಯ ವಹಿಸಿದ ಫಕೀರೇಶ್ವರ ಮಠದ ಗುರುಪಾದ ಮಹಾಸ್ವಾಮಿಗಳು ಮಾತನಾಡಿ, ಈ ನಾಡಿನಲ್ಲಿ ಕಲೆ, ಸಾಹಿತ್ಯ,ಸಂಸ್ಕೃತಿ,ಶ್ರೀಮಂತ ವಾಗಿದ್ದು,ಅವುಗಳ ಮೇಲೆ ಮತ್ತಷ್ಟು ಬೆಳಕು ಚೆಲ್ಲುವ ರೀತಿಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ಜರುಗಲಿ ಎಂದು ಆಶೀರ್ವಚನ ನೀಡಿದರು. ಕಾರ್ಯಕ್ರಮವನ್ನು ಖ್ಯಾತ ವೈದ್ಯರು ಹಾಗೂ ಬೋರುಕಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಎಸ್.ಆರ್. ಶಿಣ್ಣೂರ ಸಸಿಗೆ ನೀರೆರುವುದರ ಮುಖಾಂತರ ಉದ್ಘಾಟಿಸಿದರು.

ಈ ಸಮಾರಂಭದ ವೇದಿಕೆಯ ಮೇಲೆ ಸಂಸ್ಥೆಯ ಕಾರ್ಯದರ್ಶಿಗಳಾದ ಅವಿನಾಶ್ ಶಿಣ್ಣೂರ, ಸಮಾಜ ಸೇವಕರಾದ ಸೋಮಶೇಖರ್ ನೀಲಪ್ಪನವರ, ಟ್ರಸ್ಟ್ ಅಧ್ಯಕ್ಷ ಬಸವರಾಜ ಶಿಣ್ಣೂರ ಪ್ರಾಸ್ತಾವಿಕ ಮಾತುಗಳಾಡಿದರು ಹಾಗೂ ಇನ್ನಿತರರು ಉಪಸ್ಥಿತರಿದ್ದರು,

ಇದೇ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕೊಡ ಮಾಡುವ ಜೀವಮಾನ ಸಾಧನೆಗಾಗಿ ಕೊಡ ಮಾಡುವ ದಿ. ವಿ.ಎನ್. ಕಾಗಲಕರ್ ಪ್ರಶಸ್ತಿಗೆ ಭಾಜನರಾದ ಡಾ. ಶಿವರಂಜನ ಸತ್ಯಂಪೇಟೆ ಹಾಗೂ ವಾರ್ಷಿಕ ಪ್ರಶಸ್ತಿ ಪುರಸ್ಕೃತ ಪ್ರಕಾಶ ದೊರೆ ಅವರನ್ನು ವಿಶೇಷವಾಗಿ ಸನ್ಮಾನಿಸಿ ಸತ್ಕರಿಸಲಾಯಿತು.

ಶಾಲೆಯ ಮುಖ್ಯ ಗುರುಗಳಾದ ಜೋಬಿನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಂತರ ಬೂದಯ್ಯ ಹಿರೇಮಠ ಅವರಿಂದ ಶಾಸ್ತ್ರೀಯ ಸಂಗೀತ, ಸ್ವಾತಿ ಕಲ್ಬುರ್ಗಿ ಅವರಿಂದ ಸುಗಮ ಸಂಗೀತ, ಸವಿತಾ ಅವರಿಂದ ಜಾನಪದ ಸಂಗೀತ,ದೇವರಾಜ ಅವರಿಂದ ತತ್ವಪದ, ಪ್ರದೀಪ್ ಪಾಟೀಲ್ ಅವರಿಂದ ವಚನ ಗಾಯನ,ಲಕ್ಷ್ಮಿ ಕುಂಬಾರ ಮತ್ತು ತಂಡದವರಿಂದ ಸಮೂಹ ಭರತನಾಟ್ಯ, ಚಂದ್ರಶೇಖರ ಮತ್ತು ತಂಡದವರಿಂದ ನೃತ್ಯ ರೂಪಕ, ಸಂತೋಷ್ ಮತ್ತು ತಂಡದವರಿಂದ ಜಾನಪದ ನೃತ್ಯ, ಹಲವಾರು ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು, ರುದ್ರಮುನಿ ಹಿರೇಮಠ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here