ಕಲಬುರಗಿ: ರಾಜ್ಯದ ಉಪ ಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಅವರು ಆಗಸ್ಟ್ 20 ರಂದು ಕಲಬುರಗಿ ನಗರದ ಪಿ.ಡಿ.ಎ. ಕಾಲೇಜಿನಲ್ಲಿ ಆಯೋಜಿಸಲಾಗಿರುವ ರಾಜೀವಗಾಂಧಿ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್ ಚಾಲನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಲಬುರಗಿಗೆ ಆಗಮಿಸುತ್ತಿದ್ದು, ಕಾರ್ಯಕ್ರಮ ಯಶಸ್ಸಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಡಿ.ಸಿ.ಬಿ.ಫೌಜಿಯಾ ತರನ್ನುಮ್ ಸೂಚನೆ ನೀಡಿದರು.
ಶನಿವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಅವರು, ಕಾರ್ಯಕ್ರಮದಲ್ಲಿ ಆರ್.ಡಿ.ಪಿ.ಆರ್. ಸೇರಿದಂತೆ ವಿವಿಧ ಇಲಾಖೆಯಿಂದ ಫಲಾನುಭವಿಗಳಿಗೆ ಸರ್ಕಾರಿ ಸೌಲಭ್ಯ ವಿತರಣೆ ಸಹ ನಡೆಯಲಿದ್ದು, ಫಲಾನುಭವಿಗಳನ್ನು ಕಾರ್ಯಕ್ರಮಕ್ಕೆ ಕರೆತರಬೇಕೆಂದು ಸೂಚಿಸಿದರು.
ಕೃಷಿ, ಪಶುಸಂಗೋಪನಾ, ಕಾರ್ಮಿಕ, ವಿಕಲಚೇತನ, ಡಿ.ಐ.ಸಿ., ಆರ್.ಡಿ.ಪಿ.ಆರ್ ಸೇರಿದಂತೆ ವಿವಿಧ ಇಲಾಖೆಗಳು ಫಲಾನುಭವಿಗಳಿಗೆ ನೀಡಲಾಗುವ ಸವಲತ್ತುಗಳ ಪಟ್ಟಿಯನ್ನು ಇಂದೇ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕೆಂದರು. ವೇದಿಕೆ ಕಾರ್ಯಕ್ರಮದಲ್ಲಿ ಆಯ್ದ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಡಿ.ಸಿ.ಎಂ. ಸೌಲಭ್ಯ ವಿತರಣೆ ಮಾಡಲಿದ್ದಾರೆ ಎಂದರು.
ಉಪಮುಖ್ಯಮಂತ್ರಿಗಳು ಭಾಗವಹಿಸುವ ಕಾರ್ಯಕ್ರಮ ಯಶಸ್ಸಿಗೆ ಎಲ್ಲಾ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಸೂಕ್ತ ಪೊಲೀಸ್ ಬಂದೋ ಬಸ್ತ್ ಒದಗಿಸಬೇಕು. ವೇದಿಕೆ ನಿರ್ವಹಣೆ, ಸ್ವಚ್ಚತೆ, ಪಾರ್ಕಿಂಗ್ ಎಲ್ಲವು ಅಚ್ಚುಕಟ್ಟಾಗಿ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವಾರ್ ಸಿಂಗ್ ಮೀನಾ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ರೂಪಿಂದರ್ ಸಿಂಗ್ ಕೌರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.